ETV Bharat / sports

ಭಾರತ-ಇಂಗ್ಲೆಂಡ್​ ಎರಡನೇ ಟಿ20 ಪಂದ್ಯ: ತಂಡದಲ್ಲಿ ಕೊಹ್ಲಿ, ಪಂತ್​ಗಾಗಿ ಯಾರ ಸ್ಥಾನ ತೆರವು?

author img

By

Published : Jul 9, 2022, 12:14 PM IST

india-vs-england-2nd-t20i-match-at-edgbaston-birmingham
ಭಾರತ-ಇಂಗ್ಲೆಂಡ್​ ಎರಡನೇ ಟಿ20 ಪಂದ್ಯ: ತಂಡದಲ್ಲಿ ಕೊಹ್ಲಿ, ಪಂತ್​ಗಾಗಿ ಯಾರ ಸ್ಥಾನ ತೆರವು?

ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಎರಡನೇ ಪಂದ್ಯ ಇಂದು ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್​ನಲ್ಲಿ ನಡೆಯಲಿದೆ. ಭಾರತ ತಂಡಕ್ಕೆ ಮೂವರು ಅನುಭವಿ ಆಟಗಾರರು ಮರಳಿದ್ದು, ಇಂದಿನ ಪಂದ್ಯದಲ್ಲಿ ಯಾರೆಲ್ಲ ಅವಕಾಶ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಮೊದಲ ಪಂದ್ಯದಲ್ಲಿ ಸೋತ ಆಂಗ್ಲರಿಗೆ ಸರಣಿ ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಬರ್ಮಿಂಗ್​ಹ್ಯಾ​ಮ್: ಟಿ-20 ಸರಣಿಯಲ್ಲಿ ಇಂಗ್ಲೆಂಡ್​​ ಗೆಲುವಿನ ಮೂಲಕ ಶುಭಾರಂಭ ಮಾಡಿರುವ ರೋಹಿತ್​ ಶರ್ಮಾ ಪಡೆ ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್​ನಲ್ಲಿ ಇಂದು ಎರಡನೇ ಪಂದ್ಯವನ್ನಾಡಲಿದೆ. ಸದ್ಯ ಫಾರ್ಮ್​ ಕಳೆದುಕೊಂಡಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಐದು ತಿಂಗಳ ನಂತರ ಟಿ-20 ಪಂದ್ಯ ಆಡಲಿದ್ದಾರೆ.

ಸೌತಾಂಪ್ಟನ್​ನಲ್ಲಿ ನಡೆದ ಮೊದಲ ಹಣಾಹಣಿಯಲ್ಲಿ ಆಲ್​ರೌಂಡರ್​ ಪ್ರದರ್ಶನ ನೀಡಿದ ಭಾರತ 50 ರನ್​ ಅಂತರದಿಂದ ಬಟ್ಲರ್​ ಪಡೆಯನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಕೆಲ ಬದಲಾವಣೆಗಳಾಗಲಿದ್ದು, ಅನುಭವಿ ಆಟಗಾರರಾದ ವಿರಾಟ್​ ಕೊಹ್ಲಿ, ವಿಕೆಟ್​ ಕೀಪರ್ ಬ್ಯಾಟರ್​ ರಿಷಭ್​ ಪಂತ್ ಹಾಗೂ ವೇಗಿ ಜಸ್ಪ್ರೀತ್​ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಮೊದಲ ಪಂದ್ಯವನ್ನಾಡಿದ ಕೆಲವರು ಇಂದು ಬೆಂಚ್​ ಕಾಯಬೇಕಾಗಲಿದೆ.

ಕೊಹ್ಲಿ ಮತ್ತು ಇತರರಿಗೆ ಮೊದಲ ಪಂದ್ಯಕ್ಕೆ ವಿಶ್ರಾಂತಿ ಮತ್ತು ರೊಟೇಷನ್​​ ನೀತಿಯಂತೆ ಅವಕಾಶ ಪಡೆದ ದೀಪಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಪಂದ್ಯದಲ್ಲಿ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಅವರನ್ನು ಇಂದು ಕೈಬಿಡುವುದು ಕಷ್ಟವಾಗಿದೆ. ಹೂಡಾ ಅವರನ್ನು ಉಳಿಸಿಕೊಂಡರೆ, ಇಶಾನ್​ ಕಿಶನ್​ ಸ್ಥಾನದಲ್ಲಿ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಓಪನಿಂಗ್​ ಕ್ರಮಾಂಕದಲ್ಲಿ ವಿರಾಟ್​ ಈಗಾಗಲೇ ಆಡಿರುವ ಅನುಭವ ಹೊಂದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್​ (19 ಎಸೆತಗಳಲ್ಲಿ 39 ರನ್) ತೋರಿದ್ದು, ಹಾರ್ದಿಕ್​ ಪಾಂಡ್ಯ ಆಲ್​ರೌಂಡರ್ ಆಟದ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್​ನಲ್ಲಿ ಅರ್ಧಶತಕ ಬಾರಿಸಿದ್ದ ಹಾರ್ದಿಕ್, 33 ರನ್​ಗೆ 4 ವಿಕೆಟ್​ ಕಿತ್ತಿದ್ದರು. ಇನ್ನೊಂದೆಡೆ ಟಿ-20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಅನುಭವಿ ವಿಕೆಟ್​ ಕೀಪರ್ ದಿನೇಶ್ ಕಾರ್ತಿಕ್‌ಗೆ ​​ಟೀಮ್ ಮ್ಯಾನೇಜ್‌ಮೆಂಟ್ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆಯಿದೆ.

ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ಯುವ ವೇಗಿ ಅರ್ಶದೀಪ್​ ಸಿಂಗ್ ತಮ್ಮ ಸ್ಥಾನವನ್ನು ತಂಡಕ್ಕೆ ಮರಳಿರುವ ಬುಮ್ರಾಗೆ ಬಿಟ್ಟುಕೊಡಲಿದ್ದಾರೆ. ಇನ್ನುಳಿದಂತೆ ಭುವನೇಶ್ವರ್ ಕುಮಾರ್ ಜೊತೆಗೆ ಹರ್ಷಲ್​ ಪಟೇಲ್​ ಹಾಗೂ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ಇರಲಿದ್ದು, ಅಕ್ಷರ್​ ಪಟೇಲ್​ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಟಾಸ್​​ ಬಳಿಕವೇ ಎರಡೂ ತಂಡಗಳ 11ರ ಬಳಗ ಹೊರಬೀಳುವ ಸಾಧ್ಯತೆಯಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿ.ಕೀ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಅವೇಶ್ ಖಾನ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ, ವಿ.ಕೀ), ಜೇಸನ್ ರಾಯ್, ಡೇವಿಡ್ ಮಲನ್, ಲಿಯಾಮ್ ಲಿವಿಂಗ್​ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಟೈಮಲ್ ಮಿಲ್ಸ್, ರೀಸ್ ಟೋಪ್ಲಿ, ಮ್ಯಾಥ್ಯೂ ಪಾರ್ಕಿನ್ಸನ್, ಡೇವಿಡ್ ವಿಲ್ಲಿ, ಫಿಲಿಪ್ ಸಾಲ್ಟ್, ರಿಚರ್ಡ್ ಗ್ಲೀಸನ್ಯಬಹುದು.

ಇದನ್ನೂ ಓದಿ: IPLನಲ್ಲಿ ವಿದೇಶಿ ಕೋಚ್​​ಗಳ ನೇಮಕ 'ಭಾರತೀಯ ಕ್ರಿಕೆಟ್​​ಗೆ ಮೋಸ: ಮಹತ್ವದ ಅಂಶ ಹೊರಹಾಕಿದ ಗವಾಸ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.