ETV Bharat / state

ಸರ್ಕಾರಗಳು ನೀಡುವ ಭರವಸೆಗಳ ವಿಚಾರ; ನಿಲ್ಲದ ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಸಮರ

author img

By

Published : Jul 13, 2023, 5:11 PM IST

ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಿಲ್ಲ ಎಂಬ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆಯಿತು.

ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ
ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ

ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಸಮರ

ಬೆಂಗಳೂರು : ಸರ್ಕಾರಗಳು ನೀಡುವ ಭರವಸೆಗಳ ಅನುಷ್ಠಾನ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪದೇ ಪದೇ ವಾಗ್ವಾದ, ಮಾತಿನ ಸಮರ ವಿಧಾನಸಭೆಯಲ್ಲಿ ಇಂದು ನಡೆಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್​ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಹೆಚ್ಚಿನ ನೆರವು ಕೊಟ್ಟಿಲ್ಲ ಎಂದು ಆರೋಪಿಸಿದ್ದು, ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.

ಈ ಸಂದರ್ಭದಲ್ಲಿ ಎದ್ದು ನಿಂತ ಬಿಜೆಪಿಯ ಹಿರಿಯ ಶಾಸಕ ಆರ್ ಅಶೋಕ್, ಈ ಹಿಂದೆ ಎನ್​ಡಿಎ ಸರ್ಕಾರ ಎಷ್ಟು ಕೊಟ್ಟಿದೆ. ಯುಪಿಎ ಸರ್ಕಾರ ಎಷ್ಟು ಕೊಟ್ಟಿತ್ತು ಎಂಬುದನ್ನು ಹೋಲಿಕೆ ಮಾಡಿ ಹೇಳಿದ್ದೇನೆ. ಯುಪಿಎಗಿಂತ ಐದು ಪಟ್ಟು ಹೆಚ್ಚಿನ ನೆರವನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದರು. ಇದಕ್ಕೆ ಸಚಿವರಾದ ಕೆ ಜೆ ಜಾರ್ಜ್ ಹಾಗು ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, 75 ವರ್ಷದಲ್ಲಿ ಏನೂ ಆಗಿಲ್ಲ ಎಂಬ ರೀತಿ ಹೇಳುತ್ತೀರಿ. ನೀವು ಬಂದ ಮೇಲೆ ಎಲ್ಲ ಆಗಿರುವುದೇ? ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಶಾಸಕರಾದ ಡಾ ಸಿ ಎನ್ ಅಶ್ವತ್ಥನಾರಾಯಣ, ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಸಚಿವ ಜಾರ್ಜ್ ಮಾತನಾಡಿ, ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಏನೂ ಮಾಡಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ನೀಡುವ ಭರವಸೆ ಏನಾಯಿತು ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ದಿನೇಶ್ ಗುಂಡೂರಾವ್, ಹಣಕಾಸು ಆಯೋಗದಿಂದ ರಾಜ್ಯಕ್ಕೆ ತೊಂದರೆಯಾದಾಗ ನಮ್ಮ ರಾಜ್ಯದಿಂದಲೇ ಆಯ್ಕೆಯಾದಾಗ ಸಚಿವರು ಕೊಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಮಧ್ಯಪ್ರವೇಶಿಸಿದ ಸಚಿವ ಶಿವರಾಜ್ ತಂಗಡಗಿ, ನಾವು ಮೂರು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ನೀವೆಷ್ಟು ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್​ ಮುನಿಯಪ್ಪ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಆಹಾರ ಭದ್ರತೆ ಕಾಯ್ದೆ ಎಂದು ಹಸಿದವರಿಗೆ ಅನ್ನ ನೀಡುವ ಕೆಲಸವಾಯಿತು. ಉದ್ಯೋಗ ಇಲ್ಲದವರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭ ಮಾಡಿ ಉದ್ಯೋಗ ನೀಡಲಾಯಿತು. ಆದರೆ ಪ್ರಧಾನಿ ಮೋದಿ ಅವರು ವಾರ್ಷಿಕ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು.

ಕಪ್ಪು ಹಣ ತಂದು ಜನರ ಖಾತೆಗಳಿಗೆ 15 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿದ್ದರು ಎಂದು ಹೇಳುತ್ತಿದ್ದಂತೆ ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ, ಸುಳ್ಳು ಹೇಳಬೇಡಿ, ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಆರ್. ಅಶೋಕ್ ಮಾತನಾಡಿ, ಪ್ರಧಾನಿಯವರು ಸ್ವಿಸ್ ಬ್ಯಾಂಕ್​ನಿಂದ ಹಣ ತರುವುದಾಗಿ ಹೇಳಿದ್ದರು ಎಂದಾಗ, ಮುನಿಯಪ್ಪ ಮಾತು ಮುಂದುವರೆಸಿ, ನಾನು ವಿನಾಕಾರಣ ಆರೋಪ ಮಾಡುತ್ತಿಲ್ಲ. ಪ್ರಧಾನಿಯವರು ಸಂಸತ್​ನಲ್ಲಿ ಹೇಳಿದ್ದನ್ನು ನಾನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದರು.

ಸ್ಪರ್ಧೆಯಲ್ಲಿರುವ ನಾಯಕರು : ಶಿವಲಿಂಗೇಗೌಡರ ಬೆಂಬಲಕ್ಕೆ ನಿಂತ ಮಾಜಿ ಉಪಮುಖ್ಯಮಂತ್ರಿ ಹಾಗು ಕಾಂಗ್ರೆಸ್​ ಶಾಸಕ ಲಕ್ಷ್ಮಣ್ ಸವದಿ, ಸತ್ಯಾಂಶ ಹೇಳುವಾಗ ಕೇಂದ್ರದ ಕಡೆ ಬೊಟ್ಟು ಹೇಳುತ್ತೀರಿ. ಅವರೆಲ್ಲ ಸ್ಪರ್ಧೆಯಲ್ಲಿದ್ದಾರೆ. ಹೆಚ್ಚು ಮಾತನಾಡಿದಷ್ಟು ಹೆಚ್ಚು ಅಂಕ ಬರುತ್ತದೆ. ಅದಕ್ಕಾಗಿ ಅವರು ಪದೇ ಪದೇ ಎದ್ದು ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ, ನೀವು ಕಾಂಗ್ರೆಸ್​ಗೆ ಹೋಗಿದ್ದಕ್ಕೆ ಏನು ಬಹುಮಾನ ಸಿಕ್ತು ಎಂದರು. ಅದಕ್ಕೆ ಸವದಿಯವರು ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಆ ಕಡೆಯಿಂದ ಈ ಕಡೆ ಬಂದಿದ್ದೇನೆ ಎಂದು ಸಮರ್ಥಿಸಿಕೊಂಡರು.

ಸದನದಲ್ಲಿ ತಾಕತ್ತು ಪ್ರಸ್ತಾಪ : ಈ ಹಂತದಲ್ಲಿ ಶಿವಲಿಂಗೇಗೌಡ ಅವರು ಅಶ್ವತ್ಥನಾರಾಯಣರನ್ನು ಉದ್ದೇಶಿಸಿ, ನಿಮಗೆ ತಾಕತ್ತಿದ್ದರೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ನಿಂತು ಗೆದ್ದು ತೋರಿಸಿ ಎಂದು ಸವಾಲು ಹಾಕಿದರು. ಇದಕ್ಕೆ ಅಶ್ವತ್ಥನಾರಾಯಣ ಅವರು ತಾಕತ್ತು ಜೆಡಿಎಸ್​ದಾ, ಇಲ್ಲ ಕಾಂಗ್ರೆಸ್​ನದ್ದಾ ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಮಾತನಾಡಿ, ಉರಿಗೌಡ-ನಂಜೇಗೌಡರ ವಿಚಾರ ಪ್ರಸ್ತಾಪಿಸಿದರು. ಆಗ ಅಶ್ವತ್ಥನಾರಾಯಣ, ಕೆಂಪೇಗೌಡ ಸಮಾಧಿನೇ ಇಲ್ಲ ಎಂದು ಹೇಳಿದವರು ನೀವು ಎಂದು ಆರೋಪಿಸಿದರು. ಆಗ ಬಾಲಕೃಷ್ಣ ಅವರು ಹಗರುವಾಗಿ ಮಾತನಾಡಬೇಡಿ. ಗೌರವಯುತವಾಗಿ ಮಾತನಾಡಿ ಎಂದಾಗ ಇಬ್ಬರ ನಡುವೆ ಏರಿದ ದನಿಯಲ್ಲಿ ವಾಗ್ವಾದ ಉಂಟಾಯಿತು.

ಮತ್ತೆ ಮಾತು ಮುಂದುವರೆಸಿದ ಶಿವಲಿಂಗೇಗೌಡ, ಬಡವರಿಗೆ ಅನ್ನ ಕೊಡುವ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ಕೊಡಲಿಲ್ಲ. ಗೋದಾಮಿನಲ್ಲಿ ಅಕ್ಕಿ ಇದ್ದರೂ ರಾಜ್ಯಕ್ಕೆ ಕೊಡದೆ ಅನ್ಯಾಯ ಮಾಡಿದ್ದಾರೆ ಎಂದಾಗ ಮತ್ತೆ ಬಿಜೆಪಿ ಶಾಸಕರು ಅಡ್ಡಿಪಡಿಸಲು ಮುಂದಾದಾರು. ಆಗ ಅಷ್ಟೊಂದು ಹೊಟ್ಟೆ ಉರಿ ಇದ್ದರೆ ನಾನು ಮಾತನಾಡುವುದಿಲ್ಲ ಎಂದು ಶಿವಲಿಂಗೇಗೌಡ ಹೇಳಿದರು.

ಮಾತನಾಡಲು ಬಿಡಿ ಎಂದ ಸಿಎಂ : ಈ ಹಂತದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದವರು ಮಾತನಾಡಿದ್ದಾರೆ. ಅಶ್ವತ್ಥನಾರಾಯಣ ಅವರು ಉಪಮುಖ್ಯಮಂತ್ರಿಯಾಗಿದ್ದವರು ಮಧ್ಯ ಮಧ್ಯೆ ಅಡ್ಡಿಪಡಿಸಿದರೆ ಹೇಗೆ? ಶಿವಲಿಂಗೇಗೌಡರು ಮಾತನಾಡಲು ಬಿಡಿ. ಒಂದು ವೇಳೆ ವಿಷಯಾಂತರವಾಗಿದ್ದರೆ ಕ್ರಿಯಾಲೋಪದ ಮೂಲಕ ಹೇಳಿ. ಶಿವಲಿಂಗೇಗೌಡರು ಮಾತನಾಡಿದ ನಂತರ ನೀವೂ ಮಾತನಾಡಿ ಎಂದರು. ಅದಕ್ಕೆ ಅಶ್ವತ್ಥನಾರಾಯಣ ಅವರು, ಶಿವಲಿಂಗೇಗೌಡರು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಿಲ್ಲ, ಬಜೆಟ್ ಮೇಲೆ ಮಾತನಾಡುತ್ತಿದ್ದಾರೆ. ನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ ಮಧ್ಯಪ್ರವೇಶ ಮಾಡುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಏನು ಬೇಕಾದರೂ ಹೇಳಬಹುದೇ? : ಬಿಜೆಪಿಯ ಮತ್ತೊಬ್ಬ ಶಾಸಕ ಸಿ ಸಿ ಪಾಟೀಲ್, ಮುಖ್ಯಮಂತ್ರಿಗಳು ಡೋಂಟ್ ಅಲೌ ಹಿಮ್ ಟು ಸ್ಪೀಕ್ ಎಂದು ನಿರ್ದೇಶನ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಮುಖ್ಯಮಂತ್ರಿ ಇದು ಅಸಂಸದೀಯವೇ ಎಂದು ಪ್ರಶ್ನಿಸಿ, ಪ್ಲೀಸ್ ಡೋಂಟ್ ಅಲೋ ಹಿಮ್ ಟು ಸ್ಪೀಕ್ ಎಂದು ಹೇಳಿರುವುದಾಗಿ ಸಮರ್ಥಿಸಿಕೊಂಡರು. ಆಗ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡಿ, ಪ್ಲೀಸ್ ಸೇರಿಸಿ ಏನು ಬೇಕಾದರೂ ಹೇಳಬಹುದೆ? ಪ್ಲೀಸ್ ಕಿಲ್ ಹಿಮ್ ಎಂದು ಅನ್ನಬಹುದೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಪ್ರಧಾನಿ ಮೋದಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವ ವಿಚಾರ: ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.