ETV Bharat / state

ರಾಜ್ಯ ಸರ್ಕಾರದ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬಿಜೆಪಿ ಆಕ್ರೋಶ

author img

By ETV Bharat Karnataka Team

Published : Jan 12, 2024, 4:44 PM IST

Updated : Jan 12, 2024, 4:56 PM IST

ಬಿಜೆಪಿ
ಬಿಜೆಪಿ

ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಬೆಂಗಳೂರು : ಹಾವೇರಿಯಲ್ಲಿ ಮಹಿಳೆಯ ಮೇಲೆ ನಡೆದ ಆಘಾತಕಾರಿ ಲೈಂಗಿಕ ದೌರ್ಜನ್ಯವು ರಾಜ್ಯ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟ ಪರಿಣಾಮವಾಗಿದೆ. ಯುವಕರು ಹಗಲಿನಲ್ಲಿ ಜೋಡಿಯೊಂದರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅಪಹರಣ ಮಾಡಿರುವ ಕೃತ್ಯವು ನಾಗರಿಕರ ಸುರಕ್ಷತೆಯಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಎಕ್ಸ್​ ಖಾತೆಯಲ್ಲಿ ಈ ಸಂಬಂಧ ಪೋಸ್ಟ್​​ ಮಾಡಲಾಗಿದ್ದು, ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳವು ಅತಿರೇಕದ ಕಾನೂನು ಬಾಹಿರತೆಯನ್ನು ತೋರುತ್ತದೆ. ಅಪರಾಧಿಗಳು ಪೊಲೀಸರ ಮೇಲೆ ಭಯವಿಲ್ಲದೆ ಧೈರ್ಯದಿಂದ ಓಡಾಡುತ್ತಿದ್ದಾರೆ. ಈ ಆತಂಕಕಾರಿ ಬೆಳವಣಿಗೆ ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೈತಿಕ ಪೊಲೀಸ್‌ ಗಿರಿಯು ರಾಜ್ಯದ ಜನರ ಭದ್ರತೆಗೆ ಅಪಾಯಕಾರಿ ಎಂದು ಬಿಜೆಪಿ ಹೇಳಿದೆ.

ಸಿಎಂ ಏಕೆ ಸಂತ್ರಸ್ಥೆ ರಕ್ಷಣೆಗೆ ಬಂದಿಲ್ಲ? : ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಸಂತ್ರಸ್ಥೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಏಕೆ ಈ ಸಂತ್ರಸ್ಥೆ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದು, ಈ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಸರ್ಕಾರ ನಿಂತಿದೆ ಎಂದು ಆರೋಪಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯಲ್ಲಿ ನಡೆದಿರುವ ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಸರ್ಕಾರ ಹಾಗು ಮುಖ್ಯಮಂತ್ರಿಗಳು ದ್ವಿಮುಖ ನೀತಿ ತೋರುತ್ತಿರುವುದು ಸ್ಪಷ್ಟವಾಗಿದೆ. ಕರಾವಳಿ ಪ್ರದೇಶದಲ್ಲಿನ ನೈತಿಕ ಪೊಲೀಸ್ ಗಿರಿ ವಿರುದ್ಧ ಗಟ್ಟಿ ದನಿ ಎತ್ತುವ ಸಿದ್ದರಾಮಯ್ಯ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ. ಆದರೆ, ಹಾವೇರಿಯಲ್ಲಿನ ನೈತಿಕ ಪೊಲೀಸ್ ಗಿರಿ ವಿರುದ್ಧ ಸಿಎಂ ತುಟಿಬಿಚ್ಚಿಲ್ಲ. ಒಂದೇ ಒಂದು ಶಬ್ದವನ್ನೂ ಆಡಿಲ್ಲ. ಪೊಲೀಸರಿಗೂ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ಬೊಮ್ಮಾಯಿ ಆಕ್ರೋಶ ಹೊರಹಾಕಿದರು.

ನೈತಿಕ ಪೊಲೀಸ್ ಗಿರಿಯಡಿ ಜಾಮೀನು ಸಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ನೀಡಿದ್ದ ಹೇಳಿಕೆಯಂತೆ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಪೊಲೀಸರು ಒಪ್ಪಿಲ್ಲ. ಹಾಗೂ ಗ್ಯಾಂಗ್ ರೇಪ್ ಕೇಸ್ ಹಾಕಲಿಲ್ಲ. ಆ ಮೂಲಕ ಆರೋಪಿಗಳ ರಕ್ಷಣೆಗೆ ಯತ್ನಿಸಲಾಗಿದೆ. ಆರು ಆರೋಪಿಗಳು ಸಮೀಪದಲ್ಲೇ ಇದ್ದರೂ ಮೂವರನ್ನು ಮಾತ್ರ ಬಂಧಿಸಿದ್ದು, ಮತ್ತೆ ಮೂವರು ತಲೆಮರೆಸಿಕೊಂಡಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ಸಂತ್ರಸ್ಥೆ 164 ಹೇಳಿಕೆ ನೀಡಿದ ನಂತರವೇ ಹಾವೇರಿ ಪೊಲೀಸರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯೊಂದೇ ಪ್ರಕರಣ ದಾಖಲಿಸಲು ಸಾಕಿತ್ತು. ಆರಂಭದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಪರಿಗಣಿಸಲಿಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗಿದೆ. ಆದರೆ ಮಾಧ್ಯಮಗಳು ಪ್ರಕರಣವನ್ನು ಮುಚ್ಚಿ ಹಾಕಲು ಬಿಟ್ಟಿಲ್ಲ. ಅದಕ್ಕಾಗಿ ಮಾಧ್ಯಮಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಇದನ್ನೂ ಓದಿ : ಹಾವೇರಿ: ಲಾಡ್ಜ್​ನಲ್ಲಿ ಜೋಡಿ ಮೇಲೆ ಹಲ್ಲೆ ಪ್ರಕರಣ; ಇಬ್ಬರ ಬಂಧನ, ಮೂವರಿಗಾಗಿ ಶೋಧ

Last Updated :Jan 12, 2024, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.