ದೇಶ ವಿದೇಶದ ಜಾನಪದ ವಿಷಯಗಳು ಗೋಟಗೊಡಿ ವಿವಿಯಲ್ಲಿ ಸಿಗುವಂತಾಗಬೇಕು: ಸಿಎಂ ಬೊಮ್ಮಾಯಿ

author img

By

Published : Mar 22, 2023, 10:56 PM IST

Updated : Mar 22, 2023, 11:08 PM IST

Gangamma Bommai Folk Artifacts Museum

ಶಿಗ್ಗಾಂವಿ ತಾಲೂಕಿನ ಗೋಟಗೊಡಿಯಲ್ಲಿ ಜಾನಪದ ವಿವಿಯಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯದ ಶಂಕು ಸ್ಥಾಪನೆ ಹಾಗೂ ಡಾ ಬಿ ಅರ್ ಅಂಬೇಡ್ಕರ್ ಕಲಾಭವನವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.

ದೇಶ ವಿದೇಶದ ಜಾನಪದ ವಿಷಯಗಳು ಗೋಟಗೊಡಿ ವಿವಿಯಲ್ಲಿ ಸಿಗುವಂತಾಗಬೇಕು: ಸಿಎಂ ಬೊಮ್ಮಾಯಿ

ಹಾವೇರಿ: ಮನುಷ್ಯ ಪರಿಪೂರ್ಣ ಬೆಳವಣಿಗೆ ಹೊಂದಬೇಕಾದರೆ, ಅದು ಜಾನಪದದಿಂದ ಮಾತ್ರ ಸಾಧ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೋಟಗೊಡಿಯಲ್ಲಿರುವ ಜಾನಪದ ವಿವಿಯಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯದ ಶಂಕು ಸ್ಥಾಪನೆ ಹಾಗೂ ಡಾ ಬಿ ಅರ್ ಅಂಬೇಡ್ಕರ್ ಕಲಾಭವನ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಬರುವ ದಿನಗಳಲ್ಲಿ ಯಾವುದೇ ದೇಶ ವಿದೇಶದ ಜಾನಪದದ ವಿಷಯದ ಮಾಹಿತಿ ಇಲ್ಲಿ ಸಿಗುವಂತಾಗಬೇಕು ಅನ್ನುವ ಉದ್ದೇಶದಿಂದ ಜಾನಪದ ವಿವಿ ಮಾಡಲಾಗಿದೆ ಎಂದು‌ ಸಿಎಂ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.

ಆಡುಭಾಷೆಯಲ್ಲಿ ಇರುವ ಹಾಡು, ಸಂಗೀತ ಅವತ್ತಿನ ಕಾಲದ ಬದುಕಿನ ಕಥೆ ಹೇಳ್ತಾವೆ. ರೈತಾಪಿ ವರ್ಗ, ನೇಕಾರರು, ದುಡಿಯುವ ವರ್ಗದ ವಸ್ತುಗಳನ್ನು ಸಂಗ್ರಹ ಇಲ್ಲಿ ಮಾಡಲಾಗುತ್ತಿದೆ. ನಾಗರಿಕತೆಯ ಜತೆಗೆ ಜಾನಪದ ಹೇಗೆ ಅದಕ್ಕೆ ಹೊಂದಿಕೊಂಡಿತು ತಿಳಿಸುವ ಕೆಲಸ ಆಗಬೇಕು ಹೇಳಿದರು.

ಇಡೀ ಉತ್ತರ ಕರ್ನಾಟದ ಜಾನಪದ ಕಲಾವಿದರಿಗೆ ಇಲ್ಲಿ ಅವಕಾಶ ಸಿಗಬೇಕು. ಜಾನಪದ ಕಲೆ ಜೀವಂತವಾಗಿರಬೇಕು ಅಂತ ಇಷ್ಟು ದೊಡ್ಡ ಕಲಾಮಂದಿರ ನಿರ್ಮಾಣ ಮಾಡಿದ್ದೇವೆ. ದೊಡ್ಡಾಟದಿಂದ ಹಿಡಿದು ವಿವಿಧ ಜಾನಪದ ಪ್ರದರ್ಶನಗಳು ಪ್ರದರ್ಶನ ಆಗಬೇಕು.ಕರ್ನಾಟಕದಲ್ಲಿ ಜಾನಪದ ಸಾಹಿತ್ಯ, ವಿವಿಧ ಕಲೆ, ಜಾನಪದ ಸಂಸ್ಕೃತಿ ಇಂದಿಗೂ ಮಾನ್ಯತೆ ಇದೆ ಎಂದು ಬೊಮ್ಮಾಯಿ ತಿಳಿಸಿದರು.

ಕೇಂದ್ರದ 1 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಮ್ ಸ್ಪಾಪಿಸಲಾಗುತ್ತಿದೆ. ಇದು ಜಾನಪದ ಪ್ರವಾಸಿ ತಾಣವಾಗಬೇಕು ಎಂಬ ಉದ್ದೇಶದಿಂದ ವಿಭಿನ್ನವಾಗಿ ಮ್ಯೂಸಿಯಮ್ ಸಿದ್ದಪಡಿಸಲು ಹೇಳಿದ್ದೇನೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

ಜಾನಪದ ವಿವಿಗೆ ಅಡಿಗಲ್ಲು ಹಾಕಿದ್ದು ನಾವೇ, ಇಂದು ಬಹಳ ಸಂತೋಷದಿಂದ ಕಲಾಭವನ ಉದ್ಘಾಟನೆ ಮಾಡಿದ್ದೇವೆ ಎಂದು ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿ, ಈ ಜಾನಪದ ವಿವಿ ನೌಕರಿ ಸೃಷ್ಟಿ ಮಾಡುವ ವಿವಿ ಅಲ್ಲ. ನಮ್ಮ ಜಾನಪದ ಸಂಸ್ಕೃತಿ ಶ್ರೀಮಂತ ಮಾಡುವ ವಿವಿ. ಜಾನಪದ ವಿವಿಯಲ್ಲಿ ಓದಿದ ಮಕ್ಕಳಿಗೆ ವಿಶೇಷ ಕೆಲಸ ಮಾಡಲು ಆರ್ಥಿಕ ನೆರವು ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.

ಜಾನಪದ ವಿವಿಗೆ ಕ್ಯಾಂಪಸ್ ಇಲ್ಲ.ಕ್ಯಾಂಪಸ್ ರಹಿತ ವಿವಿ ಇದು. ಜನ ಸಮುದಾಯ ಇರೋ ಕಡೆನೇ ಈ ವಿವಿ ಸ್ಥಾಪಿಸಲಾಗಿದೆ .ನಾಗರಿಕತೆ ಬೇರೆ ಸಂಸ್ಕೃತಿ ಬೇರೆ. ಮನೆಯಲ್ಲಿ ಮೊದಲು ಒನಕೆ ಬಿಸಿಕಲ್ಲು ಇತ್ತು. ಈಗ ಮಿಕ್ಸಿ ಬಂತು. ಬಿಸಿಕಲ್ಲೂ ಇಲ್ಲ, ಹಾಡೂ ಇಲ್ಲ ಈಗೆಲ್ಲಾ ಮಿಕ್ಸಿ ಬಂದಿವೆ. ಟರ್ ಟರ್ ಅನ್ನುತ್ವೆ.ಇದರಲ್ಲಿ ಯಾವ ಸಂಗೀತವೂ ಇಲ್ಲ ಎಂದು‌ ಸಿಎಂ ಅಭಿಪ್ರಾಯಪಟ್ಟರು.

ಜಾನಪದ ವಿವಿಯೂ ನಮ್ಮ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕು.ಗೋಟಗೊಡಿ ಜಾನಪದ ವಿವಿ ಕಾರ್ಯ ಭಾರತ ದೇಶದಲ್ಲಿ ಖ್ಯಾತಿ ಪಡೆಯಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.

ಇದನ್ನೂಓದಿ:ರಾಜ್ಯ ರಾಜಕಾರಣದಲ್ಲಿ ಆಗಲಿದೆಯಾ ನಾಯಕತ್ವ ಬದಲಾವಣೆ?: ನಿಜವಾಗುತ್ತಾ ಧಾರವಾಡ ಗೊಂಬೆ ಭವಿಷ್ಯ?

Last Updated :Mar 22, 2023, 11:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.