ETV Bharat / state

'ನಾನು ಮತ್ತೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ': ಮುಧೋಳದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ

author img

By

Published : Mar 23, 2023, 7:10 AM IST

ಬೀಳಗಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ನಿರಾಣಿಯವರು ನನ್ನನ್ನು ತಮ್ಮ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿಲ್ಲ. ನಾನು ಮತ್ತೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

cm-basavaraja-bommai-spoke-at-bagalkot
ನಾನು ಮತ್ತೆ ಸಿಎಂ ಆಗಿ ಬರುತ್ತೇನೆ : ಸಿಎಂ ಬೊಮ್ಮಾಯಿ

ಮುಧೋಳ ಪಟ್ಟಣದಲ್ಲಿ ಸಿಎಂ ಬೊಮ್ಮಾಯಿ

ಬಾಗಲಕೋಟೆ : "ನಾನು ಮತ್ತೆ ಸಿಎಂ ಆಗಿ ಬರುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, "ತಮ್ಮ ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಹೇಳುವಾಗ ನಾನು ಮತ್ತೆ ಸಿಎಂ ಆಗುತ್ತೇನೆ" ಎಂದು ನುಡಿದರು.

"ಜಿಲ್ಲೆಯ ಹುನಗುಂದ, ಮುಧೋಳ, ತೇರದಾಳದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಾಗಿವೆ. ಬೀಳಗಿಯಲ್ಲಿ ಅಷ್ಟೇ ಮೊತ್ತದ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಮುರುಗೇಶ ನಿರಾಣಿ ಅವರು ನನ್ನನ್ನು ತಮ್ಮ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿಲ್ಲ. ನಾನು ಮತ್ತೊಮ್ಮೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ" ಎಂದರು.

ಮಂಟೂರ ಏತನೀರಾವರಿ ಯೋಜನೆ ಲೋಕಾರ್ಪಣೆಗೊಳಿಸಿದ ಬಗ್ಗೆ ಮಾತನಾಡಿ, "ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬಾದಾಮಿ ಏತ ನೀರಾವರಿಗೆ ಚಾಲನೆ ಕೊಟ್ಟರು. ನಾವು ಯಾವುದೇ ಪಕ್ಷಬೇಧವಿಲ್ಲದೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ‌. ಬಾದಾಮಿ ತಾಲೂಕಿನ ರೈತರ ಹಿತದೃಷ್ಟಿಯಿಂದ ಯೋಜನೆ ಮಾಡಿದ್ದೇವೆ" ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧತೆ : " ಹಿಂದೆ ಸಿದ್ಧರಾಮಯ್ಯನವರು ಸಿಎಂ ಆಗಿದ್ದರು. ಅವರು ನೀರಾವರಿ ಯೋಜನೆ ಮಾಡಬೇಕಿತ್ತು. ಕೃಷ್ಣ ಮೇಲ್ದಂಡೆ ಯೋಜನೆಯ ರೈತರಿಗೆ ಅನುಕೂಲ ಕಲ್ಪಿಸಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಾವು ಇಂದು ಈ ಭಾಗದಲ್ಲಿ 21 ಗ್ರಾಮಗಳನ್ನು ಸ್ಥಳಾಂತರಿಸುತ್ತಿದ್ದೇವೆ. ಸಿದ್ಧರಾಮಯ್ಯ ಜಮೀನು ಸ್ವಾಧೀನಪಡಿಸಿಕೊಳ್ಳಲು ಏಕರೂಪ ದರ ನಿಗದಿ ಮಾಡಿ ಅಂದ್ರೂ ಮಾಡಲಿಲ್ಲ. ರೈತರಿಗೆ ಭೂ ಪರಿಹಾರದ ಒಂದು ಚೆಕ್ ಕೊಟ್ಟಿದ್ದರೆ ಸಿದ್ದರಾಮಯ್ಯ ತೋರಿಸಲಿ. ರೈತರಿಗೆ ಒಂದು ಚೆಕ್ ಕೂಡ ಕೊಡಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ
ನಾವು ಜಮೀನುಗಳಿಗೆ ದರ ನಿಗದಿ ಮಾಡಿ ಚೆಕ್ ಹಂಚುತ್ತಿದ್ದೇವೆ. ಇದು ಉತ್ತರ ಕರ್ನಾಟಕದ ಅಭಿವೃದ್ಧಿ ಬದ್ಧತೆ" ಎಂದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಬೊಮ್ಮಾಯಿ, "ಅವರು ಹಲವು ಘೋಷಣೆಗಳನ್ನು ಮಾಡುತ್ತಾರೆ. ನಾವೂ ಘೋಷಣೆ ಅಷ್ಟೇ ಅಲ್ಲ, ಅದರ ಅನುಷ್ಠಾನವನ್ನೂ ಮಾಡುತ್ತೇವೆ. ಅವರು ಗ್ಯಾರಂಟಿ ಕಾರ್ಡ್ ಎಂದು ಬೋಗಸ್ ಭರವಸೆ ಕೊಡುತ್ತಾರೆ. ನಮ್ಮ ಸರ್ಕಾರದ ಕೆಲಸಗಳೇ ನಮ್ಮ ಗ್ಯಾರಂಟಿ. ಕಾಂಗ್ರೆಸ್‌ನವರು ಮುಧೋಳ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಲಿ. ನಾವೂ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಸವಾಲೆಸೆದರು. ಎಸ್ಸಿ,ಎಸ್ಟಿ ಮೀಸಲಾತಿಯನ್ನು ಪ್ರತಿಶತ ನಾವು ಹೆಚ್ಚಿಗೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಕಳೆದ ಇಪ್ಪತ್ತು ವರ್ಷದಿಂದ ಏನೂ ಮಾಡಲಿಲ್ಲ. ನ್ಯಾಯ ಕೊಡಿಸಲು ನಾನು ಜೇನುಗೂಡಿಗೆ ಕೈ ಹಾಕಿದೆ. ಜೇನು ನನಗೆ ಕಡಿದರೂ ನಾನು ದೀನ ದಲಿತರಿಗೆ ಸಿಹಿಯನ್ನು ಕೊಡುತ್ತೇನೆ" ಎಂದರು.

ಕಿಸಾನ್​​ ಸಮ್ಮಾನ್​​ 6ನೇ ಕಂತು ಬಿಡುಗಡೆ: "ಕಿಸಾನ್ ಸಮ್ಮಾನ್​​ ಯೋಜನೆಯ ಆರನೇ ಕಂತಿನ‌ ಹಣವನ್ನು ಗಂಡು ಮೆಟ್ಟಿದ ನಾಡು‌ ಮುಧೋಳದಿಂದ ಬಿಡುಗಡೆ ಮಾಡಿದ್ದೇನೆ. ಇಡೀ ರಾಜ್ಯದಲ್ಲಿ ಏಕ ಕಾಲಕ್ಕೆ ರೈತರ ಖಾತೆಗೆ ಜಮಾ ಮಾಡಲಾಗಿದೆ" ಎಂದು ಹೇಳಿದರು. ಇದೇ ವೇಳೆ, ರನ್ನ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳನ್ನು ಪಡೆದ ಫಲಾನುಭವಿಗಳಿಗೆ ವಿತರಣೆ ಮಾಡಿದರು. ಮುಖ್ಯಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಎರಡನೇ ಕಂತಿನ ಮೊತ್ತವನ್ನು ರೈತರ ಖಾತೆಗಳಿಗೆ ಬಿಡುಗಡೆ ಗೊಳಿಸಿದರು. ರಾಜ್ಯ ಸರ್ಕಾರದಿಂದ 975 ಕೋಟಿ ರೂಪಾಯಿಗಳು ಬಿಡುಗಡೆ ಮಾಡಿದ್ದು, 48 ಲಕ್ಷ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ದೇಶ ವಿದೇಶದ ಜಾನಪದ ವಿಷಯಗಳು ಗೋಟಗೊಡಿ ವಿವಿಯಲ್ಲಿ ಸಿಗುವಂತಾಗಬೇಕು: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.