ETV Bharat / science-and-technology

ಚಂದ್ರನ ಮೇಲೆ ಲ್ಯಾಂಡರ್​ ಕಾಲಿಡುವುದು ಖಂಡಿತ: ಇಸ್ರೋ ಮಾಜಿ ನಿರ್ದೇಶಕ ಸುರೇಂದ್ರಪಾಲ್​ ವಿಶ್ವಾಸ

author img

By ETV Bharat Karnataka Team

Published : Aug 23, 2023, 1:32 PM IST

ಇಸ್ರೋ ಮಾಜಿ ನಿರ್ದೇಶಕ ಸುರೇಂದ್ರಪಾಲ್
ಇಸ್ರೋ ಮಾಜಿ ನಿರ್ದೇಶಕ ಸುರೇಂದ್ರಪಾಲ್

ಚಂದ್ರಯಾನ-3 ನೌಕೆಯ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​​ ಆಗುವುದು ಶತಸಿದ್ಧ ಎಂದು ಹಲವಾರು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್: ಚಂದ್ರನ ಮೇಲೆ ಲ್ಯಾಂಡರ್​ ಇಳಿಯಲು ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಭಾರತ ಈ ಸಾಧನೆ ಮಾಡೇ ಮಾಡುತ್ತೆ ಎಂಬ ಅದಮ್ಯ ವಿಶ್ವಾಸ ಎಲ್ಲ, ಹಾಲಿ, ಮಾಜಿ ವಿಜ್ಞಾನಿಗಳಲ್ಲಿ ಇದೆ. ಚಂದ್ರಯಾನ-2 ವೈಫಲ್ಯದಿಂದ ಕಲಿತ ಪಾಠಗಳು ಇಲ್ಲಿ ಅಳವಡಿಸಲಾಗಿದ್ದು, ಚಂದ್ರಯಾನ-3 ನೌಕೆ ಶಶಿಯ ಮೇಲೆ ಕಾಲಿಡುವುದು ಪಕ್ಕಾ ಎಂದು ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ನಿರ್ದೇಶಕ ಡಾ ಸುರೇಂದ್ರ ಪಾಲ್ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಚಂದ್ರಯಾನ- 2 ಕ್ಕೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಿರುವುದರಿಂದ ಚಂದ್ರಯಾನ-3 ಮಿಷನ್ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ನಾವು ಚಂದ್ರನ ಮೇಲೆ ಇಳಿಯುವುದು ಖಂಡಿತ ಎಂದು ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-3 ಮಿಷನ್‌ನ ಲ್ಯಾಂಡರ್​ ಮಾಡ್ಯೂಲ್​ ಅನ್ನು ಇಂದು ಸಂಜೆ 6.04 ಕ್ಕೆ ಸರಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಿಂದಿನ ವೈಫಲ್ಯವೇ ಈಗಿನ ಯೋಜನೆಯ ಬಲ. ಹೀಗಾಗಿ ಎಲ್ಲ ವಿಜ್ಞಾನಿಗಳಂತೆ ನನಗೂ ಚಂದ್ರನ ಮೇಲೆ ಕಾಲಿಡುವ ವಿಶ್ವಾಸವಿದೆ ಎಂದು ಇಸ್ರೋದ ಮಾಜಿ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಗಾರಿದಮ್​ ಬದಲಾವಣೆ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಹಳೆಯ ವಿದ್ಯಾರ್ಥಿಯಾಗಿರುವ ಡಾ. ಸುರೇಂದ್ರ ಪಾಲ್ ಅವರ ಪ್ರಕಾರ, ಚಂದ್ರಯಾನ-3 ಯೋಜನೆಯಲ್ಲಿ ಬಹಳಷ್ಟು ಅಲ್ಗಾರಿದಮ್‌ಗಳನ್ನು ಬದಲಾಯಿಸಲಾಗಿದೆ. ನೌಕೆಯು ಇಳಿಯಲು ದಕ್ಷವಾದ ತಂತ್ರಜ್ಞಾನ ಅಳವಡಿಸಲಾಗಿದೆ. ಲ್ಯಾಂಡರ್ ಇಳಿದು ಅದರಲ್ಲಿರುವ ರೋವರ್​ ಸಂಚರಿಸಿ ಅಧ್ಯಯನ ನಡೆಸುವ ಸಾಮರ್ಥ್ಯ ಹೊಂದಿದೆ. ಲ್ಯಾಂಡಿಂಗ್ ಪ್ರದೇಶವನ್ನು 2.5 ಕಿಲೋಮೀಟರ್‌ನಿಂದ 4 ಕಿಮೀಗೆ ಹೆಚ್ಚಿಸಿರುವುದು ಯೋಜನೆಯ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ.

ಚಂದ್ರಯಾನ-3 ರ ಲ್ಯಾಂಡಿಂಗ್ ಯಶಸ್ವಿಯಾದರೆ ಭಾರತ ಬಾಹ್ಯಾಕಾಶ ಯಾನದಲ್ಲಿ ದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಕಾರಣ ಚಂದ್ರನ ಮೇಲ್ಮೈಯಲ್ಲಿ ನೌಕೆಯೊಂದನ್ನು ಲ್ಯಾಂಡ್​ ಮಾಡುವುದು ಅತಿ ಕಷ್ಟದ ಮತ್ತು ಸಂಕೀರ್ಣ ಕಾರ್ಯವಾಗಿದೆ. ಇದನ್ನು ಸಾಧಿಸಿದಲ್ಲಿ ಲ್ಯಾಂಡಿಂಗ್‌ ಸಂಕೀರ್ಣ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ. ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟ(ರಷ್ಯಾ) ಈ ಸಾಧನೆಯನ್ನು ಮಾಡಿದ ಮೊಲದ ರಾಷ್ಟ್ರಗಳಾಗಿವೆ.

ದಕ್ಷಿಣ ಆಫ್ರಿಕಾದಿಂದ ಪಧಾನಿ ಮೋದಿ ಲೈವ್​ ವೀಕ್ಷಣೆ: ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರು ಲ್ಯಾಂಡರ್​ ಚಂದ್ರ ಸ್ಪರ್ಶವನ್ನು ಲೈವ್​ ಮೂಲಕ ವೀಕ್ಷಿಸಲಿದ್ದಾರೆ. ಇಸ್ರೋ ವಿಜ್ಞಾನಿಗಳ ಜೊತೆಗೆ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಸಂಪರ್ಕದಲ್ಲಿರಲಿದ್ದಾರೆ. 140 ಕೋಟಿ ಜನರು ಚಂದ್ರಸ್ಪರ್ಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹಲವು ನಗರಗಳಲ್ಲಿ ಪೂಜೆ, ಹವನಗಳೂ ನಡೆದಿವೆ.

ಇದನ್ನೂ ಓದಿ: ಇಸ್ರೋದಿಂದ ಇಂದು ಮಹತ್ವದ ಕಾರ್ಯಾಚರಣೆ.. ಚಂದ್ರನ ಅಂಗಳದಲ್ಲಿ ತ್ರಿವಿಕ್ರಮನ ಪಾದಸ್ಪರ್ಶ.. ಚಂದ್ರಯಾನ ಕೌತುಕಕ್ಕೆ ಕ್ಷಣಗಣನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.