ETV Bharat / entertainment

ಕಾಂಗ್ರೆಸ್​ ಕಚೇರಿ ಎದುರು ನಟಿ ಅರ್ಚನಾ ಗೌತಮ್ ಮೇಲೆ ಹಲ್ಲೆ ಆರೋಪ - ವಿಡಿಯೋ ವೈರಲ್

author img

By ETV Bharat Karnataka Team

Published : Oct 1, 2023, 10:18 AM IST

Updated : Oct 1, 2023, 10:37 AM IST

ದೆಹಲಿ ಕಾಂಗ್ರೆಸ್​ ಕಚೇರಿ ಎದುರು ನಟಿ ಅರ್ಚನಾ ಗೌತಮ್ ಮತ್ತು ಅವರ ತಂದೆ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ವಿಡಿಯೋ ವೈರಲ್​ ಆಗಿದೆ.

Actress Archana Gautam attacked in front of Delhi Congress office
ನಟಿ ಅರ್ಚನಾ ಗೌತಮ್ ಮೇಲೆ ಹಲ್ಲೆ

ಗಲಾಟೆಯ ವಿಡಿಯೋ ವೈರಲ್

ಹಿಂದಿ ಬಿಗ್ ಬಾಸ್ 16ರ ಮೂಲಕ ಜನಪ್ರಿಯರಾದ ನಟಿ, ಮಾಡೆಲ್ ಅರ್ಚನಾ ಗೌತಮ್ ಹಾಗೂ ಅವರ ತಂದೆ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿಯ ಹೊರಗೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ನಟಿಯ ತಂದೆ ಮಾತನಾಡಿ, ಮಗಳ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಿನ್ನೆ ದೆಹಲಿಯ ಕಾಂಗ್ರೆಸ್​ ಕಚೇರಿ ಬಳಿ ನಟಿ ಅರ್ಚನಾ ಗೌತಮ್ ಮತ್ತು ಅವರ ತಂದೆ ಕಾಣಿಸಿಕೊಂಡಿದ್ದರು. ಅಲ್ಲಿ ನಡೆದಿದೆ ಎನ್ನಲಾದ ಗಲಾಟೆಯ ವಿಡಿಯೋ ವೈರಲ್​ ಆಗಿದೆ. ಮಹಿಳಾ ಮೀಸಲಾತಿ ವಿಚಾರವಾಗಿ, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲು ತಮ್ಮ ಮಗಳು ಅಲ್ಲಿಗೆ ಭೇಟಿ ಕೊಟ್ಟಿದ್ದರು. ನಾನೂ ಜೊತೆಗಿದ್ದೆ. ಆದರೆ ಮಗಳು ಭೇಟಿ ಕೊಡುವ ಮುನ್ನವೇ ಕೆಲವರು ಅಲ್ಲಿಗೆ ಬಂದು ನಿಂತಿದ್ದರು. ಮಗಳನ್ನು ನೋಡಿದ ತಕ್ಷಣ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೂ ಹಲ್ಲೆ ನಡೆದಿದೆ ಎಂದು ನಟಿಯ ತಂದೆ ಆರೋಪಿಸಿದ್ದಾರೆ. ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಅರ್ಚನಾ ಗೌತಮ್ ಅವರ ತಂದೆ ಗೌತಮ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ಮಗಳು ಸಮಯ ತೆಗೆದುಕೊಂಡಿದ್ದಳು. ಅರ್ಚನಾ ಜೊತೆ ನಾನೂ ಕಾಂಗ್ರೆಸ್ ಕಚೇರಿ ತಲುಪಿದ್ದೆ. ಮಗಳು ಕಾರಿನಿಂದ ಇಳಿಯುತ್ತಿದ್ದಂತೆ, ಕೆಲ ಯುವಕರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮೈಮೇಲೆ ಕೈ ಹಾಕಿದರು, ಬಟ್ಟೆಗಳನ್ನು ಎಳೆದರು, ಥಳಿಸಿದರು ಎಂದು ನಟಿಯ ತಂದೆ ಆರೋಪಿಸಿದ್ದಾರೆ.

ನಾನು ಈ ಗಲಾಟೆಯನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಕೆಲ ಜನರು ಪ್ರೇಕ್ಷಕರಂತೆ ನಿಂತು ವಿಡಿಯೋ ಮಾಡುತ್ತಿದ್ದರು. ಯಾರೂ ಮಗಳನ್ನು ಉಳಿಸಲು ಬರಲಿಲ್ಲ. ಮಗಳನ್ನು ರಕ್ಷಿಸಲು ಮುಂದಾದಾಗ ನನ್ನನ್ನೂ ಒದ್ದು ನೆಲಕ್ಕೆ ಬೀಳುವಂತೆ ಮಾಡಿದರು. ಈಗಾಗಲೇ ನಾನು ಅನಾರೋಗ್ಯಕ್ಕೊಳಗಾಗಿದ್ದೇನೆ. ಕಿಡಿಗೇಡಿಗಳು ನನ್ನ ವಯಸ್ಸನ್ನು ಪರಿಗಣಿಸಲಿಲ್ಲ. ಮಗಳು ಸಹಾಯಕ್ಕಾಗಿ ಮನವಿ ಮಾಡಿದರೂ ಸಹ ಕೆಲ ಮಹಿಳೆಯರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಪಿಎಯಿಂದ ನಟಿ ಅರ್ಚನಾ ಗೌತಮ್​ಗೆ ಕೊಲೆ ಬೆದರಿಕೆ ಆರೋಪ.. ದೂರು ದಾಖಲು

ಅರ್ಚನಾ ಗೌತಮ್ ಅವರ ತಂದೆ ಗೌತಮ್ ಬುದ್ಧ ಅವರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಎದ್ದೇಳಲು ಸಹ ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಇದೆ. ಇನ್ನು ಈ ಬಗ್ಗೆ ದೆಹಲಿಯ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅರ್ಚನಾ ಗೌತಮ್ ಅವರ ತಂದೆ ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಪಿಎ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದು, ನ್ಯಾಯ ಸಿಗುವ ಭರವಸೆಯಲ್ಲಿ ಗೌತಮ್​ ಕುಟುಂಬವಿದೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಯಸಿದ್ರೆ ಚುನಾವಣೆಗೆ ಸ್ಪರ್ಧೆ: ನಟಿ ಅರ್ಚನಾ ಗೌತಮ್

Last Updated :Oct 1, 2023, 10:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.