ETV Bharat / international

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್​ಗೆ ಶ್ರೀಗಂಧದಿಂದ ಕೆತ್ತಿದ ಸಿತಾರ್​, ಪತ್ನಿ ಬ್ರಿಗಿಟ್ಟೆಗೆ ರೇಷ್ಮೆ ಸೀರೆ ಉಡುಗೊರೆ ನೀಡಿದ ಪಿಎಂ ಮೋದಿ

author img

By

Published : Jul 15, 2023, 5:13 PM IST

pm-narendra-modi-gifts-sadalwood-sitar-to-french-prez-pochampally-ikat-saree-to-his-spouse
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್​ಗೆ ಶ್ರೀಗಂಧದಿಂದ ಕೆತ್ತಿದ ಸಿತಾರ್​, ಪತ್ನಿ ಬ್ರಿಗಿಟ್ಟೆಗೆ ರೇಷ್ಮೆ ಸೀರೆ ಉಡುಗೊರೆ ನೀಡಿದ ಪಿಎಂ ಮೋದಿ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್‌, ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್, ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರಿಗೆ ಪ್ರಧಾನಿ ಮೋದಿ ವಿಶಿಷ್ಟ ಉಡುಗೊರೆಗಳನ್ನು ನೀಡಿದ್ದಾರೆ.

ಪ್ಯಾರಿಸ್ (ಫ್ರಾನ್ಸ್): ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಫ್ರಾನ್ಸ್ ಪ್ರವಾಸದ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್‌ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಶ್ರೀಗಂಧದ ಮರದಿಂದ ಕೆತ್ತಿದ ಸಿತಾರ್​ ಅವರನ್ನು ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಫ್ರೆಂಚ್ ಅಧ್ಯಕ್ಷರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್‌ ಅವರಿಗೆ ಶ್ರೀಗಂಧದ ಪೆಟ್ಟಿಗೆಯಲ್ಲಿ ತೆಲಂಗಾಣದ ಪ್ರಸಿದ್ಧ ಪೋಚಂಪಲ್ಲಿ ಇಕಾತ್ ರೇಷ್ಮೆ ಸೀರೆಯ ಉಡುಗೊರೆ ನೀಡಿದ್ದಾರೆ.

ಇದನ್ನೂ ಓದಿ: ರಕ್ಷಣಾ ಸಹಕಾರವೇ ಭಾರತ - ಫ್ರಾನ್ಸ್ ಬಾಂಧವ್ಯದ ಆಧಾರಸ್ತಂಭ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಎಮ್ಯಾನುಯೆಲ್ ಮ್ಯಾಕ್ರನ್‌ಗೆ ಉಡುಗೊರೆಯಾಗಿ ನೀಡಿದ ಸಂಗೀತ ವಾದ್ಯ ಸಿತಾರ್‌ನನ್ನು ಶುದ್ಧ ಶ್ರೀಗಂಧದ ಮರದಿಂದ ಮಾಡಲ್ಪಟ್ಟಿದೆ. ಸಿತಾರ್‌ನ ಅಲಂಕಾರಿಕ ಪ್ರತಿಕೃತಿಯು ಸರಸ್ವತಿ ದೇವಿಯ ಚಿತ್ರ ಹೊಂದಿದೆ. ವೀಣೆಯನ್ನು ಸರಸ್ವತಿ ದೇವಿ ಹಿಡಿದುಕೊಂಡಿದ್ದಾರೆ. ಜೊತೆಗೆ ವಿಘ್ನ ನಿವಾರಕ ಗಣೇಶ ಹಾಗೂ ನವಿಲುಗಳು ಕೆತ್ತನೆಯು ಸಿತಾರ್‌ ಹೊಂದಿದೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೂಕ್ಷ್ಮ ಕೆತ್ತನೆಗಳು ಸಹ ಈ ವಾದ್ಯ ಹೊಂದಿದೆ.

ಫ್ರಾನ್ಸ್‌ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್‌ ಅವರಿಗೆ ನೀಡಿರುವ ಪೋಚಂಪಲ್ಲಿ ಇಕಾತ್ ಸೀರೆಯು ದೇಶದ ಶ್ರೀಮಂತ ಜವಳಿ ಪರಂಪರೆ, ಕರಕುಶಲತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ. ತೆಲಂಗಾಣದ ಪೋಚಂಪಲ್ಲಿ ಪಟ್ಟಣದ ಈ ಸೀರೆಯನ್ನು ಸಾಂಪ್ರದಾಯಿಕ ರೂಪಕಗಳು ಮತ್ತು ಹೂವಿನ ಮಾದರಿಗಳನ್ನು ಬಿಂಬಿಸುವ ಕೆತ್ತನೆಗಳನ್ನು ಹೊಂದಿರುವ ಶ್ರೀಗಂಧದ ಪೆಟ್ಟಿಗೆಯಲ್ಲಿ ಇರಿಸಿ ಉಡುಗೊರೆಯಾಗಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಯುಎಇಯಲ್ಲಿ ಮೋದಿಗೆ ಆತ್ಮೀಯ ಸ್ವಾಗತ.. ಬುರ್ಜ್ ಖಲೀಫಾದಲ್ಲಿ ಕಂಗೊಳಿಸಿದ ತ್ರಿವರ್ಣ ಧ್ವಜ, ಮೋದಿ ಭಾವಚಿತ್ರ

ಅಲ್ಲದೇ, ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರಿಗೆ ಪ್ರಧಾನಿ ಮೋದಿ ವಿಶಿಷ್ಟ ಉಡುಗೊರೆಯನ್ನು ಕೊಟ್ಟಿದ್ದಾರೆ. ಕೈಯಿಂದ ಕೆತ್ತಿದ ಶ್ರೀಗಂಧದ ಆನೆಯ ಅಂಬಾರಿಯನ್ನು ಉಡುಗೊರೆಯಾಗಿ ನೀಡಿದರು. ಅಲಂಕಾರಿಕ ಆನೆಯ ಆಕೃತಿಯನ್ನು ಶುದ್ಧ ಶ್ರೀಗಂಧದ ಮರದಿಂದ ಮಾಡಲಾಗಿದೆ. ಶ್ರೀಗಂಧದ ಆನೆಯ ಆಕೃತಿಗಳು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಬುದ್ಧಿವಂತಿಕೆ, ಶಕ್ತಿ ಮತ್ತು ಅದೃಷ್ಟವನ್ನು ಇದು ಸಂಕೇತಿಸುತ್ತದೆ.

ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಯಾಲ್ ಬ್ರಾನ್​ ಪಿವೆಟ್ ಅವರಿಗೆ ಕೈಯಿಂದ ಹೆಣೆದ ಸಿಲ್ಕ್ ಕಾಶ್ಮೀರಿ ಕಾರ್ಪೆಟ್​ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರಿಗೆ ಪ್ರಧಾನಿ ಮೋದಿ ಮಾರ್ಬಲ್ ಇನ್ಲೇ ವರ್ಕ್ ಟೇಬಲ್ ​ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದು ರಾಜಸ್ಥಾನದ ಅಮೂಲ್ಯ ಕಲ್ಲುಗಳನ್ನು ಬಳಸಿ ಅಮೃತಶಿಲೆಯಲ್ಲಿ ಮಾಡಿದ ಅತ್ಯಂತ ಆಕರ್ಷಕ ಕಲಾಕೃತಿಗಳಲ್ಲಿ ಒಂದಾಗಿದೆ. ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಅಲ್ಲಿಂದ ಯುಎಇಗೆ ತಲುಪಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆಗೆ ಇಮ್ಯಾನುಯೆಲ್ ಮ್ಯಾಕ್ರನ್ ಸೆಲ್ಫಿ.. ಫ್ರಾನ್ಸ್​ ಪ್ರವಾಸ ಬಳಿಕ ಅಬುದಾಬಿಗೆ ಪ್ರಯಾಣ ಬೆಳೆಸಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.