ETV Bharat / entertainment

ರಾಜ್ಯದಲ್ಲೇ ಅತೀ ಎತ್ತರದ ಅಪ್ಪು ಪ್ರತಿಮೆ ನಿರ್ಮಾಣ: 21ರಂದು ಬಳ್ಳಾರಿ ಉತ್ಸವದಲ್ಲಿ ಅನಾವರಣ

author img

By

Published : Jan 19, 2023, 2:11 PM IST

MLA G Somashekhara Reddy
ಶಾಸಕ ಜಿ ಸೋಮಶೇಖರ ರೆಡ್ಡಿ

ಶಿವಮೊಗ್ಗದ ಕಲಾವಿದರ ಕೈಯ್ಯಲ್ಲಿ ಅರಳಿದ ಯುವರತ್ನ ಪುನೀತ್​ ರಾಜ್​ ಕುಮಾರ್​ ಅವರ 23 ಅಡಿ ಎತ್ತರದ ಪ್ರತಿಮೆ ಬಳ್ಳಾರಿ ಉತ್ಸವದಲ್ಲಿ ಅನಾವರಣವಾಗಲಿದೆ.

ಬಳ್ಳಾರಿ: ನಟ ಪುನೀತ್​ ರಾಜ್​ ಕುಮಾರ್​ ನಮ್ಮನ್ನಗಲಿದರೂ, ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಎಂದರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಅಪ್ಪು ಇಹಲೋಕವನ್ನು ಅಗಲಿ ಹೋದಾಗ ತಮ್ಮ ಮನೆಯ ಮಗನನ್ನೇ ಕಳೆದುಕೊಂಡ ಹಾಗೆ ದುಃಖಿಸಿದ್ದರು ಬಳ್ಳಾರಿಗರು. ಈಗ ಆ ಪ್ರೀತಿ ಅಭಿಮಾನಕ್ಕೆ ಸಾಕ್ಷಿಯಾಗಿ ಗಣಿ ನಾಡಲ್ಲಿ ಪುನೀತ್‍ ರಾಜ್​ ಕುಮಾರ್​ ಅವರ ಬೃಹತ್ ಪುತ್ಥಳಿ ತಲೆ ಎತ್ತಿದೆ. ಜನವರಿ 21 ರಂದು ಬಳ್ಳಾರಿ ಉತ್ಸವದ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುತ್ಥಳಿ ಲೋಕಾರ್ಪಣೆ ಮಾಡಲಾಗುವುದು. ಇದಕ್ಕಾಗಿ ಬಳ್ಳಾರಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾಹಿತಿ ನೀಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಮುಂದೆ ಕಬ್ಬಿಣ ಹಾಗೂ ಫೈಬರ್ ಮಿಶ್ರಣದಲ್ಲಿ ಮೂಡಿ ಬಂದಿರುವ 23 ಅಡಿ ಎತ್ತರದ ಪುತ್ಥಳಿ ಸ್ಥಾಪಿಸಲಾಗಿದೆ. 23 ಅಡಿ ಎತ್ತರದ ಈ ಪುತ್ಥಳಿ ಅತೀ ದೊಡ್ಡ ಪುತ್ಥಳಿ ಎನ್ನುವ ಹಿರಿಮೆಗೆ ಪಾತ್ರವಾಗಲಿದೆ. ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ ಮತ್ತು ತಂಡದವರು ಪುನೀತ್ ರಾಜ್​ ಕುಮಾರ್​ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಸತತ ಐದು ತಿಂಗಳು 15 ಜನ ಸೇರಿ ಪುತ್ತಳಿ ತಯಾರಿಸಿದ್ದಾರೆ ಎಂದು ಹೇಳಿದರು.

20 ಲಕ್ಷ ವೆಚ್ಚದಲ್ಲಿ ಈ ಪುತ್ಥಳಿ ನಿರ್ಮಾಣವಾಗಿದ್ದು, ಮೂರು ಸಾವಿರ ಕೆ.ಜಿ ತೂಕ ಹೊಂದಿದೆ. ಮೊದಲಿಗೆ ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡ್ ಮಾಡಿ ಆನಂತರದಲ್ಲಿ ಪ್ರತಿಮೆ ಮಾಡಲಾಗಿದೆ. ಶಿವಮೊಗ್ಗದ ನಿದಿಗೆ ಬಳಿ ಪ್ರತಿಮೆಯನ್ನು ಮಾಡಿ ಈಗ ಬಳ್ಳಾರಿಗೆ ಕಳುಹಿಸಿ ಕೊಟ್ಟಿದ್ದಾರೆ. ಪ್ರತಿಮೆಯನ್ನು ಸಾಗಿಸಲು 40 ಅಡಿ ಉದ್ದದ ಹಾಗೂ 20 ಚಕ್ರದ ಲಾರಿ ಬಳಸಲಾಗಿತ್ತು. ಬೃಹತ್ ಕ್ರೇನ್‍ಗಳನ್ನು ಬಳಸಿ ಲಾರಿಗೆ ಪ್ರತಿಮೆಯನ್ನು ಇರಿಸಿ ಬಳ್ಳಾರಿಗೆ ತಗೆದುಕೊಂಡು ಬರಲಾಗಿದೆ ಎಂದರು.

ಜ.21ರಂದು ಬಳ್ಳಾರಿ ಉತ್ಸವದಂದು ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಕೆರೆಯ ಪಕ್ಕದಲ್ಲಿ 23 ಅಡಿ ಎತ್ತರದ ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲೇ ಅತೀ ಎತ್ತರ ಅಪ್ಪು ಪ್ರತಿಮೆ: ರಾಜ್ಯದಲ್ಲೇ ಅತಿ ಎತ್ತರದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ಶಿವಮೊಗ್ಗದ ಕಲಾವಿದರು ತಯಾರಿಸಿದ್ದಾರೆ. ಬಳ್ಳಾರಿಯ ಅಪ್ಪು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಚಿವ ಶ್ರೀರಾಮುಲು ಪ್ರತಿಮೆ ನಿರ್ಮಿಸಲು ಸೂಚಿಸಿದ್ದರು. ಕಲಾವಿದ ಜೀವನ್ ಎಂಬುವವರು ಪವರ್​​ ಸ್ಟಾರ್ ಪ್ರತಿಮೆಯನ್ನು ಆಕರ್ಷಕವಾಗಿ ನಿರ್ಮಿಸಿದ್ದಾರೆ.

ಗಣಿನಾಡಲ್ಲಿ ಅಪ್ಪು ಪ್ರತಿಮೆ, ಉದ್ಯಾನವನ ನಿರ್ಮಾಣ: ಗಣಿನಾಡು ಬಳ್ಳಾರಿ ಜಿಲ್ಲಿಯ ತಾಳೂರ ರಸ್ತೆಯ ಕುರುವಳ್ಳಿ ಎನ್ ಕ್ಲೈವ್​ನಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಅದ್ಭುತವಾದ ಪ್ರತಿಮೆಯನ್ನು ಮೂರು ತಿಂಗಳ ಹಿಂದೆ ಅನಾವರಣ ಮಾಡಲಾಗಿತ್ತು. 6.50 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಪುನೀತ್​ ರಾಜ್​ ಕುಮಾರ್​ ಅವರ ಪ್ರತಿಮೆಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಲೋಕಾರ್ಪಣೆ ಮಾಡಿದ್ದರು.

ಇದನ್ನೂ ಓದಿ: 23 ಅಡಿ ಎತ್ತರದ ಅಪ್ಪು ಪ್ರತಿಮೆ: ಮಲೆನಾಡ ಕಲಾವಿದನ ಶಿಲ್ಪ ಬಳ್ಳಾರಿಯಲ್ಲಿ ಲೋಕಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.