ETV Bharat / state

ರೈತರ ಹಿತದೃಷ್ಟಿಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ: ಬಿ ಎಸ್ ಯಡಿಯೂರಪ್ಪ

author img

By

Published : Nov 20, 2021, 5:05 PM IST

B S Yadiyurappa
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಸತ್ಯಾಂಶವನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ರೈತರ ಹಿತದೃಷ್ಟಿಯಿಂದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್(repeal of 3 farm laws) ಪಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(Former CM B S Yediyurappa) ಹೇಳಿದ್ದಾರೆ.

ಬಾಗಲಕೋಟೆ: ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವನು. ಬರುವ ದಿನಗಳಲ್ಲಿ ಯಾವುದೇ ಸ್ಥಾನಮಾನವನ್ನು ಅಪೇಕ್ಷಿಸದೇ, ರಾಜ್ಯದ ಉದ್ದಗಲಕ್ಕೂ ಪಕ್ಷವನ್ನು ಬಲಪಡಿಸಲು ಓಡಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(Former CM B S Yediyurappa) ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ನಗರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ರಾಜ್ಯದ ಜನರು ನನ್ನ ಮೇಲೆ ಅಷ್ಟೇ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ದಾರಿಯಲ್ಲಿ ಹೋಗುವ ಸಾಮಾನ್ಯ ಹೆಣ್ಣುಮಗಳು ಸಹ ನಮ್ಮ ಯಡಿಯೂರಪ್ಪ ಅಂತ ಹೇಳ್ತಾರೆ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ನನಗೆ ಯಾವುದೇ ಸ್ಥಾನಮಾನದ ಅಗತ್ಯತೆ ಇಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಬಿಎಸ್​ವೈ?

ಮುಂದಿನ ಚುನಾವಣೆಯಲ್ಲಿ ತಾವು ಅಖಾಡದಲ್ಲಿ ಇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದಿನ ಬಾರಿ ಚುನಾವಣೆಗೆ ನಾನು ನಿಲ್ಲಬೇಕೋ, ಬೇಡವೋ ಎನ್ನೋದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ನಾನಲ್ಲ ಎಂದು ಹೇಳಿದರು.

ಬಿಜೆಪಿಗೆ ಬಿಎಸ್​ವೈ ಅನಿವಾರ್ಯವೇ?

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವೇ ಎಂಬ ಪ್ರಶ್ನೆಗೆ, ನಾನೆಲ್ಲಿ ಹೋಗಿದ್ದೇನೆ? ಪಕ್ಷವನ್ನು ಕಟ್ಟುವ ಸಲುವಾಗಿ ರಾಜ್ಯಾದ್ಯಂತ ಓಡಾಡಿ ಕೆಲಸ ಮಾಡುತ್ತಿದ್ದೇನೆ. ಆ ಬಗ್ಗೆ ಎರಡು ಮಾತಿಲ್ಲ. ಅನಿವಾರ್ಯ ಎನ್ನುವ ಮಾತಿಲ್ಲ. ಸಾಮೂಹಿಕ ನೇತೃತ್ವದಲ್ಲಿ ನಾನು ಕೂಡಾ ಓಡಾಡಿ ಕೆಲಸ ಮಾಡುತ್ತೇನೆ. ನಾನು ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ಎಲೆಕ್ಷನ್​ನಲ್ಲಿ 140ಕ್ಕೂ ಅಧಿಕ ಸ್ಥಾನ ಗೆಲ್ಲೋದು, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರೋದು ನಮ್ಮ ಸ್ಪಷ್ಟ ಸಂಕಲ್ಪ. ಆ ದಿಕ್ಕಿನಲ್ಲಿ ಈ ಚುನಾವಣೆ ಮುಗಿದ ಬಳಿಕ ಮತ್ತೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ಬಿಎಸ್​ವೈ ತಿಳಿಸಿದರು.

ಪ್ರಧಾನಿಗೆ ಅಭಿನಂದನೆ:

ಯಾವುದೇ ಒಣ ಪ್ರತಿಷ್ಟೆಗೆ ಒಳಗಾಗದೇ‌ ಮೋದಿಯವ್ರು ಕೃಷಿ ಕಾಯ್ದೆಗಳನ್ನು ವಾಪಸ್(repeal of 3 farm laws) ಪಡೆದಿದ್ದಾರೆ. ಸ್ವಲ್ಪ ತಡವಾದ್ರೂ ಸಹ ಈ ದೃಢ ನಿರ್ಧಾರ ರೈತ ಸಮೂಹಕ್ಕೆ ನೀಡುತ್ತಿರೋ‌ ಒಂದು ಕೊಡುಗೆಯಾಗಿದೆ. ಇದರಿಂದ ರೈತ ಸಮೂಹಕ್ಕೆ ಒಳ್ಳೆಯದಾಗುತ್ತದೆ ಎಂಬುದು ಪ್ರಧಾನಿಯ ಭಾವನೆಎಂದು ಹೇಳುತ್ತಾ ಪ್ರಧಾನಿ‌ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಆಯ್ದೆ ವಾಪಸ್ ಪಡೆಯೋದು ಸಾಧ್ಯವೇ ಇಲ್ಲ ಎಂದು ಹಿಂದೆ ಹೇಳಿದ್ರು. ರೈತರ ಹೋರಾಟ ನೋಡಿದ ಮೇಲೆ, ರೈತರ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ದೇಶದ ರೈತರಲ್ಲಿ ಪ್ರಧಾನಿ ಬಗ್ಗೆ ಗೌರವ, ವಿಶ್ವಾಸ ಜಾಸ್ತಿಯಾಗಿದೆ ಎಂದರು.

ಸತ್ಯವನ್ನು ಒಪ್ಪಿಕೊಳ್ಳಬೇಕಲ್ಲ

ತಡವಾಗಿ ಮಸೂದೆ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸತ್ಯವನ್ನ ಒಪ್ಪಿಕೊಳ್ಳಬೇಕಲ್ಲ. 11 ತಿಂಗಳುಗಳ ಕಾಲ ರೈತರು ಹೋರಾಟ ಮಾಡಿಕೊಂಡು ಬಂದರು. ಈಗ ಪ್ರಧಾನಿಯವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಸ್ವಲ್ಪ ತಡವಾಗಿದೆ ಎಂಬುದನ್ನು ಸೂಚ್ಯವಾಗಿ ಒಪ್ಪಿಕೊಂಡರು. ಸತ್ಯಾಂಶವನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ಈಗ ರೈತರ ಹಿತದೃಷ್ಟಿಯಿಂದ ಕಾಯ್ದೆ ವಾಪಸ್ ಪಡೆದಿರೋದು ಸ್ವಾಗತಾರ್ಹ ಎಂದು ಹೇಳಿದರು.

ಪ್ರಾಣ ಕಳೆದುಕೊಂಡಿದ್ದಕ್ಕೆ ಅನೇಕ ಕಾರಣಗಳಿವೆ:

ರೈತ ಹೋರಾಟದಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಂಡ ವಿಚಾರವಾಗಿ ಮಾತನಾಡಿ, ಪ್ರಾಣ ಕಳೆದುಕೊಂಡಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಆ ಸಂದರ್ಭದಲ್ಲಿ‌ ನಡೆದ ಘಟನಾವಳಿಗಳು ನಿಮಗೂ ಗೊತ್ತು, ನಮಗೂ ಗೊತ್ತು. ಕಾರಣ ಏನು ಅನ್ನೋದನ್ನು ಈಗ ನಿಮಗೆ ಹೇಳೋ ಅಗತ್ಯ ಇಲ್ಲ ಎಂದರು.

ಚುನಾವಣೆ ಗಿಮಿಕ್ ಅಲ್ಲ:

ಕೃಷಿ ಕಾಯ್ದೆ ವಾಪಸ್ ಪಡೆದಿರುವುದು ಚುನಾವಣೆ ಗಿಮಿಕ್ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾಧ್ಯವೇ ಇಲ್ಲ. ಇನ್ನು 20 ವರ್ಷವಾದ್ರೂ, ಯಾವುದೇ ಚುನಾವಣೆಯಾದ್ರೂ ಬಿಜೆಪಿ ಬಿಟ್ಟು ಬೇರೆಯವರು ಗೆಲ್ಲಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ವಿಶ್ವನಾಯಕ ಎಂದು ಪರಿಗಣನೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಹೆಸರೇ ಸಾಕು, ಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ಈ ಚುನಾವಣೆ ಅಷ್ಟೇ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇಷ್ಟೇ ಬಹುಮತ ಪಡೆದು ಮುಂದೆ ಹೋಗ್ತೇವೆ ಎಂಬ ವಿಶ್ವಾಸವನ್ನು ಮಾಜಿ ಸಿಎಂ ಯಡಿಯೂರಪ್ಪ ವ್ಯಕ್ತಪಡಿಸಿದರು.

ಇದನ್ನೂ ಓದಿ: Heavy rain in Mysore : ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿಯೆಷ್ಟು!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.