ETV Bharat / state

ಪೋಕ್ಸೋ ಪ್ರಕರಣದಲ್ಲಿ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆ: ಆರೋಪಿಗೆ ಜಾಮೀನು - High court

author img

By ETV Bharat Karnataka Team

Published : May 21, 2024, 6:13 AM IST

ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ 70 ವರ್ಷದ ವೃದ್ಧನಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

high court
high court (ETV Bharat)

ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುವ ಮೂಲಕ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ವೃದ್ಧನಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಈ ಪ್ರಕರಣ ಸಂಬಂಧ ಜಾಮೀನು ಕೋರಿ ಚಿಕ್ಕಮಗಳೂರು ಜಿಲ್ಲೆಯ 70 ವರ್ಷದ ವೃದ್ಧ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಆರೋಪ ಗಂಭೀರ ಸ್ವರೂಪದಿಂದ ಕೂಡಿದೆ. 2024ರ ಫೆ.18ರಂದು ಘಟನೆ ನೆಡೆದಿದೆ. ಮೃತನ ತಾಯಿ ಫೆ.27ರಂದು ದೂರು ದಾಖಲಿಸಿದ್ದರು. ಮಾ.7ರಂದು ಆರೋಪಿ, ಜಾಮೀನು ಅರ್ಜಿದಾರ ಬಂಧನಕ್ಕೆ ಒಳಗಾಗಿದ್ದನು. ಹೆಚ್ಚಿನ ತನಿಖೆಗೆ ಆತನ ಬಂಧನ ಅಗತ್ಯವಿರುವುದಾಗಿ ಪ್ರಾಸಿಕ್ಯೂಷನ್‌ ಹೇಳಿಲ್ಲ. ಅರ್ಜಿದಾರನಿಗೆ 70 ವರ್ಷದವನಾಗಿದ್ದು, ಆತನಿಗೆ ಕಿಮಿನಲ್‌ ಹಿನ್ನೆಲೆ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರ 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಾಧಾರ ತಿರುಚಲು ಯತ್ನಿಸಬಾರದು. ಅಗತ್ಯವಿದ್ದಾಗೆಲ್ಲಾ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ಜಾಮೀನು ಮಂಜೂರಾತಿಗೆ ಹೈಕೋರ್ಟ್‌ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಮೃತಪಟ್ಟಿರುವ ದೂರುದಾರ ಮಹಿಳೆಯ ಪುತ್ರ ಹಾಗೂ ಜಾಮೀನು ಅರ್ಜಿದಾರನ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮೃತನು 2024ರ ಫೆ.18ರಂದು ಅರ್ಜಿದಾರರ ಮನೆಗೆ ಬಳಿ ಹೋಗಿದ್ದ. ಆತನನ್ನು ಅರ್ಜಿದಾರ ಮನೆಯೊಳಗೆ ಕರೆದುಕೊಂಡಿದ್ದ ಕೂಡಿಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಅಪ್ರಾಪ್ತೆಯಾದ ಮಗಳನ್ನು ಪ್ರೀತಿಸುತ್ತಿರುವುದಕ್ಕೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದನು ಎಂಬ ಆರೋಪ ಜಾಮೀನು ಅರ್ಜಿದಾರನ ಮೇಲಿದೆ.

ಮೃತನ ತಾಯಿ ನೀಡಿದ್ದ ದೂರು ಆಧರಿಸಿ ಜೀವ ಬೆದರಿಕೆ, ಆತ್ಮಹತ್ಯೆಗೆ ಪ್ರಚೋದನೆ, ವ್ಯಕ್ತಿಯನ್ನು ಅಕ್ರಮವಾಗಿ ಕೂಡಿಹಾಕಿದ ಮತ್ತು ಹಲ್ಲೆ ನಡೆಸಿದ ಆರೋಪದ ಮೇರೆಗೆ ವೃದ್ಧನನ್ನು ಎನ್‌. ಆರ್‌. ಪುರ ಪೊಲೀಸರು ಬಂಧಿಸಿದ್ದರು. ಜಾಮೀನು ನೀಡಲು ಎನ್‌.ಆರ್‌. ಪುರದ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನಿರಾಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂಓದಿ:ಮಾನಸಿಕ ಕ್ರೌರ್ಯದ ಆಧಾರದಲ್ಲಿ 2ನೇ ಬಾರಿ ಪತಿಯೂ ಪತ್ನಿ ವಿರುದ್ಧ ವಿಚ್ಚೇದನ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್ - High court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.