ETV Bharat / sports

ಏಷ್ಯಾಕಪ್​ಗಾಗಿ ತಂಡದ ಆಯ್ಕೆ ಮಾಡಲು ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳಲಿರುವ ರೋಹಿತ್ ಶರ್ಮಾ

author img

By

Published : Aug 19, 2023, 10:14 AM IST

Updated : Aug 19, 2023, 11:46 AM IST

Board of Control for Cricket in India: ಏಷ್ಯಾಕಪ್ ಪಂದ್ಯಾವಳಿಗೆ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ಪ್ರಕಟಗೊಂಡಿವೆ. ಭಾರತ ತಂಡದ ಆಯ್ಕೆ ಬಗ್ಗೆ ಆಗಸ್ಟ್ 21ರಂದು ಸಭೆ ನಡೆಯಲಿದೆ.

Board of Control for Cricket in India
ಏಷ್ಯಾ ಕಪ್​ಗಾಗಿ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳಲಿರುವ ರೋಹಿತ್ ಶರ್ಮಾ..

ನವದೆಹಲಿ: ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪುರುಷರ ಹಿರಿಯ ಆಯ್ಕೆ ಸಮಿತಿಯು ಆಗಸ್ಟ್ 21ರಂದು (ಸೋಮವಾರ) ನವದೆಹಲಿಯಲ್ಲಿ ಸಭೆ ನಡೆಸಿ, ಏಷ್ಯಾಕಪ್​ ಟೂರ್ನಿನಾಗಿ ತಂಡದ ಕುರಿತು ಚರ್ಚಿಸಲಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೆಲ ಪ್ರಮುಖ ಆಟಗಾರರ ಗಾಯದ ಹಿನ್ನೆಲೆಯಲ್ಲಿ ಏಷ್ಯಾಕಪ್ ಮತ್ತು ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ, ಏಷ್ಯಾಕಪ್​ಗೆ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ಪ್ರಕಟಗೊಂಡಿವೆ. ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕೂಡ ತಾತ್ಕಾಲಿಕ ತಂಡವನ್ನು ಘೋಷಿಸಿವೆ. ಭಾರತವು 15 ಆಟಗಾರರನ್ನು ಆಯ್ಕೆ ಮಾಡಲಿದೆಯಾ ಅಥವಾ ಇನ್ನೂ ಕೆಲವರನ್ನು ಆಯ್ಕೆ ಮಾಡಲಾಗುತ್ತದೆಯೇ ಎಂಬ ವಿಚಾರ ಈಗ ಕುತೂಹಲ ಕೆರಳಿಸಿದೆ. ಸಾಮಾನ್ಯವಾಗಿ ಈ ಎಲ್ಲ ವಿಸ್ತೃತ ತಂಡಗಳು 15ಕ್ಕೂ ಹೆಚ್ಚು ಆಟಗಾರರನ್ನು ಒಳಗೊಂಡಿವೆ.

ಜಸ್ಪ್ರೀತ್ ಬುಮ್ರಾ ಮೇಲೆ ಆಯ್ಕೆಗಾರರ ಕಣ್ಣು: ಭಾರತದ ಮೂವರು ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಸದ್ಯ ಬುಮ್ರಾ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿ ಮೂಲಕ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಅಲ್ಲದೆ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಪ್ರದರ್ಶನದ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದಾರೆ.

ಭಾರತ -ಪಾಕ್ ಪಂದ್ಯ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಜುಲೈ 19ರಂದು ಏಷ್ಯಾಕಪ್ 2023ರ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮುಲ್ತಾನ್‌ನಲ್ಲಿ ಆಗಸ್ಟ್ 30ರಂದು ನಡೆಯಲಿರುವ ಪಾಕಿಸ್ತಾನ ಹಾಗೂ ನೇಪಾಳ ತಂಡಗಳ ನಡುವಿನ ಮುಖಾಮುಖಿಯೊಂದಿಗೆ ಟೂರ್ನಿ ಆರಂಭವಾಗಲಿದೆ. ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಹಣಾಹಣಿ ನಡೆಯಲಿದೆ. ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆಗೊಂಡಿದ್ದು, 6 ತಂಡಗಳು ಭಾಗವಹಿಸುತ್ತಿವೆ. ಆರಂಭದಲ್ಲಿ ತಲಾ 3 ತಂಡಗಳು 2 ಗ್ರೂಪ್​ಗಳಲ್ಲಿ ಆಡಲಿವೆ.​ ಭಾರತವು ಎ ಗುಂಪಿನಲ್ಲಿದೆ, ಜೊತೆಗೆ ಪಾಕಿಸ್ತಾನ ಮತ್ತು ನೇಪಾಳ ಇವೆ. ಬಿ ಗ್ರೂಪ್​ನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳಿವೆ. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿದ್ದರೆ, ಭಾರತ ತಂಡವಾಡುವ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಿವೆ. ಟೂರ್ನಿಯಲ್ಲಿ ಫೈನಲ್​ ಸೇರಿ ಒಟ್ಟು 13 ಪಂದ್ಯಗಳು ನಡೆಯಲಿವೆ.

ಸೂಪರ್ 4 ಹಂತದ ಪಂದ್ಯಗಳು: ಸೂಪರ್ 4 ಹಂತದ ಪಂದ್ಯಗಳು ಸೆಪ್ಟೆಂಬರ್ 6ರಂದು ಪ್ರಾರಂಭವಾಗಲಿದ್ದು, ಆಯಾ ಗುಂಪಿನಲ್ಲಿ ಎ1 ಮತ್ತು ಬಿ2 ತಂಡಗಳ ನಡುವೆ ಲಾಹೋರ್‌ನಲ್ಲಿ ಪಂದ್ಯಗಳು ನಡೆಯಲಿವೆ. ಉಳಿದ ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿವೆ.

7 ಪ್ರಶಸ್ತಿ ಗೆದ್ದ ಯಶಸ್ವಿ ತಂಡ ಭಾರತ: ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಫೈನಲ್ ನಡೆಯಲಿದೆ. ಪಂದ್ಯಾವಳಿಯು 50 ಓವರ್ ಮಾದರಿಯಲ್ಲಿ ನಡೆಯಲಿದೆ. ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಏಷ್ಯಾದ ತಂಡಗಳಿಗೆ ಇದು ಮಹತ್ವದ ಟೂರ್ನಿಯಾಗಿದೆ. ಏಕದಿನ ವಿಶ್ವಕಪ್ ಆತಿಥ್ಯವನ್ನು ಭಾರತ ವಹಿಸಲಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯುತ್ತಿದೆ. ಕಳೆದ ವರ್ಷ ಶ್ರೀಲಂಕಾ ತಂಡವು ಏಷ್ಯಾಕಪ್ ಚಾಂಪಿಯನ್ ಹೊರಹೊಮ್ಮಿತ್ತು. ಲಂಕನ್ನರು ಒಟ್ಟು ಆರು ಸಲ ಪ್ರಶಸ್ತಿ ಗೆದ್ದಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಭಾರತವು ಒಟ್ಟು 7 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಅತ್ಯಂತ ಯಶಸ್ವಿ ತಂಡವಾಗಿದೆ.

ಇದನ್ನೂ ಓದಿ: 4ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುವ ಆಟಗಾರರು ಹಲವರಿದ್ದಾರೆ: ಸೌರವ್ ಗಂಗೂಲಿ

Last Updated :Aug 19, 2023, 11:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.