ETV Bharat / entertainment

ದೈವ ಸನ್ನಿಧಿಯಲ್ಲಿ 'ಕಾಂತಾರ' ನಟ: ಕೋಲದ ವಿಡಿಯೋ ಹಂಚಿಕೊಂಡ ರಿಷಬ್​ ಶೆಟ್ಟಿ

author img

By ETV Bharat Karnataka Team

Published : Jan 14, 2024, 5:08 PM IST

Updated : Jan 14, 2024, 5:31 PM IST

Rishab Shetty participated in Kola
ದೈವದ ಸನ್ನಿಧಿಯಲ್ಲಿ ರಿಷಬ್​ ಶೆಟ್ಟಿ

ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದ ವಿಡಿಯೋವನ್ನು ಡಿವೈನ್​ ಸ್ಟಾರ್ ಜನಪ್ರಿಯತೆಯ ರಿಷಬ್​ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಕಾಂತಾರ' ಸಿನಿಮಾ ಮೂಲಕ ಜನಪ್ರಿಯರಾಗಿರುವ ನಟ ರಿಷಬ್​ ಶೆಟ್ಟಿ ಅವರು ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಅಪಾರ ನಂಬಿಕೆ ಇಟ್ಟವರು. ಇವರ ಜೀವನ ಶೈಲಿ, ನಡೆ ನುಡಿ, ಅನುಸರಿಸುವ ಪದ್ಧತಿಗಳು ತುಳುನಾಡ ಸಂಸ್ಕೃತಿಯ ಪ್ರತಿಬಿಂಬವಾಗಿ ಗುರುತಿಸಿಕೊಳ್ಳುತ್ತವೆ. 'ಕಾಂತಾರ' ಕೂಡ ಇಂಥದ್ದೇ ಸಂಪ್ರದಾಯ, ದೈವಿಕ ಅಂಶಗಳನ್ನೊಳಗೊಂಡ ಸಿನಿಮಾ. ಇದೀಗ ದೈವ ಸನ್ನಿಧಿಗೆ ನಟ ಭೇಟಿ ಕೊಟ್ಟು, ಆಶೀರ್ವಾದ ಪಡೆದುಕೊಂಡಿದ್ದಾರೆ.

ಕರಾವಳಿ ಭಾಗದಲ್ಲಿ 'ಕೋಲ', 'ಭೂತಾರಾಧನೆ' ವಿಶೇಷ ಮಹತ್ವ ಹೊಂದಿದೆ. ಅಪಾರ ಸಂಖ್ಯೆಯ ಭಕ್ತರು ಈ ಆಚರಣೆಗಳ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ರಿಷಬ್​ ಶೆಟ್ಟಿ ಕುಟುಂಬ ನೇಮೋತ್ಸವದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. 'ದೈವದ ಸನ್ನಿದಿಯಲ್ಲಿ, ಆಶೀರ್ವಾದ ಪಡೆದ ಕ್ಷಣಗಳು...' ಎಂಬ ಶೀರ್ಷಿಕೆಯಡಿ ವಿಡಿಯೋ ಹಂಚಿಕೊಂಡಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಜೊತೆಗಿದ್ದರು. ದಂಪತಿಗೆ ದೈವ ಏನನ್ನೋ ಸೂಚಿಸಿದಂತಿದೆ. ನಟನ ಕೈ ಹಿಡಿದು ಆಶೀರ್ವಾದ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೊಸ ವರ್ಷಾರಂಭದ ಸಂದರ್ಭದಲ್ಲೂ ನಟ-ನಿರ್ದೇಶಕ ರಿಷಬ್​ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ವಜ್ರದೇಹಿ ಮಠದ ಜಾತ್ರೆಯ ಸಂದರ್ಭ ಮೈಸಂದಾಯ ಮತ್ತು ಲೆಕ್ಕೇಸಿರಿ ದೈವಗಳ ನೇಮೋತ್ಸವ ನಡೆದಿತ್ತು. ಕೋಲದಲ್ಲಿ ಭಾಗಿಯಾಗಿದ್ದ ನಟನಿಗೆ ಮೈಸಂದಾಯ ದೈವ ಆಶೀರ್ವಾದ ಮಾಡಿತ್ತು. ಯಾವುದಕ್ಕೂ ಭಯ ಬೇಡ, ಮುನ್ನುಗ್ಗು ಎಂದು ಶೆಟ್ರ ತಲೆ ಸವರಿ ಆಶೀರ್ವದಿಸಿತ್ತು.

ಇದನ್ನೂ ಓದಿ: 'ಭಯ ಪಡಬೇಡ, ಮುನ್ನುಗ್ಗು': ರಿಷಬ್ ಶೆಟ್ಟಿಗೆ ಮೈಸಂದಾಯ ದೈವದ ಅಭಯ

ಇತ್ತೀಚೆಗಷ್ಟೇ ರಿಷಬ್​ ಶೆಟ್ಟಿ ಜನಪ್ರಿಯ ಸಿನಿಮಾ ನಿರ್ದೇಶಕ ಅಶುತೋಷ್ ಗೋವಾರಿಕರ್​ ಜೊತೆ ಕಾಣಿಸಿಕೊಂಡಿದ್ದರು. ಶುಕ್ರವಾರ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಪ್ರೊಜೆಕ್ಟ್​ ಕುರಿತು ಹಲವು ಊಹಾಪೋಹಗಳೆದ್ದಿವೆ. ಈ ಇಬ್ಬರ ಹೆಸರು ಕಳೆದ ಕೆಲ ಸಮಯದಿಂದ ಕೇಳಿಬರುತ್ತಿದೆ. ಒಟ್ಟಿಗೆ ಕಾಣಿಸಿಕೊಂಡ ನಂತರವಂತೂ ಇಬ್ಬರು ಸಿನಿಮಾ ಮಾಡಲಿದ್ದಾರೆಂದೇ ಹೇಳಲಾಯ್ತು. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದರು. ಚಿತ್ರದ ಬಗ್ಗೆ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ದೈವ ಸನ್ನಿಧಿಯಲ್ಲಿ 'ಕಾಂತಾರ' ನಟ: ಕೋಲದ ವಿಡಿಯೋ ಹಂಚಿಕೊಂಡ ರಿಷಬ್​ ಶೆಟ್ಟಿ

2022ರ ಸೆಪ್ಟೆಂಬರ್​ 30ರಂದು ತೆರೆಕಂಡ 'ಕಾಂತಾರ' ಅಭೂತಪೂರ್ವ ಯಶ ಕಂಡಿತ್ತು. ಕನ್ನಡದಲ್ಲಿ ತೆರೆಕಂಡು ಸಿನಿಪ್ರಿಯರ ಬೇಡಿಕೆಯ ಮೇರೆಗೆ ಬಹುಭಾಷೆಗಳಿಗೆ ಡಬ್​ ಆಗಿ ತೆರೆಕಂಡಿತು. ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ಖ್ಯಾತನಾಮರಿಂದಲೂ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತು. ಬಹುದಿನಗಳವರೆಗೆ 'ಕಾಂತಾರ' ಸದ್ದು ಮಾಡಿದ್ದು, ಈಗಲೂ ಅನೇಕರ ಅಚ್ಚುಮೆಚ್ಚಿನ ಚಿತ್ರವಾಗಿದೆ. ಸಿನಿಮಾಗೆ ಸಿಕ್ಕ ದೊಡ್ಡ ಗೆಲುವಿನ ಹಿನ್ನೆಲೆಯಲ್ಲಿ ಚಿತ್ರದ ಮತ್ತೊಂದು ಭಾಗ ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಾಂತಾರ ಪ್ರೀಕ್ವೆಲ್​​ ಪ್ರೀ ಪ್ರೊಡಕ್ಷನ್​ ಹಂತದಲ್ಲಿದೆ. ಬಹುತೇಕ ಹಿಟ್​ ಸಿನಿಮಾಗಳನ್ನೇ ಕೊಟ್ಟಿರುವ 'ಹೊಂಬಾಳೆ ಫಿಲ್ಮ್ಸ್' ನಿರ್ಮಾಣದ ಚಿತ್ರ ಇದೇ ಸಾಲಿನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಕಾಂತಾರ ಪ್ರೀಕ್ವೆಲ್​​ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Last Updated :Jan 14, 2024, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.