ETV Bharat / international

ರೈಲುಗಳ ನಡುವೆ ಡಿಕ್ಕಿ : ಹೊತ್ತಿಕೊಂಡ ಬೆಂಕಿ, 26 ಜನರು ಸಾವು

author img

By

Published : Mar 1, 2023, 8:29 AM IST

Updated : Mar 1, 2023, 9:00 AM IST

Fiery train crash, derailment in Greece hurts at least 60
ರೈಲುಗಳ ನಡುವೆ ಡಿಕ್ಕಿ : ಹೊತ್ತಿಕೊಂಡ ಬೆಂಕಿ, 16 ಜನರು ಸಾವು

ಉತ್ತರ ಗ್ರೀಸ್‌ನಲ್ಲಿ ಪ್ರಯಾಣಿಕರ ರೈಲಿಗೆ ಸರಕು ಸಾಗಾಣಿಕೆ ರೈಲು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ

ಥೆಸಲೋನಿಕಿ (ಗ್ರೀಸ್)​: ಪ್ರಯಾಣಿಕರ ರೈಲು ಹಾಗೂ ಸರಕು ಸಾಗಾಣಿಕೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 26 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಗ್ರೀಸ್‌ನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಅಲ್ಲದೆ, ಘಟನೆಯಲ್ಲಿ 85 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಥೆನ್ಸ್‌ನ ಉತ್ತರ ಭಾಗದಲ್ಲಿ ಸುಮಾರು 380 ಕಿಲೋಮೀಟರ್ (235 ಮೈಲು ದೂರ) ದೂರದಲ್ಲಿರುವ ಟೆಂಪೆ ಬಳಿ ಅವಘಡ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕೆಲ ಬೋಗಿಗಳು ಹಳಿತಪ್ಪಿದ್ದಲ್ಲದೆ, ಮೂರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಕನಿಷ್ಠ 25 ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ಹತ್ತಿರದ ಲಾರಿಸ್ಸಾ ನಗರದ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

"ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಎರಡು ರೈಲುಗಳ ನಡುವಿನ ಡಿಕ್ಕಿಯ ತೀವ್ರತೆಯಿಂದಾಗಿ ಈ ಪ್ರಕ್ರಿಯೆಯು ಸಂದಿಗ್ದತೆಯ ನಡುವೆಯೂ ಸಾಗುತ್ತಿದೆ. ಸುಟ್ಟ ಗಾಯಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಹತ್ತಾರು ಆಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ'' ಎಂದು ಅಲ್ಲಿನ ಅಗ್ನಿಶಾಮಕ ಸೇವೆಯ ವಕ್ತಾರ ವಾಸಿಲಿಸ್ ವರ್ತಕೊಯಾನಿಸ್ ಹೇಳಿದ್ದಾರೆ.

ಹೆಡ್ ಲ್ಯಾಂಪ್‌ಗಳನ್ನು ಧರಿಸಿದ ರಕ್ಷಣಾ ಸಿಬ್ಬಂದಿ ದಟ್ಟ ಹೊಗೆಯ ನಡುವೆಯೂ ಕಾರ್ಯಾಚರಣೆ ಕೈಗೊಂಡಿದ್ದಾರೆ. ''ಇದೊಂದು ಅತ್ಯಂತ ಭೀಕರ ಅಪಘಾತವಾಗಿದೆ. ಅಲ್ಲದೆ, ಭಯಾನಕ ರಾತ್ರಿ... ದುರಂತದ ದೃಶ್ಯವನ್ನು ವಿವರಿಸಲು ಕಷ್ಟ," ಎಂದು ಕೇಂದ್ರ ಥೆಸ್ಸಲಿ ಪ್ರದೇಶದ ಪ್ರಾದೇಶಿಕ ಗವರ್ನರ್ ಕೋಸ್ಟಾಸ್ ಅಗೋರಾಸ್ಟೋಸ್ ಅವರು ಸರ್ಕಾರಿ ದೂರದರ್ಶನಕ್ಕೆ ತಿಳಿಸಿದ್ದಾರೆ.

"ರೈಲಿನ ಮುಂಭಾಗವನ್ನು ಒಡೆದು ಹಾಕಲಾಗಿದೆ. ಕ್ರೇನ್‌ಗಳನ್ನು ಒಳಗಡೆ ಕೊಂಡೊಯ್ಯಲು ಮತ್ತು ವಿಶೇಷ ಲಿಫ್ಟಿಂಗ್ ಉಪಕರಣ ಬಳಸಿ ಜಖಂಗೊಂಡ ರೈಲಿನ ಭಾಗಗಳ ತೆರವು ಕಾರ್ಯ ಹಾಗೂ ರೈಲು ಬೋಗಿಗಳನ್ನು ಮೇಲೆತ್ತಲಾಗುತ್ತಿದೆ'' ಎಂದು ಅವರು ಹೇಳಿದ್ದಾರೆ.

ಜೊತೆಗೆ, ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವನ್ನೂ ಪಡೆಯುವ ನಿಟ್ಟಿನಲ್ಲಿ ಸಂಪರ್ಕಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅವಘಡ ಸಂಭವಿಸಿದಾಗ ಅಥೆನ್ಸ್‌ನಿಂದ ಉತ್ತರದ ನಗರವಾದ ಥೆಸಲೋನಿಕಿಗೆ ಉತ್ತರಕ್ಕೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ಸುಮಾರು 350 ಪ್ರಯಾಣಿಕರು ಇದ್ದರು ಎಂದು ರೈಲು ನಿರ್ವಾಹಕ ಹೆಲೆನಿಕ್ ರೈಲು ಹೇಳಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ಹಾಗೂ ಅಪಘಾತದಿಂದ ಪಾರಾದ ಪ್ರಯಾಣಿಕರನ್ನು ಘಟನೆಯ ಉತ್ತರ ಭಾಗದ 130 ಕಿಲೋಮೀಟರ್ (80 ಮೈಲುಗಳು) ದೂರದ ಥೆಸಲೋನಿಕಿಗೆ ಬಸ್ ಮೂಲಕ ಕಳುಹಿಸಲಾಗಿದೆ.

ಇದನ್ನೂ ಓದಿ: ಐದು ವರ್ಷಗಳ ಪ್ರೀತಿ, ಮದುವೆ ನಿರಾಕರಿಸಿದ ಯುವತಿ.. ಚಾಕುವಿನಿಂದ ಇರಿದು ಕೊಂದೇಬಿಟ್ಟ ಪಾಗಲ್​ ಪ್ರೇಮಿ

Last Updated :Mar 1, 2023, 9:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.