ETV Bharat / city

ಸಾರಿಗೆ ಮುಷ್ಕರ: ಬ್ರಹ್ಮಾಸ್ತ್ರಕ್ಕೂ ಮೊದಲು ಸಾಮಾನ್ಯ ಅಸ್ತ್ರ ಪ್ರಯೋಗ!

author img

By

Published : Apr 7, 2021, 8:10 PM IST

possibilities-of-esma-enforcement-on-transportation-employees
ಸಾರಿಗೆ ಮುಷ್ಕರ: ಬ್ರಹ್ಮಾಸ್ತ್ರಕ್ಕೂ ಮೊದಲು ಸಾಮಾನ್ಯ ಅಸ್ತ್ರ ಪ್ರಯೋಗ...!

ನಾಳೆಯೂ ಮುಷ್ಕರ ಮುಂದುವರೆಸುವಂತೆ ಸಾರಿಗೆ ನೌಕರರು ಪ್ರಕಟಣೆ ಹೊರಡಿಸಿದ್ದು, ಸಾರಿಗೆ ನೌಕರರ ಮೇಲೆ ಒತ್ತಡ ಹೇರುವ ತಂತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು: ಸರ್ಕಾರದ ಮನವಿಗೆ ಸ್ಪಂದಿಸದೆ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸಂಧಾನದ ಬಾಗಿಲು ಮುಚ್ಚಿರುವ ಸರ್ಕಾರ, ಎಸ್ಮಾ ಎನ್ನುವ ಬ್ರಹ್ಮಾಸ್ತ್ರದ ಪ್ರಯೋಗಕ್ಕೆ ಮುಂದಾಗದೆ ವೇತನ ಕಡಿತದ ಅಸ್ತ್ರ ಪ್ರಯೋಗಿಸಿದೆ.

ಸಾರಿಗೆ ನೌಕರರ ಮೊದಲನೇ ದಿನದ ಮುಷ್ಕರ ಯಶಸ್ವಿಯಾಗಿ ಮುಗಿದಿದೆ. ನಾಳೆಯೂ ಮುಷ್ಕರ ಮುಂದುವರೆಸುವ ಪ್ರಕಟಣೆ ಹೊರಡಿಸಿದ್ದು, ಆರನೇ ವೇತನ ಆಯೋಗವನ್ನು ಅನ್ವಯಗೊಳಿಸುವ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರೆಸುವ ಘೋಷಣೆ ಮಾಡಿದೆ.

ಮುಷ್ಕರಕ್ಕೂ ಮುನ್ನ ಸಾಕಷ್ಟು ಮನವಿ ಮಾಡಿದ್ದ ಸರ್ಕಾರ ಇದೀಗ ಸಂಧಾನದ ಬಾಗಿಲನ್ನು ಮುಚ್ಚಿದೆ. ಶೇಕಡಾ 8ರಷ್ಟು ವೇತನ ಹೆಚ್ಚಳ ಮಾಡುವ ಭರವಸೆ ನೀಡುತ್ತಾ ಮುಷ್ಕರ ಕೈಬಿಡುವಂತೆ ಮನವಿ ಮಾಡುತ್ತಿದೆ. ಇಷ್ಟಾದರೂ ಮುಷ್ಕರ ನಿಲ್ಲದ ಹಿನ್ನೆಲೆಯಲ್ಲಿ ಇದೀಗ ಸಾರಿಗೆ ನೌಕರರ ಮೇಲೆ ಒತ್ತಡ ಹೇರುವ ತಂತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಬ್ರಹ್ಮಾಸ್ತ್ರಕ್ಕೂ ಮುನ್ನ ಸಾಮಾನ್ಯ ಅಸ್ತ್ರ ಪ್ರಯೋಗ

ಏಕಾಏಕಿ ಎಸ್ಮಾ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ. ಸಾರಿಗೆ ನೌಕರರ ತೀವ್ರ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ. ಉಪ ಚುನಾವಣೆ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕೆ ಎಸ್ಮಾ ಎನ್ನುವ ಬ್ರಹ್ಮಾಸ್ತ್ರ ಪ್ರಯೋಗಕ್ಕೂ ಮೊದಲು ವೇತನ ಕಡಿತ ಎನ್ನುವ ಸಾಮಾನ್ಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಇದನ್ನೂ ಓದಿ: ಕೇವಲ 19 ವರ್ಷ, 27 ಕಳ್ಳತನ: ಖತರ್ನಾಕ್ ಕಳ್ಳನ ಕಥೆ ಇದು..!

ಮುಷ್ಕರದ ಸಮಯದ ವೇತನ ಕಡಿತ ಮಾಡುವ ಜೊತೆಗೆ ಮಾರ್ಚ್ ತಿಂಗಳ ವೇತನವನ್ನು ತಡೆಹಿಡಿಯುವ ಎಚ್ಚರಿಕೆ ನೀಡಿದೆ. ಆ ಮೂಲಕ ಸಾರಿಗೆ ನೌಕರರ ಮೇಲೆ ಒತ್ತಡ ಹೇರಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಯತ್ನಿಸುತ್ತಿದೆ. ಆದರೆ ಸರ್ಕಾರದ ಈ ಎಚ್ಚರಿಕೆಗೂ ಸಾರಿಗೆ ನೌಕರರು ಬಗ್ಗುತ್ತಿಲ್ಲ, ಸರ್ಕಾರ ಪಟ್ಟು ಸಡಿಲಿಸುತ್ತಿಲ್ಲ. ಇಬ್ಬರ ಜಗಳದಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ.

ಎಸ್ಮಾ ಎಂದರೇನು?

ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕಲು ಎಸ್ಮಾ( ಅಗತ್ಯ ಸೇವೆ ನಿರ್ವಹಣೆ ಕಾಯ್ದೆ) ಕಾಯ್ದೆ ಪರಿಣಾಮಕಾರಿಯಾಗಿದೆ. ನೌಕರರು ಸಾಮೂಹಿಕವಾಗಿ ಮುಷ್ಕರ ಮಾಡಿದಾಗ ಎಸ್ಮಾ ಜಾರಿ ಮಾಡಬಹುದಾಗಿದ್ದು, ಈ ವೇಳೆ ನೌಕರರು ಕಡ್ಡಾಯವಾಗಿ ಕೆಲಸ ಮಾಡಲೇಬೇಕಾಗುತ್ತದೆ. ಒಂದು ವೇಳೆ ಎಸ್ಮಾ ಉಲ್ಲಂಘಿಸಿದರೆ ವಾರೆಂಟ್ ಇಲ್ಲದೆ ಬಂಧಿಸಬಹುದು. ಆರು ತಿಂಗಳು ಜೈಲು ವಾಸ ಸಾಧ್ಯತೆ ಹಾಗೂ ಎಸ್ಮಾ ಜಾರಿಯಾದ ಮೇಲೆ ಉದ್ಯೋಗಿ ಪ್ರತಿಭಟನೆಯಲ್ಲಿ ಭಾಗಿಯಾದರೆ ವೇತನ ಭತ್ಯೆ ಮತ್ತು ಇತರೆ ಸವಲತ್ತುಗಳ ಮೇಲೂ ಪರಿಣಾಮ ಬೀಳಲಿದೆ.

ಎಸ್ಮಾ ಯಾವಾಗ?
ಸದ್ಯಕ್ಕೆ ವೇತನ ಕಡಿತದಂತಹ ಸಣ್ಣಪುಟ್ಟ ಎಚ್ಚರಿಕೆ ನೀಡುತ್ತಿರುವ ಸರ್ಕಾರ ಮತ್ತಷ್ಟು ದಿನ ಸಾರಿಗೆ ಸಿಬ್ಬಂದಿ ಜೊತೆ ಹಗ್ಗಜಗ್ಗಾಟಕ್ಕೆ ಮುಂದಾಗಲಿದೆ. ಮತ್ತಷ್ಟು ದಿನದ ಸಮಯಾವಕಾಶ ಪಡೆದು ಉಪಚುನಾವಣೆ ಮುಗಿಸುವ ಚಿಂತನೆಯಲ್ಲಿದ್ದಾರೆ. ಒಂದು ವೇಳೆ ಯಾವುದಕ್ಕೂ ಸಾರಿಗೆ ನೌಕರರು ಜಗ್ಗದೇ ಇದ್ದಲ್ಲಿ ಅಂತಿಮವಾಗಿ ಎಸ್ಮಾ ಜಾರಿ ಮಾಡಲಿದ್ದಾರೆ. ಆದರೆ ಆ ಸಾಧ್ಯತೆ ತೀರಾ ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.