ETV Bharat / state

ರಾಜಮಾರ್ಗ ಹಿಡಿದ ಬಿಜೆಪಿ ಸೋತಿತು, ವಾಮಮಾರ್ಗ ಹಿಡಿದ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿತು: ಛಲವಾದಿ ನಾರಾಯಣಸ್ವಾಮಿ

author img

By

Published : Jul 11, 2023, 1:45 PM IST

Updated : Jul 11, 2023, 2:11 PM IST

bjp-member-chalavadi-narayana-swamy-slams-congress-govt
ರಾಜಮಾರ್ಗ ಹಿಡಿದ ಬಿಜೆಪಿ ಸೋತಿತು, ವಾಮ ಮಾರ್ಗ ಹಿಡಿದ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿತು: ಛಲವಾದಿ ನಾರಾಯಣಸ್ವಾಮಿ

ಗ್ಯಾರಂಟಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಜನರಿಗೆ ಮೋಸ ಮಾಡಿದೆ. ನುಡಿದಂತೆ ನಡೆಯಲಿಲ್ಲ, ಇದು ವಚನಭ್ರಷ್ಟ ಸರ್ಕಾರ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಿತು ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಬಿಜೆಪಿ ರಾಜಮಾರ್ಗದ ಮೂಲಕ ಚುನಾವಣೆ ಎದುರಿಸಿದರೂ ಪರಾಜಿತವಾಗಬೇಕಾಯಿತು. ಆದರೆ ರಾಜಮಾರ್ಗ ಬಿಟ್ಟು ವಾಮ ಮಾರ್ಗ ಹಿಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಗ್ಯಾರಂಟಿ ವಿಚಾರದಲ್ಲಿ ಸಹಿ ಮಾಡಿ ಜನರಿಗೆ ಕಾರ್ಡ್​ ಹಂಚಿದ್ದಿರಿ. ಈಗ ಷರತ್ತಿನ ಕಾರಣ ಹೇಳಿ ವಂಚಿಸುತ್ತಿದ್ದೀರಾ ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ದಿಗ್ವಿಜಯ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿ ಎಂದಿದ್ದಾರೆ. ಆದರೆ ನಮ್ಮ ಹಿರಿಯರು ಒಬ್ಬರ ಜೀವನದ ಉದ್ಧಾರಕ್ಕಾಗಿ ಸಾವಿರ ಸುಳ್ಳಿ ಹೇಳಿ ಒಂದು ಮದುವೆ ಮಾಡಿದರೆ ತಪ್ಪಿಲ್ಲ ಎಂದಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಸರ್ಕಾರ ತನ್ನಿ ಎಂದು ಎಲ್ಲೂ ಹೇಳಿಲ್ಲ. ಸಾವಿರ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಇಂತಹ ಸರ್ಕಾರಕ್ಕೆ ಅಭಿನಂದನೆ ಹೇಳಬೇಕಿಲ್ಲ ಎಂದು ಕುಟುಕಿದರು.

ಅಧಿಕಾರಕ್ಕೆ ಬರಲು ರಾಜ ಮಾರ್ಗವಿದೆ, ನ್ಯಾಯಮಾರ್ಗ, ನೀತಿಮಾರ್ಗ, ಧರ್ಮ ಮಾರ್ಗ ಎನ್ನುವ ಮಾರ್ಗಗಳಿವೆ. ನಾವು ರಾಜಮಾರ್ಗ ಹಿಡಿದೆವು. ಆದರೆ ಗೆಲುವು ಸಿಗಲಿಲ್ಲ, ಕಾಂಗ್ರೆಸ್ ರಾಜಮಾರ್ಗ ಬಿಟ್ಟು ವಾಮಮಾರ್ಗ ಹಿಡಿದು ಅಧಿಕಾರಕ್ಕೆ ಬಂತು. ವಾಮಮಾರ್ಗಕ್ಕೆ ಅಧಿಕಾರ ಸಿಕ್ಕಿತು. ಸಾಕಷ್ಟು ಭರವಸೆ ನೀಡಿದರು. ನುಡಿದಂತೆ ನಡೆಯಲಿಲ್ಲ, ಇದು ವಚನಭ್ರಷ್ಟ ಸರ್ಕಾರ, ನೂರು ಸುಳ್ಳು ಹೇಳಿ ಅದನ್ನೇ ಸತ್ಯವೆಂಬಂತೆ ಇವರು ಬಿಂಬಿಸಿದ್ದಾರೆ. ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್​ ಆರೋಪ ಮಾಡಿ ಸತ್ಯ ಎಂದು ನಂಬಿಸಿದರು. ಈಗ ಏನಾಯಿತು? ಸಿಡಿ, ಪೆನ್ ಡ್ರೈವ್ ಬರುತ್ತಿವೆ. ಉತ್ತಮ ಬದುಕಿಗೆ ಜನರು ಸ್ವಾಭಿಮಾನದ ಶ್ರಮದ ಹಾದಿ ಹಿಡಿಯಬೇಕು. ಉಚಿತ ಕೊಡುಗೆ ಹಾದಿ ಹಿಡಿಯಬಾರದು. ಬಡವರನ್ನು ಕೈಚಾಚುವ ರೀತಿಯಲ್ಲಿಯೇ ಇಟ್ಟಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

ಅಧಿಕಾರಕ್ಕೆ ಬರುವವರೆಗೂ ಆನೆ ತೋರಿಸಿ ಈಗ ನಾವು ತೋರಿಸಿದ್ದು ಆನೆಯಲ್ಲ, ಆನೆಯ ಬಾಲ ಎಂದು ಗ್ಯಾರಂಟಿ ವಿಚಾರದಲ್ಲಿ ಹೇಳುತ್ತಿದ್ದಾರೆ. ಇದನ್ನು ವಂಚನೆ ಎನ್ನಬಾರದಾ ಎಂದು ಪ್ರಶ್ನಿಸಿದರು. ನ್ಯಾ.ಸಂತೋಷ್ ಹೆಗಡೆಯವರು ಉಚಿತ ಕೊಡುಗೆಗಳು ಲಂಚಕ್ಕೆ ಸಮ ಎಂದಿದ್ದಾರೆ. ಆಮಿಷವೊಡ್ಡಿ ಮತ ಪಡೆಯುವುದನ್ನೂ ಲಂಚ ಎಂದಿದ್ದಾರೆ ಎಂದು ಗ್ಯಾರಂಟಿಗಳನ್ನು ಲಂಚಕ್ಕೆ ಹೋಲಿಕೆ ಮಾಡಿ ಕಾಂಗ್ರೆಸ್ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಅಧಿಕಾರಕ್ಕೆ ಬರಲು ಸಿಎಂ, ಡಿಸಿಎಂ ಭರವಸೆ ಪತ್ರಗಳಿಗೆ ಸಹಿ ಹಾಕಿ ಹಂಚಿದ್ದಾರೆ. ಅದು ಒಂದು ರೀತಿ ಒಪ್ಪಂದ ಇದ್ದಂತೆ. ಈಗ ಷರತ್ತು ಹಾಕಿ ಭರವಸೆಗಳ ಪೂರ್ಣ ಜಾರಿ ಮಾಡದೆ ವಂಚಿಸುತ್ತಿದ್ದಾರೆ. ಜನ ಈಗಾಗಲೇ ಇದರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಜನರಿಗೆ ವಂಚನೆ ಮಾಡುತ್ತಿರುವ ವಿರುದ್ಧ ನಾವು ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ಹೋರಾಟವನ್ನು ಸಮರ್ಥಿಸಿಕೊಂಡರು.

ಅನ್ನಭಾಗ್ಯಕ್ಕೆ ಅಕ್ಕಿ ಬದಲು ಹಣ ಕೊಡುವ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ಎಫ್​ಸಿಐ ಬಹಿರಂಗ ಟೆಂಡರ್​​ನಲ್ಲಿ ರಾಜ್ಯಗಳು ಭಾಗವಹಿಸುವುದಕ್ಕೆ ಕೇಂದ್ರ ನಿರ್ಬಂಧ ವಿಧಿಸಿದೆ. ಹಾಗಾಗಿ ನಾವು ಟೆಂಡರ್​ನಲ್ಲಿ ಭಾಗಿಯಾಗಲಿಲ್ಲ. ರಾಜ್ಯ ಸರ್ಕಾರಗಳು ಭಾಗಿಯಾಗದ ಕಾರಣ ಅಕ್ಕಿ ಟೆಂಡರ್ ಆಗದೆ ಎಫ್​ಸಿಐನಲ್ಲಿ ಕೊಳೆಯುತ್ತಿದೆ ಎಂದು ತಿರುಗೇಟು ನೀಡಿದರು.

ಇದಕ್ಕೆ ಟಕ್ಕರ್ ನೀಡಿದ ಛಲವಾದಿ ನಾರಾಯಣಸ್ವಾಮಿ, ಎಲ್ಲದಕ್ಕೂ ಒಂದು ನಿಯಮ ಎನ್ನುವುದಿದೆ. ಬಸ್ ಡಿಪೋದಲ್ಲಿ ಬಸ್​ಗಳು ಕೊಳೆಯುತ್ತಿವೆ. ಒಂದೆರಡು ಬೇಕು ಟೆಂಡರ್ ಹಾಕುತ್ತೇನೆ ಕೊಡುತ್ತೀರಾ?. ಕುಮಾರಕೃಪಾ ಅತಿಥಗೃಹದ ಆವರಣದಲ್ಲಿ ಕಾರುಗಳು ಕೊಳೆಯುತ್ತಿವೆ. ಒಂದೆರಡು ಬೇಕು ಕೊಡುತ್ತೀರಾ? ಎಂದು ಟಾಂಗ್ ನೀಡಿದರು.

ಶಕ್ತಿ ಯೋಜನೆ ಮೂಲಕ ಸಾರಿಗೆ ನಿಗಮಗಳು ಲಾಭಕ್ಕೆ ತಿರುಗಿವೆ ಎನ್ನುವುದು ನಿಜ. ಆದರೆ ಮಹಿಳೆಯರು ಪುಕ್ಕಟ್ಟೆ ಓಡಾಡುತ್ತಿರುವುದಕ್ಕೆ ಸರ್ಕಾರ ಹಣ ನೀಡುತ್ತಿದೆ. ಜನರ ತೆರಿಗೆ ಹಣ ಅದು, ಮಹಿಳೆಯರು ಫ್ರೀಯಾಗಿ ಬಸ್ಸಲ್ಲಿ ಓಡಾಡುತ್ತಿರುವುದಕ್ಕೆ ಸಾರಿಗೆ ನಿಗಮಗಳು ಲಾಭಕ್ಕೆ ಬಂದಿವೆ ಎನ್ನುವುದಾದರೆ ಪುರುಷರಿಗೂ ಫ್ರೀಯಾಗಿ ಓಡಾಡಲು ಬಿಡಿ. ಇನ್ನೂ ಲಾಭಕ್ಕೆ ಬರಲಿವೆ ಎಂದು ಟೀಕಿಸಿದರು. ಈಗ ಕೊಟ್ಟಿರುವ ಭರವಸೆ ಈಡೇರಿಸಿ, ಆದರೆ ಇನ್ಮುಂದೆ ಇಂತಹ ಭರವಸೆ ಕೊಡಬೇಡಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಲಹೆ ನೀಡಿದರು.

ಇದನ್ನೂ ಓದಿ : ಜಿಲ್ಲೆಗೊಂದು ಪದವಿ ವಸತಿ ಕಾಲೇಜು, CBSE ಶಾಲೆ ತೆರೆಯಲು ಚಿಂತನೆ: ಸಚಿವ ಮಹದೇವಪ್ಪ

Last Updated :Jul 11, 2023, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.