ETV Bharat / state

ಬಿಡುಗಡೆಯಾಗದ ಬರ ಪರಿಹಾರದ ಹಣ: ರಾಜಭವನದ ಕದ ತಟ್ಟಿದ ಬಿಜೆಪಿ

author img

By ETV Bharat Karnataka Team

Published : Jan 9, 2024, 3:52 PM IST

Updated : Jan 9, 2024, 4:15 PM IST

ಪ್ರತಿಪಕ್ಷ ನಾಯಕ ಆರ್​ ಅಶೋಕ್​ ಅವರನ್ನೊಳಗೊಂಡ ನಿಯೋಗವು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರನ್ನು ಭೇಟಿ ಮಾಡಿ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರು ನೀಡಿದರು.

bjp-delegation-met-governor-thavarchand-gehlot
ಬಿಡುಗಡೆಯಾಗದ ಬರ ಪರಿಹಾರದ ಹಣ : ರಾಜಭವನದ ಕದ ತಟ್ಟಿದ ಬಿಜೆಪಿ

ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ ಎಂದು ಆರೋಪಿಸಿರುವ ಬಿಜೆಪಿ ರಾಜಭವನದ ಕದ ತಟ್ಟಿದ್ದು, ಸರ್ಕಾರದ ರೈತ ಮತ್ತು ಕೃಷಿ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ದೂರು ನೀಡಿದೆ. ಕೂಡಲೇ ಬರ ಪರಿಹಾರದ ಹಣವನ್ನು ರೈತರಿಗೆ ಬಿಡುಗಡೆ ಮಾಡಿ ರೈತ ಸಮೂಹವನ್ನು ಉಳಿಸುವಂತೆ ಮನವಿ ಮಾಡಿದೆ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯ ಸರಕಾರದ ರೈತ ಮತ್ತು ಕೃಷಿ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ದೂರು ನೀಡಿದರು. ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಮುಖಂಡರನ್ನೊಳಗೊಂಡ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಪಕ್ಷ ನಡೆಸಿದ ರಾಜ್ಯದಲ್ಲಿನ ಬರ ಅಧ್ಯಯನದ ಕುರಿತ ವರದಿ ನೀಡಿದರು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದಿರುವ ಕುರಿತು ದೂರು ನೀಡಿ ಬರ ಪರಿಹಾರದ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಬೇಜವಾಬ್ದಾರಿಯುತ ಸರ್ಕಾರವಿದೆ. 600 -700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಅವರ ಕಡೆ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳು ಭೇಟಿ ಮಾಡಿಲ್ಲ. ಸಚಿವರು ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ಬರ ಬಂದು ಜನರೆಲ್ಲ ಗುಳೆ ಹೋಗುತ್ತಿದ್ದಾರೆ. ಬರ ಬಂದು ಇಷ್ಟು ದಿನ ಆದರೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. 2 ಸಾವಿರ ಹಣ ಕೊಡ್ತೇವಿ ಅಂದರು. ಅದನ್ನೂ ಕೊಟ್ಟಿಲ್ಲ. ರೈತರು ದಿಕ್ಕು ತೋಚದಂತಾಗಿದ್ದಾರೆ ಎಂದು ಹೇಳಿದರು.

ನಮ್ಮ ನೆರವಿಗೆ ಕೇಂದ್ರ ಸರ್ಕಾರ ಬಂದಿಲ್ಲ ಎಂದು ಮುಖ್ಯಮಂತ್ರಿ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಬೊಮ್ಮಾಯಿ ಸಿಎಂ ಆಗಿದ್ದಾಗ, ನಾನು ಕಂದಾಯ ಸಚಿವನಾಗಿದ್ದೆ.ಆಗಲೂ ಬರ ಬಂದಾಗ ಕೇಂದ್ರಕ್ಕೆ ಮನವಿ ಕೊಟ್ಟಿದ್ದೆವು. ಕೇಂದ್ರದ ಪರಿಹಾರಕ್ಕೆ ಕಾಯದೇ ನೇರ ನಗದು ವರ್ಗಾವಣೆ( DBT) ಮೂಲಕ 3 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇವೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಆದರೆ,ಇವರು ಕೊಡುತ್ತಿರುವುದು 100 ಕೋಟಿ ಮಾತ್ರ. ರೈತರ ಕಡೆಗಣನೆ ಇದರಿಂದ ಸ್ಪಷ್ಟವಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಬರ ಬರಲಿ, ನೆರೆ ಬರಲಿ. ತಕ್ಷಣ ಧಾವಿಸಿ ಪರಿಹಾರ ಕೊಟ್ಟರೆ ಸರ್ಕಾರ ಇದೆ ಅಂತ ಅರ್ಥ. ಇಲ್ಲದಿದ್ದರೆ ರೈತರ ಪಾಲಿಗೆ ಸರ್ಕಾರ ಇದ್ದೂ ಸತ್ತಂತೆ. ಹಾಗಾಗಿ ಈ ಸರ್ಕಾರ ರೈತರ ಪಾಲಿಗೆ ಸತ್ತಿದೆ. ಕೇಂದ್ರಕ್ಕೆ ಮನವಿ ಕೊಟ್ಟಿರುವ ಒಂದು ಪರ್ಸೆಂಟ್ ಕೂಡ ಇವರು ಪರಿಹಾರದ ರೂಪದಲ್ಲಿ ಹಣ ಕೊಟ್ಟಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಡಿಮ್ಯಾಂಡ್ ಮಾಡಿದಾಗ ಬಿಡುಗಡೆ ಮಾಡುತ್ತೇವೆ ಎಂದರು ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆ ಇಲ್ಲ. ಯಾರು ಅನ್ನ ಕೊಡ್ತಾರೆ, ಅವರ ಬಗ್ಗೆ ಕಾಳಜಿ ಇಲ್ಲದಿದ್ದರೆ ಆ ಸರ್ಕಾರ ಹೆಚ್ಚು ಕಾಲ‌ ಉಳಿಯಲ್ಲ ಎಂದರು.

ಇದನ್ನೂ ಓದಿ : ಲೋಕಸಭೆ ಚುನಾವಣೆ : ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಸಭೆ- ಮಲ್ಲಿಕಾರ್ಜುನ ಖರ್ಗೆ

Last Updated :Jan 9, 2024, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.