ETV Bharat / city

ಹಾಸನ ರೇವ್ ಪಾರ್ಟಿ ಪ್ರಕರಣ: ಮಂಗಳೂರು ಇಎನ್​ಸಿ ಮಹಿಳಾ ಹೆಡ್ ​ಕಾನ್ಸ್​ಟೇಬಲ್ ಅಮಾನತು

author img

By

Published : Apr 17, 2021, 5:31 PM IST

Mangalore
ಪೊಲೀಸ್ ಆಯುಕ್ತ ಶಶಿಕುಮಾರ್ ಎನ್

ಹಾಸನ ಜಿಲ್ಲೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಐದೂರು ಎಂಬಲ್ಲಿ ಯಾವುದೇ ಅನುಮತಿ ಇಲ್ಲದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ರೇವ್ ಪಾರ್ಟಿ ನಡೆಸಿದ್ದರು‌. ಪ್ರಕರಣ ಸಂಬಂಧ ಮಂಗಳೂರಿನ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಶ್ರೀಲತಾ ಅಮಾನತುಗೊಂಡಿದ್ದಾರೆ.

ಮಂಗಳೂರು: ಹಾಸನ ರೇವ್ ಪಾರ್ಟಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪದ ಮೇಲೆ ಮಂಗಳೂರಿನ ಎಕನಾಮಿಕ್ ಮತ್ತು ನಾರ್ಕೊಟಿಕ್ ಹಾಗೂ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಶ್ರೀಲತಾರನ್ನು ಅಮಾನತು ಮಾಡಲಾಗಿದೆ.

ಪೊಲೀಸ್​ ಆಯುಕ್ತ

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಏ. 10ರಂದು ಹಾಸನ ಜಿಲ್ಲೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಐದೂರು ಎಂಬಲ್ಲಿ ನಡೆದಿರುವ ರೇವ್ ಪಾರ್ಟಿಯಲ್ಲಿ 131 ಮಂದಿ ಯಾವುದೇ ಅನುಮತಿ ಇಲ್ಲದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಭಾಗಿಯಾಗಿದ್ದರು. ಇಲ್ಲಿ ಮದ್ಯಪಾನ, ಡ್ರಗ್ಸ್ ಪಾರ್ಟಿಯೂ ನಡೆದಿತ್ತು‌ ಎಂದು ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಮಂಗಳೂರಿನ ಎಕನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಶ್ರೀಲತಾ ಎಂಬಾಕೆ ತಾನು ಮಂಗಳೂರು ಸಿಸಿಬಿ ಪೊಲೀಸ್ ಎಎಸ್ಐ ಎಂದು ತಪಾಸಣೆಗೆ ಬಂದ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದಾರೆ‌. ಅಲ್ಲದೆ ಆಕೆಯ ಪುತ್ರ ಈ ಪಾರ್ಟಿಯಲ್ಲಿ ನೇರವಾಗಿ ಭಾಗಿಯಾಗಿದ್ದು, ಆತ ಪಾರ್ಟಿ ಆಯೋಜನೆ ಮಾಡಿರುವ ರೆಸಾರ್ಟ್​ನವರೊಂದಿಗೆ ಒಂದು ವಾರದಿಂದ ಸಂಪರ್ಕದಲ್ಲಿದ್ದ. ಶ್ರೀಲತಾ ಕೂಡ ಮಗನೊಂದಿಗೆ, ಪಾರ್ಟಿ ಆಯೋಜಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದರು.

ಇದನ್ನೂ ಓದಿ: ಶಾಕಿಂಗ್​​: ಲೇಡಿ ಪೊಲೀಸ್ ಮತ್ತು ಆಕೆಯ ಮಗನಿಂದ ರೇವ್ ಪಾರ್ಟಿ ಆಯೋಜನೆ: ಹಾಸನ ಎಸ್ಪಿ

ಆಕೆಯನ್ನು ಈಗಾಗಲೇ ಹಾಸನ ಆಲೂರಿನ ಪೊಲೀಸರು ವಶಕ್ಕೆ ತೆಗೆದುಕೊಂಡು ಜಾಮೀನಿನ ಮೇಲೆ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಶ್ರೀಲತಾರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಅಧಿಕಾರಿ ಮಟ್ಟದಿಂದ ಸಂಪೂರ್ಣ ವಿಚಾರಣಾ ವರದಿಯನ್ನು ತರಿಸಿಕೊಂಡು ಆ ಬಳಿಕ ಯಾವ ರೀತಿ ಕ್ರಮಕೈಗೊಳ್ಳಬೇಕೆಂದು ನಿರ್ಧರಿಸಲಾಗುತ್ತದೆ‌‌ ಎಂದು ಶಶಿಕುಮಾರ್ ಎನ್. ಹೇಳಿದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.