ETV Bharat / state

ಬೆಂಗಳೂರಿನಲ್ಲಿ ಕಾವೇರಿ ಹೋರಾಟಕ್ಕೆ ಭಾರಿ ಬೆಂಬಲ.. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ

author img

By ETV Bharat Karnataka Team

Published : Sep 26, 2023, 7:49 PM IST

Various organization leaders participated in the protest.
ಬೆಂಗಳೂರು ಬಂದ್‌ಗೆ ನೀಡಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆ ಮುಖಂಡರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು. ಎಎಪಿ, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ 150ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿತಭಟನೆಯಲ್ಲಿ ಭಾಗವಹಿಸಿದ್ದವು.

ಬೆಂಗಳೂರು: ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಹೀಗಾಗಿ ಜನರು ಸ್ವಯಂ ಪ್ರೇರಿತರಾಗಿ ಇಂದು ಬಂದ್​​ಗೆ ಬೆಂಬಲ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು. ಎಎಪಿ, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ 150ಕ್ಕೂ ಅಧಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಈ ವೇಳೆ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಇಂದು ಬಂದ್ ಕರೆ ನೀಡಿದ್ದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ರಾಜ್ಯ ಸರ್ಕಾರ ನ್ಯಾಯಾಲಯಕ್ಕೂ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿದೆ. ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಆದೇಶ ಹಿಂಪಡೆಯಬೇಕು. ಪ್ರಾಧಿಕಾರವನ್ನು ರದ್ದುಮಾಡಿ, ಸ್ವತಂತ್ರ ಪ್ರಾಧಿಕಾರವನ್ನು ರಚಿಸಬೇಕು. ಸದನದಲ್ಲಿ ಚರ್ಚೆ ಮಾಡಿ. ಅಲ್ಲಿ ಎಲ್ಲ ಶಾಸಕರು ತಮಿಳುನಾಡಿಗೆ ನೀರು ಬಿಡುವುದು ಸರಿ ಎಂದು ಹೇಳಿದ್ದೇ ಆದರೆ, ಅದನ್ನೂ ಸಾರ್ವಜನಿಕರ ಮುಂದಿಡಬೇಕು. ಬೆಳಗ್ಗೆಯೇ ಕುರುಬೂರು ಶಾಂತ್​​​ಕುಮಾರ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಏಕೆ?. ನಾವು ಜೈಲಿಗೆ ಹೋಗಲೂ ಕೂಡ ಸಿದ್ಧ ಎಂದು ಕಿಡಿಕಾರಿದರು.

ನೀರು ಬಿಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಲಿ: ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ನೀರು ಬಿಡಲ್ಲ ಎನ್ನುವ ಸರ್ಕಾರ, ರಾತ್ರೋರಾತ್ರಿ 5 ಸಾವಿರ ಕ್ಯೂಸೆಕ್​ ನೀರು ಬಿಟ್ಟು 3.5 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದಾಗಿ ಹೇಳುತ್ತಿದೆ. ರಾಜ್ಯ ಸರ್ಕಾರವೇ ತಮಿಳುನಾಡಿಗೆ ಬೆಂಬಲ ಸೂಚಿಸುವುದರ ಜೊತೆಗೆ ಕಾನೂನಿನ ಕುಣಿಕೆಗೆ ಹೆದರುತ್ತಿದೆ. ತಮ್ಮ ಅಧಿಕಾರದ ಬಗ್ಗೆ ಮಾತ್ರ ಯೋಚಿಸುತ್ತಿದೆ. ನೀರು ನಮ್ಮ ಹಕ್ಕು. ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನೀರು ಬಿಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಿ, ಉಭಯ ಸದನ ಕರೆದು ನೀರು ಬಿಡುವುದಿಲ್ಲ ಎಂದು ನಿರ್ಣಯ ಕೈಗೊಳ್ಳಲಿ. ಈಗ ನಡೆಯುತ್ತಿರುವ ಹೋರಾಟ ರಾಜಕೀಯವಲ್ಲ. ಸಂಕಷ್ಟದ ಸಮಯದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಬಂದ್‌ಗೆ ಬೆಂಬಲ ನೀಡಿದ್ದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ: ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ ಅವರು, ಪ್ರತಿ ಬಾರಿಯೂ ಚುನಾವಣೆಯಲ್ಲಿ ಮತದಾರರು ಯೋಗ್ಯರನ್ನು ಆಯ್ಕೆ ಮಾಡಬೇಕಿದೆ. ಸಾರ್ವಜನಿಕರ ಹಿತಕ್ಕೆ ವಿರುದ್ಧವಾಗಿ ಮದ್ಯದಂಗಡಿ ತೆರೆಯಲು ಮುಂದಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು. ನೀರಿಗಾಗಿ ಹೋರಾಡಲು ಬೀದಿಗೆ ಬರಬೇಕು. ಎಲ್ಲರೊಂದಿಗೆ ಚರ್ಚಿಸಿ ಕರ್ನಾಟಕ ಬಂದ್ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೇಕಿದ್ದರೆ ರಕ್ತ ತಗೊಳ್ಳಿ, ಪ್ರಾಣ ತಗೊಳ್ಳಿ: ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಇಂದು ನಡೆದ ಬಂದ್ ರೈತರಿಗೆ, ಕನ್ನಡಿಗರಿಗಾಗಿ ಆಗಿದೆ. ಹೀಗಾಗಿ ಇಂದಿನ ಬಂದ್ ಗೆ ಭಾರಿ ಬೆಂಬಲ ಸಿಕ್ಕಿದೆ. ಕರ್ನಾಟಕ ಕಂಡರಿಯದ ಬೆಂಬಲವನ್ನು ಮಾಧ್ಯಮಗಳು ನಮ್ಮ ಹೋರಾಟಕ್ಕೆ ನೀಡುತ್ತಿವೆ. ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬೇಕಿದ್ದರೆ ಜೈಲಿಗೆ ಕಳುಹಿಸಿ, ರಕ್ತ ತಗೊಳ್ಳಿ, ಪ್ರಾಣವನ್ನು ತಗೊಳ್ಳಿ. ಆದರೆ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ. ನಮ್ಮ ಹೋರಾಟ ಬೆಂಗಳೂರು ಮತ್ತು ಕರ್ನಾಟಕದ ಜೀವನದಿ ಕಾವೇರಿಗಾಗಿ ಎಂದು ಘೋಷಿಸಿದರು.

ಇದನ್ನೂಓದಿ: ಡಿಎಂಕೆ ಹಿತ ಕಾಯಲು ಸರ್ಕಾರ ರಾಜ್ಯದ ಹಿತ ಬಲಿ ಕೊಟ್ಟಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.