ETV Bharat / international

ಗ್ರೀಸ್​ ದೇಶದ 82 ಪ್ರದೇಶಗಳಲ್ಲಿ ಭೀಕರ ಕಾಳ್ಗಿಚ್ಚು: 19 ಸಾವಿರ ಜನ ಸ್ಥಳಾಂತರ

author img

By

Published : Jul 24, 2023, 3:45 PM IST

Fire-still-blazing-on-the-Greek-island-of-Rhodes-
Fire-still-blazing-on-the-Greek-island-of-Rhodes-

ಗ್ರೀಸ್ ದೇಶದ ಹಲವಾರು ಕಡೆಗಳಲ್ಲಿ ಕಾಣಿಸಿಕೊಂಡ ಭೀಕರ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಅಥೆನ್ಸ್​ (ಗ್ರೀಸ್) : ಗ್ರೀಸ್​ನ 82 ಸ್ಥಳಗಳಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಪಡೆಗಳು ಹರಸಾಹಸ ಪಡುತ್ತಿವೆ. ಈ ಪೈಕಿ ಭಾನುವಾರದಂದು 64 ಸ್ಥಳಗಳಲ್ಲಿ ಹೊಸದಾಗಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ರಾತ್ರಿ ಸಮಯದಲ್ಲಿ ಅಗ್ನಿಶಾಮಕ ವಿಮಾನ ಹಾಗೂ ಹೆಲಿಕಾಪ್ಟರ್​ಗಳು ಸಂಚರಿಸಲು ಸಾಧ್ಯವಾಗದ ಕಾರಣದಿಂದ ಅಗ್ನಿಶಾಮಕ ಪಡೆ ಸಿಬ್ಬಂದಿಗೆ ಬೆಂಕಿ ನಂದಿಸುವುದು ಸವಾಲಾಗಿದೆ.

ರೋಡ್ಸ್ ದ್ವೀಪದಲ್ಲಿ ಅತ್ಯಂತ ಗಂಭೀರವಾದ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಸತತ ಆರನೇ ದಿನವೂ ಕಾಳ್ಗಿಚ್ಚು ಉರಿಯುತ್ತಿರುವುದರಿಂದ ದ್ವೀಪದ ಹಲವಾರು ಸ್ಥಳಗಳಿಂದ ಸುಮಾರು 19,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗ್ರೀಕ್ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ರಾತ್ರಿ ಹೊಸದಾಗಿ ಯಾರನ್ನೂ ಸ್ಥಳಾಂತರ ಮಾಡಲಾಗಿಲ್ಲ. ಆದರೆ, ಕಾಳ್ಗಿಚ್ಚಿನ ಕಾರಣದಿಂದ 19 ಸಾವಿರ ಜನರನ್ನು ಸ್ಥಳಾಂತರಿಸಿರುವುದು ಇದೇ ಮೊದಲು ಎಂದು ಹವಾಮಾನ ಬದಲಾವಣೆ ಮತ್ತು ನಾಗರಿಕ ಸಂರಕ್ಷಣಾ ಸಚಿವಾಲಯ ಎಂದು ಹೇಳಿದೆ.

12 ಗ್ರಾಮಗಳಿಂದ ಜನರ ಸ್ಥಳಾಂತರ: 12 ಗ್ರಾಮಗಳು ಮತ್ತು ಹಲವಾರು ಹೋಟೆಲ್‌ಗಳಿಂದ 16,000 ಜನರನ್ನು ಭೂಮಿ ಮತ್ತು 3,000 ಸಮುದ್ರ ಮಾರ್ಗದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೋಟೆಲ್​ನಿಂದ ಸ್ಥಳಾಂತರಿಸುವ ಸಂದರ್ಭದಲ್ಲಿ ಬಿದ್ದು ಕಾಲು ಮುರಿದುಕೊಂಡ ವ್ಯಕ್ತಿ ಮತ್ತು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಳ್ಗಿಚ್ಚು ನಂದಿಸಲು ಯುರೋಪಿಯನ್ ಯೂನಿಯನ್‌ ದೇಶಗಳಿಂದ ಸಹಾಯ ಹರಿದು ಬರುತ್ತಿದೆ. ದೇಶದಾದ್ಯಂತ ಕಾಣಿಸಿಕೊಂಡ ಕಾಳ್ಗಿಚ್ಚು ನಂದಿಸಲು ಯುರೋಪಿಯನ್ ಯುನಿಯನ್ ದೇಶಗಳ 450 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಮತ್ತು ಏಳು ವಿಮಾನಗಳು ಗ್ರೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಯುರೋಪಿಯನ್ ಯುನಿಯನ್ ಮಾನವೀಯ ನೆರವು ಮತ್ತು ಬಿಕ್ಕಟ್ಟು ನಿರ್ವಹಣೆಯ ಆಯುಕ್ತ ಜಾನೆಜ್ ಲೆನಾರ್ಸಿಕ್ ಭಾನುವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.

ಗ್ರೀಸ್​​ನಲ್ಲಿ ಅತ್ಯಧಿಕ ಬಿಸಿ ವಾತಾವರಣ: ಭಾನುವಾರದಂದು ಮೆಡಿಟರೇನಿಯನ್ ದೇಶ ಗ್ರೀಸ್​ನಲ್ಲಿ ಅತ್ಯಧಿಕ ಬಿಸಿ ವಾತಾವರಣವಿತ್ತು. ಒಟ್ಟು 180 ಸ್ಥಳಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ (104 ಎಫ್) ಅಥವಾ ಅದಕ್ಕೂ ಹೆಚ್ಚಿನ ತಾಪಮಾನ ಕಂಡು ಬಂದಿದೆ. ದಕ್ಷಿಣ ಗ್ರೀಸ್‌ನ ಕಡಲತೀರದ ಪಟ್ಟಣವಾದ ಗೈಥಿಯೊದಲ್ಲಿ ಅತ್ಯಧಿಕ 46.4 C (115.5 F) ಉಷ್ಣಾಂಶ ದಾಖಲಾಗಿದೆ. ಭಾನುವಾರ ಸಂಭವಿಸಿದ 64 ಕಾಡ್ಗಿಚ್ಚುಗಳಲ್ಲಿ ಪೈಕಿ ಗ್ರೀಸ್‌ನ ಎರಡನೇ ಅತಿದೊಡ್ಡ ದ್ವೀಪವಾದ ಎವಿಯಾದಲ್ಲಿನ ಕಾಳ್ಗಿಚ್ಚು ಬಹಳ ಭೀಕರವಾಗಿದೆ.

ಹಳೆ ಅಥೆನ್ಸ್-ಪಾಟ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕಡಿತಗೊಳಿಸಲಾಗಿದೆ. ಮಧ್ಯರಾತ್ರಿಯ ಮೊದಲು ಕಾರ್ಫು ಮತ್ತು ಉತ್ತರ ಪೆಲೋಪೊನೀಸ್‌ನಿಂದ ಹೆಚ್ಚಿನ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಕಾರ್ಫು ಪ್ರದೇಶದಲ್ಲಿ ಬೆಂಕಿ ತುಂಬಾ ವಿಶಾಲವಾಗಿ ವ್ಯಾಪಿಸಿದ್ದು, ಆಗ್ನೇಯಕ್ಕೆ ಚಲಿಸುತ್ತಿದೆ ಮತ್ತು ಜನರನ್ನು ಸ್ಥಳಾಂತರಗೊಳಿಸಲು ಖಾಸಗಿ ಹಡಗುಗಳು ಸಿದ್ಧವಾಗಿವೆ ಎಂದು ಅಧಿಕಾರಿಗಳು ಹೇಳಿದರು.

ಪ್ರಸಿದ್ಧ ಪುರಾತನ ರಂಗಮಂದಿರ ಸೇರಿದಂತೆ ಎಪಿಡಾರಸ್‌ನ ಪ್ರಮುಖ ಪುರಾತತ್ವ ಸ್ಥಳದ ಪಶ್ಚಿಮದಲ್ಲಿ ಸಂಭವಿಸಿದ ಬೆಂಕಿಯನ್ನು ಭಾಗಶಃ ನಿಯಂತ್ರಿಸಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.

ಇದನ್ನೂ ಓದಿ : Dalit activist Makwana dies: ಭಾಷಣ ಮಾಡುತ್ತಿದ್ದಾಗಲೇ ಹೃದಯಾಘಾತ; ದಲಿತ ಕಾರ್ಯಕರ್ತ ಮಿಲಿಂದ್ ಮಕ್ವಾನಾ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.