ETV Bharat / sports

KKR vs GT: ಕೆಕೆಆರ್​ ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದ ಗುಜರಾತ್​

author img

By

Published : Apr 29, 2023, 6:11 PM IST

Updated : Apr 29, 2023, 8:34 PM IST

ಕೋಲ್ಕತ್ತಾ ನೈಟ್​ ರೈಡರ್ಸ್​ ನೀಡಿದ್ದ 180 ರನ್​ನ ಗುರಿಯನ್ನು ಗುಜರಾತ್​ ಟೈಟಾನ್ಸ್​ 3 ವಿಕೆಟ್​ ನಷ್ಟದಿಂದ ಸಾಧಿಸಿದೆ.

Kolkata Knight Riders vs Gujarat Titans 39th Match Score
KKR vs GT: ಗುಜರಾತ್​ ಗೆಲುವಿಗೆ 180 ರನ್​ ಗುರಿ ನೀಡಿದ ಕೋಲ್ಕತ್ತಾ ನೈಟ್​ ರೈಡರ್ಸ್​

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶುಭಮನ್​ ಗಿಲ್​ ಮತ್ತು ವಿಜಯ್​ ಶಂಕರ್​ ಆಟದ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ನೀಡಿದ್ದ 180 ರನ್​ನ ಗುರಿಯನ್ನು ಗುಜರಾತ್​ ಟೈಟಾನ್ಸ್​ ಕೇವಲ ಮೂರು ವಿಕೆಟ್​ ನಷ್ಟದಿಂದ 17.5 ಓವರ್​ನಲ್ಲೇ ಸಾಧಿಸಿದೆ. ಈ ಮೂಲಕ 8 ಪಂದ್ಯಗಳಲ್ಲಿ 6 ಗೆದ್ದು 12 ಅಂಕದಿಂದ ಪಾಯಿಂಟ್​ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಗುಜರಾತ್​ನ ಆರಂಭಿಕರಾದ ವೃದ್ಧಿಮಾನ್ ಸಹಾ ಮತ್ತು ಶುಭಮನ್​ ಗಿಲ್​ ಇದುವರೆಗೂ ಉತ್ತಮ ಜೊತೆಯಾಟ ನೀಡಿಲ್ಲ. ಇಂದು ಸಹ 10 ರನ್​ ಗಳಿಸಿ ಸಹಾ ಆಂಡ್ರೆ ರಸೆಲ್​ ವಿಕೆಟ್​ ಕೊಟ್ಟರು. ನಂತರ ಬಂದ ನಾಯಕ ಹಾರ್ದಿಕ್​ ಪಾಂಡ್ಯ ಮತ್ತೋರ್ವ ಆರಂಭಿಕ ಆಟಗಾರ ಶುಭಮನ್​ ಗಿಲ್​ ಜೊತೆ ಬಿರುಸಿನ ಇನ್ನಿಂಗ್ಸ್​ ಕಟ್ಟಿದರು.

ಹಾರ್ದಿಕ್​ ಪಾಂಡ್ಯ 20 ಬಾಲ್​ನಲ್ಲಿ 26 ರನ್​ ಗಳಿಸಿ ಔಟ್​ ಆದರು. ಶುಭಮನ್​ ಗಿಲ್​ 35 ಎಸೆತ ಎದುರಿಸಿ 8 ಬೌಡರಿಯಿಂದ 49 ರನ್​ಗೆ ಔಟ್​ ಆದರು. ಈ ಮೂಲಕ ಅರ್ಧಶತಕದಿಂದ ವಂಚಿತರಾದರು. ಈ ಮೂರು ವಿಕೆಟ್​ ಪತನದ ನಂತರ ವಿಜಯ್​ ಶಂಕರ್​ ಮತ್ತು ಡೇವಿಡ್​ ಮಿಲ್ಲರ್​ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯದರು.

ವಿಜಯ್​ ಶಂಕರ್​ 24 ಬಾಲ್​ನಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿಯಿಂದ ಅಜೇಯ 51 ರನ್​ ಗಳಿಸಿದರು. ಇವರಿಗೆ ಸಾಥ್​ ನೀಡಿದ ಡೇವಿಡ್​ ಮಿಲ್ಲರ್​ 18 ಎಸೆತ ಎದುರಿಸಿ 2 ಸಿಕ್ಸ್​ ಮತ್ತು 2 ಫೋರ್​ನಿಂದ ಅಜೇಯ 32 ರನ್​ ಕಲೆಹಾಕಿದರು. ಇಬ್ಬರು ಬ್ಯಾಟರ್​ಗಳ ಜೊತೆಯಾಟದಿಂದ ಗುಜರಾತ್​ 17.5 ಓವರ್​ನಲ್ಲೇ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್​ ಮಾಡಿದ್ದ ಕೋಲ್ಕತ್ತಾ, ರಹಮಾನುಲ್ಲಾ ಗುರ್ಬಾಜ್ ಅವರ ಅರ್ಧಶತಕದ ಬ್ಯಾಟಿಂಗ್​ ಬಲದಿಂದ​ 20 ಓವರ್​ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 179 ರನ್​ ಗಳಿಸಿತು. ಮೊಹಮ್ಮದ್ ಶಮಿ, ನೂರ್ ಅಹ್ಮದ್ ಮತ್ತು ಜೋಶುವಾ ಲಿಟಲ್ ಗುಜರಾತ್​ ಪರ ಯಶಸ್ವಿ ವಿಕೆಟ್​ ಟೇಕರ್​ಗಳಾದರು. ಇದರಿಂದ ಗುಜರಾತ್​ ಟೈಟಾನ್ಸ್​ ಗೆಲುವಿಗೆ 180 ರನ್​ನ ಅಗತ್ಯವಿದೆ.

ಟಾಸ್​​ ಆದ ಬೆನ್ನಲ್ಲೇ ಮಳೆ ಬಂದ ಕಾರಣ ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಗುಜರಾತ್​ ನಾಯಕ ಹಾರ್ದಿಕ್​ ಪಾಂಡ್ಯ ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡುವ ನಿರ್ಧಾರ ಮಾಡಿದರು. ಕೆಕೆಆರ್​ಗೆ ಉತ್ತಮ ಆರಂಭ ದೊರೆಯಲಿಲ್ಲ. ಗುಜರಾತ್​​ನ ಅನುಭವಿ ಬೌಲರ್​ ಶಮಿ 19 ರನ್​ ಗಳಿಸಿದ್ದ ಎನ್ ಜಗದೀಶನ್ ಅವರನ್ನು ಎಲ್​ಬಿಡಬ್ಲ್ಯೂ ಮೂಲಕ ಔಟ್​ ಮಾಡಿದರು.

ಎನ್ ಜಗದೀಶನ್ ವಿಕೆಟ್​ ನಂತರ ಬಡ್ತಿ ಪಡೆದು ಬಂದ ಶಾರ್ದೂಲ್ ಠಾಕೂರ್ ನಾಲ್ಕು ಬಾಲ್​ ಎದುರಿಸಿ ಶೂನ್ಯಕ್ಕೆ ಔಟ್​ ಆದರು. ಇವರ ನಂತರ ಬಂದ ಶತಕ ವೀರ ವೆಂಕಟೇಶ್​ ಅಯ್ಯರ್ (14)​ ಜೋಶುವಾ ಲಿಟಲ್​ಗೆ ವಿಕೆಟ್​ ಒಪ್ಪಿಸಿದರು. ಅವರ ಬೆನ್ನಲ್ಲೇ ಬಂದ ನಾಯಕ ನಿತೀಶ್​ ರಾಣ (4) ಒಂದು ಬೌಂಡರಿ ಗಳಿಸಿ ಅದೇ ಓವರ್​ನಲ್ಲಿ ಜೋಶುವಾ ಲಿಟಲ್​ಗೆ ಬಲಿಯಾದರು.

ಒಂದೆಡೆ ವಿಕೆಟ್​​ ಪತನವಾಗುತ್ತಿದ್ದರೂ ರಹಮಾನುಲ್ಲಾ ಗುರ್ಬಾಜ್ ತಮ್ಮ ಆಟವನ್ನು ತಾಳ್ಮೆಯಿಂದ ಮುಂದುವರೆಸಿ ಅರ್ಧಶತಕ ದಾಖಲಿಸಿಕೊಂಡರು. ಪಂಚ ಸಿಕ್ಸ್​​ಗಳ ವೀರ ರಿಂಕು ಸಿಂಗ್ ಸಹ 19 ರನ್​ಗೆ ಔಟ್​ ಆದರು. 39 ಬಾಲ್​ನಲ್ಲಿ 7 ಸಿಕ್ಸ್​ ಮತ್ತು 5 ಬೌಂಡರಿಯಿಂದ 81 ರನ್​ ಗಳಿಸಿ ಆಡುತ್ತಿದ್ದ ಗುರ್ಬಾಜ್ ನೂರ್ ಅಹ್ಮದ್ ವಿಕೆಟ್​ ಒಪ್ಪಿಸಿದರು. ಕೊನೆಗೆ ಬಂದ ಬರ್ತಡೇ ಬಾಯ್​ ಆಂಡ್ರೆ ರಸೆಲ್ 19 ಬಾಲ್​ಗೆ 34 ರನ್​ ಹೊಡೆದು ಕೊನೆಯ ಬಾಲ್​ಗೆ ಔಟ್​ ಆದರು. ಅವರ ಜೊತೆ ಕ್ರೀಸ್​ನಲ್ಲಿದ್ದ ​ ಡೇವಿಡ್​ ವಿಶ್ ಅಜೇಯ 8 ರನ್ ಗಳಿಸಿದರು. ಗುಜರಾತ್​ ಪರ ಶಮಿ 3, ನೂರ್ ಅಹ್ಮದ್ ಮತ್ತು ​ಜೋಶುವಾ ಲಿಟಲ್ ತಲಾ ಎರಡು ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ: KKR vs GT: ಕೋಲ್ಕತ್ತಾ ವಿರುದ್ಧ ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಯ್ಕೆ, ಮಳೆಯಿಂದ ಪಂದ್ಯ ವಿಳಂಬ

Last Updated :Apr 29, 2023, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.