ETV Bharat / international

ಆಸ್ಟ್ರೇಲಿಯಾದಲ್ಲಿ ಕುಶಲ ಕಾರ್ಮಿಕರ ತೀವ್ರ ಕೊರತೆ; 60 ವರ್ಷಗಳಲ್ಲೇ ಕೆಟ್ಟ ಪರಿಸ್ಥಿತಿ!

author img

By ETV Bharat Karnataka Team

Published : Oct 4, 2023, 6:21 PM IST

Australia facing worst skills shortage in 60 yrs, govt body warns
Australia facing worst skills shortage in 60 yrs, govt body warns

ಆಸ್ಟ್ರೇಲಿಯಾದಲ್ಲಿ ಕುಶಲ ಕಾರ್ಮಿಕರ ತೀವ್ರ ಕೊರತೆ ಎದುರಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಲು ನುರಿತ ಕಾರ್ಮಿಕರು ಸಿಗುತ್ತಿಲ್ಲ.

ಕ್ಯಾನ್​ಬೆರಾ (ಆಸ್ಟ್ರೇಲಿಯಾ): ಕಳೆದ 60 ವರ್ಷಗಳಲ್ಲಿಯೇ ಆಸ್ಟ್ರೇಲಿಯಾವು ಅತ್ಯಂತ ತೀವ್ರ ಕುಶಲ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಸರಕಾರದ ಕೌಶಲ್ಯ ಏಜೆನ್ಸಿಯ ಮುಖ್ಯಸ್ಥರು ಬುಧವಾರ ಎಚ್ಚರಿಸಿದ್ದಾರೆ. ಕ್ಯಾನ್​ಬೆರಾದಲ್ಲಿ ನ್ಯಾಷನಲ್ ಪ್ರೆಸ್ ಕ್ಲಬ್ (ಎನ್​ಬಿಸಿ) ಅನ್ನು ಉದ್ದೇಶಿಸಿ ಮಾತನಾಡಿದ ಜಾಬ್ಸ್ ಅಂಡ್ ಸ್ಕಿಲ್ಸ್ ಆಸ್ಟ್ರೇಲಿಯಾ (ಜೆಎಸ್ಎ) ಹಂಗಾಮಿ ಆಯುಕ್ತ ಪೀಟರ್ ಡಾಕಿನ್ಸ್, ದೇಶದ ಶುದ್ಧ ಇಂಧನ ಪರಿವರ್ತನೆಗಾಗಿ ತಜ್ಞ ಕಾರ್ಮಿಕರಿಗೆ ತರಬೇತಿ ನೀಡಲು ತುರ್ತು ಕ್ರಮದ ಅಗತ್ಯವಿದೆ ಎಂದು ಹೇಳಿದರು.

ಜೆಎಸ್ಎ ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಆಸ್ಟ್ರೇಲಿಯಾದಲ್ಲಿ ಶೇಕಡಾ 36 ರಷ್ಟು ಉದ್ಯೋಗಗಳು ಕೌಶಲ್ಯದ ಕೊರತೆಯನ್ನು ಎದುರಿಸುತ್ತಿವೆ. ಇದು 2022 ರಲ್ಲಿ ಶೇಕಡಾ 31 ರಷ್ಟಿತ್ತು. ತಂತ್ರಜ್ಞರು, ವ್ಯಾಪಾರ ಕಾರ್ಮಿಕರು ಮತ್ತು ಆರೋಗ್ಯ, ಎಂಜಿನಿಯರಿಂಗ್ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿನ ವೃತ್ತಿಪರ ಉದ್ಯೋಗಗಳ ಮೇಲೆ ಕುಶಲ ಕಾರ್ಮಿಕರ ಕೊರತೆ ಬಹಳ ಪರಿಣಾಮ ಬೀರಿದೆ.

"ಆಸ್ಟ್ರೇಲಿಯಾವು ವ್ಯಾಪಕವಾದ ಕೌಶಲ್ಯದ ಕೊರತೆಯನ್ನು ಎದುರಿಸುತ್ತಿದೆ, 1960 ರ ದಶಕದಿಂದ ನಾವು ಇಂಥ ಕೌಶಲ್ಯ ಕೊರತೆ ನೋಡಿರಲಿಲ್ಲ" ಎಂದು ಡಾಕಿನ್ಸ್ ಹೇಳಿದರು. ಜೆಎಸ್ಎ-2023 ಉದ್ಯೋಗಗಳು ಮತ್ತು ಕೌಶಲ್ಯ ವರದಿಯು ಮುಂದಿನ ಮೂರು ದಶಕಗಳಲ್ಲಿ ಆಸ್ಟ್ರೇಲಿಯಾದ ಕಾರ್ಮಿಕ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಯನ್ನು ರೂಪಿಸುತ್ತದೆ.

ಕಂಪನಿಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿರುವ ಕಾರ್ಮಿಕರ ಲಭ್ಯತೆಗಾಗಿ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ವಲಸೆ ಬರುವವರ ವಿಷಯಗಳಲ್ಲಿ ಸರ್ಕಾರವು ವಿಶಾಲ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ವರದಿಯು ಶಿಫಾರಸು ಮಾಡಿದೆ ಮತ್ತು ಅತ್ಯಂತ ತೀವ್ರವಾದ ಕಾರ್ಮಿಕರ ಕೊರತೆಯಿರುವ ವೃತ್ತಿಗಳಲ್ಲಿ ಲಿಂಗ ಸಮತೋಲನ ಸುಧಾರಿಸುವುದು ನಿರ್ಣಾಯಕವಾಗಿದೆ ಎಂದು ಹೇಳಿದೆ.

ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುವುದು ಹೇಗೆ?: ನೀವು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಲು ಬಯಸಿದರೆ ನೀವು ಸೂಕ್ತ ವೀಸಾ ಹೊಂದಿರಬೇಕಾಗುತ್ತದೆ. 18 ರಿಂದ 35 ವರ್ಷ ವಯಸ್ಸಿನವರು ವರ್ಕಿಂಗ್ ಹಾಲಿಡೇ ವೀಸಾ (ಸಬ್ ಕ್ಲಾಸ್ 417) ಎಂದು ಕರೆಯಲ್ಪಡುವ ತಾತ್ಕಾಲಿಕ ವೀಸಾವನ್ನು ಪಡೆಯಬಹುದು. ಇದು ಮೂರು ವರ್ಷಗಳವರೆಗೆ ದೇಶದಲ್ಲಿ ಪ್ರಯಾಣಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸೇವಾ ವಲಯವು ಆಸ್ಟ್ರೇಲಿಯಾದ ಆರ್ಥಿಕತೆಯು ಪ್ರಮುಖ ಕ್ಷೇತ್ರವಾಗಿದೆ. ಇದರ ನಂತರ ಕೃಷಿ ವಲಯ ಪ್ರಮುಖವಾಗಿದೆ. ಪ್ರವಾಸೋದ್ಯಮ ಕೂಡ ದೇಶದ ಬಹಳ ದೊಡ್ಡ ವ್ಯವಹಾರವಾಗಿದೆ.

ಇದನ್ನೂ ಓದಿ : ಭಾರತ ಹೊರಗಿನ ಅತಿದೊಡ್ಡ ಅಂಬೇಡ್ಕರ್ ಪ್ರತಿಮೆ ಅ.14ರಂದು ಅಮೆರಿಕದಲ್ಲಿ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.