ETV Bharat / city

'ಹಿಜಾಬ್ ಹೋರಾಟದಿಂದ ನಮ್ಮ ಶಿಕ್ಷಣ ಸ್ಥಗಿತವಾಗಿದೆ, ನಮ್ಮನ್ನು ತಡೆಯಲು ಸಾಧ್ಯವಿಲ್ಲ'

author img

By

Published : Jul 17, 2022, 10:14 AM IST

ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹಿಜಾಬ್ ವಿವಾದ ಸದ್ಯಕ್ಕೆ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಮುಂದಿನ ವಾರದಿಂದ ವಿಚಾರಣೆ ಆರಂಭವಾಗಲಿದೆ. ಈ ನಡುವೆಯೇ ನಿನ್ನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರಿನಲ್ಲಿ ಗರ್ಲ್ಸ್​ ಕಾನ್ಫರೆನ್ಸ್ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

GIRLS CONFERENCE
ಮಂಗಳೂರಿನಲ್ಲಿ ಆಯೋಜಿಸಿದ ಗರ್ಲ್ಸ್ ಕಾನ್ಫರೆನ್ಸ್​

ಮಂಗಳೂರು: ನಗರದ ಪುರಭವನದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ವತಿಯಿಂದ ಆಯೋಜಿಸಿದ ಗರ್ಲ್ಸ್ ಕಾನ್ಫರೆನ್ಸ್​ನಲ್ಲಿ ಹೈಕೋರ್ಟ್​ ಹಾಗೂ ಸರ್ಕಾರ ನೀಡಿರುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್, "ಹಿಜಾಬ್ ಹೋರಾಟದಲ್ಲಿ ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಡುತ್ತಿದ್ದಾರೆ. ಆರ್​ಎಸ್​ಎಸ್ ಮತ್ತು ಹಿಂದುತ್ವದ ವಿರುದ್ಧ ಈ ಹೋರಾಟ ನಡೆಯುತ್ತಿದೆ. ಒಂದು ಕೈಯ್ಯಲ್ಲಿ ಓದು ಮತ್ತೊಂದು ಕೈಯ್ಯಲ್ಲಿ ಹೋರಾಟ ಮಾಡುತ್ತಿದ್ದಾರೆ" ಎಂದರು.


'ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ': ಉಡುಪಿ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಮಾತನಾಡಿ, "ಸುಪ್ರೀಂಕೋರ್ಟ್​ನಲ್ಲಿ ಮುಂದಿನ ವಾರದಿಂದ ಹಿಜಾಬ್ ಕುರಿತಾದ ವಿಚಾರಣೆ ನಡೆಯಲಿದೆ. ಹಿಜಾಬ್​ ವಿವಾದ ಉಂಟಾದಾಗಿನಿಂದ ಜೀವನದಲ್ಲಿ ಬಹಳಷ್ಟು ತಾಳ್ಮೆ ಕಲಿತುಕೊಂಡಿದ್ದೇವೆ. ಕಾಲೇಜು, ಮನೆ, ಅಂಗಡಿ ಎಲ್ಲ ಕಡೆ ಹಿಜಾಬ್ ಧರಿಸಿಯೇ ಹೋಗುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಹೋರಾಟದಿಂದಾಗಿ ನಮ್ಮ ಶಿಕ್ಷಣ ಸ್ಥಗಿತವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಭಾರತ ಹೆಣ್ಣು ಮಕ್ಕಳಿಗೆ ಅಪಾಯಕಾರಿ ದೇಶ': ಮಂಗಳೂರಿನಲ್ಲಿ ಹಿಜಾಬ್ ಪರ ಹೋರಾಟ ಮಾಡಿದ ಗೌಸಿಯಾ ಮಾತನಾಡಿ, "ಭಾರತ ಹೆಣ್ಣು ಮಕ್ಕಳಿಗೆ ಅಪಾಯಕಾರಿ ದೇಶವಾಗಿದೆ. ದೇಶದಲ್ಲಿ ಮಹಿಳಾ ದೌರ್ಜನ್ಯ 70% ರಷ್ಟಿದೆ. ಕಳೆದ ನಾಲ್ಕು ವರ್ಷದಿಂದ ಮಹಿಳಾ ದೌರ್ಜನ್ಯ ಹೆಚ್ಚಳವಾಗಿದೆ. ದೇಶದಲ್ಲಿ ಒಂದು ಗಂಟೆಗೆ 48 ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಾರೆ. ಸರ್ಕಾರ ಹಿಜಾಬ್ ಧರಿಸದಂತೆ ಸುತ್ತೋಲೆ ಮಾಡುವ ಬದಲು ಅತ್ಯಾಚಾರಿಗಳಿಗೆ, ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಲಿ" ಎಂದರು.

'ಬ್ಯಾರಿಕೇಡ್​ ಅರಬ್ಬಿ ಸಮುದ್ರಕ್ಕೆ..': ಬಳಿಕ ಮಾತನಾಡಿದ ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ, "ಸಿಎಫ್ಐ ಜಾಥಾವನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿರಬಹುದು. ಆದರೆ, ಈ ಬ್ಯಾರಿಕೇಡ್​ಗಳನ್ನು ಮುಂದೊಂದು ದಿನ ಅರಬ್ಬಿ ಸಮುದ್ರಕ್ಕೆ ಬಿಸಾಡುವ ಸಮಯ ಬರಲಿದೆ" ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಸಿಎಫ್ಐ ಗರ್ಲ್ಸ್​ ಕಾನ್ಫರೆನ್ಸ್​: ಅನುಮತಿ ನೀಡದಿದ್ದರೂ ರ‍್ಯಾಲಿಗೆ ಯತ್ನ, ಪೊಲೀಸರಿಂದ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.