ETV Bharat / city

ಶಿವರಾಮ ಕಾರಂತ ಬಡಾವಣೆ ವಿವಾದ.. ಸಿಎಂ ವಿವರಣೆಗೆ ಹ್ಯಾಟ್ಸ್​ ಆಫ್​ ಹೇಳಿದ್ರು ನಾರಾಯಣಸ್ವಾಮಿ

author img

By

Published : Sep 23, 2021, 4:42 PM IST

we called meeting for solve the shivaram karanth layout issue: CM Bommai
ಶಿವರಾಮ ಕಾರಂತ ಬಡಾವಣೆ ವಿವಾದ ಬಗೆಹರಿಸಲು ಸಭೆ ಮಾಡ್ತೀವಿ: ಸಿಎಂ ಬೊಮ್ಮಾಯಿ

ಶಿವರಾಮ ಕಾರಂತ ಬಡಾವಣೆ ವಿಷಯಕ್ಕೆ ಬಹಳ ದೊಡ್ಡ ಇತಿಹಾಸ, ಕಾನೂನಿನ ನಿರ್ಬಂಧಗಳು ಇವೆ. ವಿವಾದ ಬಗೆಹರಿಸುವ ಸಂಬಂಧ ಪ್ರತಿನಿಧಿಗಳು, ಅಧಿಕಾರಿಗಳು, ಸುಪ್ರೀಂಕೋರ್ಟ್​ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಸದಸ್ಯರ ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಪರಿಷತ್‌ಗೆ ತಿಳಿಸಿದ್ದಾರೆ.

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿವಾದ ಬಗೆಹರಿಸುವ ಸಂಬಂಧ ಪ್ರತಿನಿಧಿಗಳು, ಅಧಿಕಾರಿಗಳು, ಸುಪ್ರೀಂಕೋರ್ಟ್​ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಸದಸ್ಯರನ್ನು ಒಳಗೊಂಡು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಭೆ ನಡೆಸಿ ಶಿವರಾಮ ಕಾರಂತ ಬಡಾವಣೆ ವಿವಾದ ಬಗೆಹರಿಸುತ್ತೇವೆ: ಸಿಎಂ ಬೊಮ್ಮಾಯಿ

ಶಿವರಾಮ ಕಾರಂತ ಬಡಾವಣೆ ಕುರಿತು ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ, ಶಿವರಾಮ ಕಾರಂತ ಬಡಾವಣೆ ವಿಷಯಕ್ಕೆ ಬಹಳ ದೊಡ್ಡ ಇತಿಹಾಸ, ಕಾನೂನಿನ ನಿರ್ಬಂಧಗಳು ಇವೆ. ನಗರೀಕರಣ ಆಗುತ್ತಿದ್ದಂತೆ ಗ್ರಾಮಗಳ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಆದರೆ ಅದಕ್ಕಾಗಿ ಒಂದು ನೀತಿಯಿಲ್ಲ, ಯಾವ ನೀತಿ ಅನುಸರಿಸಬೇಕು ಎನ್ನುವ ಸ್ಪಷ್ಟತೆ ಇಲ್ಲ. ಈ ಬಗ್ಗೆ ನಾವೆಲ್ಲಾ ಚಿಂತನೆ ಮಾಡಬೇಕು ಎಂದರು.

ಬೆಂಗಳೂರು ಉತ್ತರದ ಸೋಮಶೆಟ್ಡಿಹಳ್ಳಿ ಇತರೆಡೆ 3,546 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಾಲ್ಕು ಬಡಾವಣೆ ಮಾಡಲು ಎಸ್ಎಂ ಕೃಷ್ಣ ಸರ್ಕಾರ ತೀರ್ಮಾನಿಸಿತ್ತು. ಕೆಂಪೇಗೌಡ, ಶಿವರಾಮ ಕಾರಂತ ಬಡಾವಣೆ ಉಳಿಸಿಕೊಂಡು ಇನ್ನೆರಡು ಪ್ರಸ್ತಾಪ ಕೈಬಿಡಲಾಯಿತು. ಕೆಂಪೇಗೌಡ ಬಡಾವಣೆ ಮತ್ತು ಶಿವರಾಮ ಕಾರಂತ‌ ಬಡಾವಣೆಯಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಕೋರ್ಟ್‌ಗಳು ಹಲವು ತೀರ್ಪು ಕೊಟ್ಟಿವೆ. ಹಾಗಾಗಿ ಸುಪ್ರೀಂ ಮೊರೆ ಹೋಗಲಾಗಿದೆ ಎಂದು ಸದನಕ್ಕೆ ವಿವರಿಸಿದರು.

2013ರ ಭೂ ಸ್ವಾಧೀನ ಕಾಯ್ದೆ ಇದಕ್ಕೆ ಅನ್ವಯಿಸಲ್ಲ ಎಂದು ಕೋರ್ಟ್‌ ತೀರ್ಪು:

2008 ರಲ್ಲಿ ಪ್ರಾಥಮಿಕ ಅಧಿಸೂಚನೆ‌ ಹೊರಡಿಸಿದ್ದನ್ನು 2015 ರಲ್ಲಿ ಹೈಕೋರ್ಟ್ ರದ್ದುಪಡಿಸಿತು. ದ್ವಿಸದಸ್ಯ ಪೀಠವೂ 2017 ರಲ್ಲಿ ಬಿಡಿಎ ಮೇಲ್ಮನವಿ ಅರ್ಜಿ ವಜಾಗೊಳಿಸಿತ್ತು. 2018 ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಆದೇಶ ನೀಡಿತು. 2013ರ ಭೂ ಸ್ವಾಧೀನ ಕಾಯ್ದೆ ಇದಕ್ಕೆ ಅನ್ವಯಿಸಲ್ಲ ಎಂದು ತೀರ್ಪು ನೀಡಿತು. ಅದರ ಅನ್ವಯ ಬಿಡಿಎಗೆ ಸರ್ಕಾರ ಒಂದು ಆದೇಶ ಮಾಡಿದೆ. ರೈತರಿಗೆ ಜಾಗಕ್ಕೆ ಬದಲಾಗಿ 60:40ರ ಅನುಪಾತದಂತೆ ನಿವೇಶನ ಕೊಡುವ ತೀರ್ಮಾನ ಅಥವಾ 2008 ರಂತೆ ಹಣ ಕೊಡಬಹುದು ಎನ್ನುವುದು ಈಗಿರುವ ನಿಲುವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಸದ್ಯ ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿ ಮನೆ, ವಾಣಿಜ್ಯ ಕಟ್ಟಡ, ಖಾಲಿ ಜಾಗ ಎಲ್ಲಾ ಇದೆ. ಇದನ್ನೆಲ್ಲಾ ನಿರ್ವಹಿಸಲು ಸುಪ್ರೀಂ ಕೋರ್ಟ್ ಮೂರು ಜನರ ಸಮಿತಿ ರಚಿಸಿದೆ. ಜಮೀನು, ಮನೆ, ವಾಣಿಜ್ಯ ಕಟ್ಟಡ ಸ್ವಾಧೀನ ಎಲ್ಲವೂ ಈಗ ಬಿಡಿಎ ಕೈಯಲ್ಲಿ ಇಲ್ಲ, ಈ ಸಮಿತಿ ಕೈಯಲ್ಲಿದೆ. ಎಲ್ಲಾ ಸಮಿತಿಯೇ ನಿರ್ವಹಣೆ ಮಾಡಲಿದೆ. ಉದ್ದೇಶಿತ ಬಡಾವಣೆ ಜಾಗದಲ್ಲಿ 3,546 ಎಕರೆ ಸಂಪೂರ್ಣ ಲಭ್ಯವಿಲ್ಲ. ಹಲವಾರು ಮನೆಗಳಿವೆ, ಕೆಲ ರೈತರು ಜಾಗ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

ಮೂವರು ಸದಸ್ಯರ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಕೆಲಸ:

ಸುಪ್ರೀಂ ಕೋರ್ಟ್ ಆದೇಶವನ್ನು ಯಾರೂ ಮೀರಲು ಸಾಧ್ಯವಿಲ್ಲ. ಹಾಗಾಗಿ ಇದರ ಬಗ್ಗೆ ವಿಶೇಷ ಸಭೆ ಕರೆದು ಸುಪ್ರೀಂ ಕೋರ್ಟ್ ಆದೇಶ ಹೇಗೆ ಪಾಲಿಸಬೇಕು, ಯೋಗ್ಯ ಪರಿಹಾರ ನೀಡುವುದೇಗೆ, ಲಭ್ಯ ಜಾಗದಲ್ಲಿ ನಿವೇಶನ ಮಾಡುವುದು, ಬರುವ ಹಣದಿಂದ ಅಭಿವೃದ್ಧಿ ಮಾಡುವುದು ಸೇರಿದಂತೆ ಯಾವ ರೀತಿ ಮುಂದುವರೆಯಬೇಕು ಎನ್ನುವ ಕುರಿತು ಮೂವರು ಸದಸ್ಯರ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕಿದೆ. ಅಲ್ಲಿನ‌ ಜನಪ್ರತಿನಿಧಿ, ಅಧಿಕಾರಿಗಳು, ಸಮಿತಿ ಸದಸ್ಯರು ಎಲ್ಲರೂ ಒಂದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳೋಣ ಎಂದರು.

ಸಿಎಂ ಉತ್ತರವನ್ನು ಸದಸ್ಯ ನಾರಾಯಣಸ್ವಾಮಿ ಸ್ವಾಗತಿಸಿದರು. ಇಂತಹ ಉತ್ತರವನ್ನೇ ನಾನು ನಿರೀಕ್ಷೆ ಮಾಡಿದ್ದೆ, ಹ್ಯಾಟ್ಸ್ ಆಫ್ ಹೇಳುತ್ತೇನೆ, ಉತ್ತಮ ಉತ್ತರ ನೀಡಿದ್ದಾರೆ ಎಂದರು.

ಸಿಎಂ ಗರಂ:

ಪರಿಷತ್​ನಲ್ಲಿ ಮಹಿಳಾ ಸಿಬ್ಬಂದಿ ಮಾತಿನಲ್ಲಿ ಬ್ಯುಸಿಯಾಗಿದ್ದರು. ಇದನ್ನು ಕಂಡ ಸಿಎಂ ಬೊಮ್ಮಾಯಿ ಗರಂ ಆದ್ರು. ಮೇಡಂ ಮೇಡಂ ನೀವಿಲ್ಲ ಮಾತಾಡಲು ಕುಳಿತಿದ್ದೀರಾ? ಕೆಲಸ‌ ಮಾಡಲು ಕುಳಿತಿದ್ದೀರಾ? ಎಂದು ಖಾರವಾಗಿಯೇ ಪ್ರಶ್ನಿಸಿದರು. ಸಿಎಂ ಉತ್ತರ ಹೇಳಲು ಎದ್ದು ನಿಲ್ಲುತ್ತಿದ್ದಂತೆ ಸಭಾಪತಿ ಪೀಠದ ಮುಂಭಾಗದಲ್ಲಿ ಸದಸ್ಯರ ಹೇಳಿಕೆ ದಾಖಲಿಸಿಕೊಳ್ಳಲು ಕುಳಿತಿರುವ ಸಿಬ್ಬಂದಿ ಮಾತುಕತೆ ನಡೆಸುತ್ತಿದ್ದರು. ಇದನ್ನು ನೋಡಿ ಸಿಎಂ ಗರಂ ಆಗಿ ಸುಮ್ಮನೆ ಕೂರುವಂತೆ ತಾಕೀತು ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.