ETV Bharat / state

ಜ್ಯುವೆಲ್ಲರಿ ಶಾಪ್ ದರೋಡೆ ಪ್ರಕರಣ: ಹೈದರಾಬಾದ್​ನತ್ತ ಹೊರಟಿದ್ದ ಆರೋಪಿ ಸೆರೆ

author img

By ETV Bharat Karnataka Team

Published : Oct 13, 2023, 11:05 AM IST

Updated : Oct 13, 2023, 12:54 PM IST

arrest
ಜ್ಯುವೆಲ್ಲರಿ ಶಾಪ್ ದರೋಡೆ ಪ್ರಕರಣ

ವಿನಾಯಕ ಬಂಗಾರದ ಅಂಗಡಿಗೆ ನುಗ್ಗಿ 1 ಕೆ ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಕೇಸ್​ಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ವಿನಾಯಕ ಬಂಗಾರದ ಅಂಗಡಿ ದರೋಡೆ ಪ್ರಕರಣ

ಬೆಂಗಳೂರು : ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಪ್ರಕರಣದಲ್ಲಿ ಇದೀಗ ಒಬ್ಬ ಆರೋಪಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೃತ್ಯದ ಬಳಿಕ ಹೈದರಾಬಾದ್​ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಹುಸೇನ್​ ಎಂಬಾತನನ್ನು ಅರೆಸ್ಟ್​ ಮಾಡಲಾಗಿದ್ದು, ಆತನ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ದೊರೆಕಿದೆ. ಇನ್ನುಳಿದ ಆರೋಪಿಗಳಾದ ಸಿಕಂದರ್, ಶಿವ ಹಾಗೂ ವಿಕಾಸ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ‌.

ಸಣ್ಣಪುಟ್ಟ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವನಿಗೆ ಜೈಲಿನಲ್ಲಿ ಹೈದರಾಬಾದ್ ಮೂಲದ ಹುಸೇನ್​, ಸಿಕಂದರ್ ಹಾಗೂ ವಿಕಾಸ್​ನ ಪರಿಚಯವಾಗಿತ್ತು. ಒಟ್ಟಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಗುರುವಾರ ಬೆಳಗ್ಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್ ಅಂಗಡಿಗೆ ಬಂದಿದ್ದರು. ನಂತರ ಮಾಲೀಕ ಮನೋಜ್ ಲೋಹರ್ (30) ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣಾ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು, ಹೈದರಾಬಾದಿನತ್ತ ಹೊರಟಿದ್ದ ಹುಸೇನ್​ ಎಂಬಾತನನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ : ಬೆಂಗಳೂರು: ಅಂಗಡಿ ಮಾಲೀಕನಿಗೆ ಸುಳ್ಳು ಹೇಳಿ 1 ಕೆ.ಜಿಗೂ ಹೆಚ್ಚು ಚಿನ್ನ ದೋಚಿದ್ದ ಸೇಲ್ಸ್‌ಮ್ಯಾನ್ ಸೆರೆ

ಮಾಲೀಕನಿಗೆ ಸುಳ್ಳು ಹೇಳಿ ಚಿನ್ನ ದೋಚಿದ್ದ ಖದೀಮ ​: ಇಂತಹುದೇ ಇನ್ನೊಂದು ಪ್ರಕರಣ ಇತ್ತೀಚೆಗೆ ನಡೆದಿತ್ತು. ಚಿನ್ನ ಕೊಂಡೊಯ್ಯುತ್ತಿದ್ದ ಬ್ಯಾಗ್​ ಅನ್ನು ಯಾರೋ ಅಪರಿಚಿತರು ಕದ್ದೊಯ್ದರು ಎಂದು ಜ್ಯುವೆಲ್ಲರಿ ಮಾಲೀಕನಿಗೆ ಸುಳ್ಳು ಹೇಳಿ ಒಂದು ಕೆಜಿ ಚಿನ್ನ ದೋಚಿದ್ದ ಸೇಲ್ಸ್​ಮ್ಯಾನ್​ ಅನ್ನು ಇದೇ ತಿಂಗಳ 11 ರಂದು ಪೊಲೀಸರು ಬಂಧಿಸಿದ್ದರು. ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಅಭಿಷೇಕ್​ ಅನ್ನುವವರು ಚಿನ್ನದ ಮಳಿಗೆಯಲ್ಲಿ ರಾಜಸ್ತಾನ ಮೂಲದ ಲಾಲ್​ ಸಿಂಗ್​ ಎಂಬಾತ 7 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ. ಸೇಲ್ಸ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ಈತ, ಮಾಲೀಕನ ನಂಬಿಕೆ ಗಳಿಸಿದ್ದ. ಈ ನಂಬಿಕೆಯಿಂದಲೇ ಮಾಲೀಕ ಅಭಿಷೇಕ್​ ಅವರು ಲಾಲ್​ ಸಿಂಗ್​ ಕೈಯಲ್ಲಿ ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ 2 ಜ್ಯುವೆಲ್ಲರಿ ಶಾಪ್​ ಮಾಲೀಕರಿಗೆ ಕೊಟ್ಟು ಬರುವಂತೆ 1.262 ಕೆಜಿ ತೂಕದ ಚಿನ್ನಾಭರಣವನ್ನು ಕಳುಹಿಸಿ ಕೊಟ್ಟಿದ್ದರು.

ಚಿನ್ನ ತೆಗೆದುಕೊಂಡವನೇ ಬೆಂಗಳೂರಿನಲ್ಲಿರುವ ತನ್ನ ಸಹಚರರಿಗೆ ವಿಷಯ ತಿಳಿಸಿ ಚಿನ್ನ ದೋಚುವ ಯೋಜನೆ​ ಮಾಡಿದ್ದನು. ಮಾಲೀಕನಿಗೆ ಪೋನ್​ ಮಾಡಿ, ನೆಲ್ಲೂರಿನ ಕಾಳಹಸ್ತಿ ಬಳಿ ಯಾರೋ ಅಪರಿಚಿತರು ಗನ್​ ತೋರಿಸಿ, ಹಲ್ಲೆ ಮಾಡಿ ಚಿನ್ನ ಕದ್ದೊಯ್ದರು ಎಂದು ಹೇಳಿ ಆನಂತರ ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದನು. ಆದರೆ, ಮಾಲೀಕ ಅಭಿಷೇಕ್​ ಲಾಲ್​ ಸಿಂಗ್​ ಫೋನ್​ ಸ್ವಿಚ್​ ಆಫ್​ ಬರುತ್ತಿರುವುದು ಕಂಡು, ತಾವೇ ಕಾಳಹಸ್ತಿಗೆ ತೆರಳಿ ಆರೋಪಿಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ಪೊಲೀಸರಿಗೆ ದೂರು ನೀಡಿದ್ದರು. ಅನುಮಾನಗೊಂಡು ಲಾಲ್​ ಸಿಂಗ್​ನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಆರೋಪಿ ಲಾಲ್​ ಸಿಂಗ್​ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

Last Updated :Oct 13, 2023, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.