ETV Bharat / city

ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ಮಧ್ಯೆಯೂ ಪರಿಷತ್​​ನಲ್ಲಿ ಎಪಿಎಂಸಿ ಮಸೂದೆ ಅಂಗೀಕಾರ

author img

By

Published : Dec 9, 2020, 9:50 PM IST

Updated : Dec 9, 2020, 11:02 PM IST

APMC Bill passed in Karanataka council
ಎಪಿಎಂಸಿ ಮಸೂದೆ ಅಂಗೀಕಾರ

21:46 December 09

ವಿವಾದಿತ ಎಪಿಎಂಸಿ ಮಸೂದೆಗೆ ಅನುಮೋದನೆ

ಬೆಂಗಳೂರು : ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಪರಿಷತ್​​ನಲ್ಲಿ ಎಪಿಎಂಸಿ ಮಸೂದೆ ಅಂಗೀಕಾರ ಪಡೆಯಿತು. ಭೋಜನ ವಿರಾಮದ ನಂತರ ಕಲಾಪದಲ್ಲಿ ಸುದೀರ್ಘ ನಾಲ್ಕು ಗಂಟೆಗೂ ಹೆಚ್ಚುಕಾಲ ಚರ್ಚೆಗೆ ಪಾತ್ರವಾದ ಎಪಿಎಂಸಿ ಕಾಯ್ದೆಯ ಪರ ಹಾಗೂ ವಿರುದ್ಧವಾಗಿ ಸಾಕಷ್ಟು ಮಾತುಗಳು ಕೇಳಿ ಬಂದವು.

ಸುದೀರ್ಘ ಚರ್ಚೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉತ್ತರ ನೀಡಿದ ನಂತರ ಅನುಮೋದಿಸುವಂತೆ ಮನವಿ ಮಾಡಿದರು. ತಮ್ಮ ವಿರೋಧದ ನಡುವೆಯೂ ಸರ್ಕಾರ ಹಟಕ್ಕೆ ಬಿದ್ದು ಎಪಿಎಂಸಿ ಕಾಯ್ದೆ ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು. ಈ ಕಾರಣದಿಂದ ವಿಧೇಯಕ ಅನುಮೋದನೆ ಪಡೆಯುವುದು ಸರ್ಕಾರಕ್ಕೆ ಇನ್ನಷ್ಟು ಸುಲಭವಾಯಿತು.

ಸುದೀರ್ಘ ಚರ್ಚೆ ಆಲಿಸಿದ ನಂತರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉತ್ತರ ನೀಡಿ, ಈ ಕಾಯ್ದೆ ವಿಚಾರವಾಗಿ ಪ್ರತಿಪಕ್ಷ ಸದಸ್ಯರ ಮಾತು ಗಮನಿಸಿರುವೆ. ನೀವು ತಿಳಿಸಿದ ಹಾಗೇ ರೈತರಿಗೆ ಯಾವುದೇ ತೊಂದರೆಯಿಲ್ಲ. ರಾಜ್ಯದ 27 ಎಪಿಎಂಸಿಗಳಲ್ಲೂ ಅಧಿಕಾರಿಗಳ ಜೊತೆಗೆ ಸಭೆ ಮಾಡಲಾಗಿದೆ. ಎಲ್ಲಾ ರೀತಿಯ ಪರಾಮರ್ಶೆ ಮಾಡಲಾಗಿದೆ. ಕೆಲವು ಕಡೆ ನಾನೇ ಖುದ್ದು ಭೇಟಿ ನೀಡಿ ಪರಿಸ್ಥಿತಿ ತಿಳಿದುಕೊಂಡಿದ್ದೀನಿ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ!

ನಂತರ ಸಿಎಂ ಯಡಿಯೂರಪ್ಪ ಜೊತೆಗೆ ಚರ್ಚೆ ನಡೆಸಿದ್ದೇನೆ. ನಾವು ನಡೆಸಿದ ಸಭೆಯಲ್ಲಿ ರೈತರ ಭಾಗವಹಿಸಿದ್ದರು. ನಾವು ಎಲ್ಲಾ ರೀತಿಯ ವಿಚಾರ ಮಾಡಿ ಕಾಯ್ದೆ ತರಲು ಹೊರಟಿದ್ದೇವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಒತ್ತಡ ಇಲ್ಲ. ಲಾಕ್ ಡೌನ್ ಸಮಯದಲ್ಲಿ ವಾಸ್ತವತೆ ಅರಿವಾಗಿದೆ. ರೈತರ ಅನುಕೂಲಕ್ಕಾಗಿ ಈ ಕಾಯ್ದೆ ತರಲಾಗಿದೆ ಎಂದರು.

ಎಪಿಎಂಸಿ ಮುಚ್ಚುವ ಯೋಚನೆ ಇಲ್ಲ ಎಂದು ಉಲ್ಲೇಖೀಸಿದ ಸಚಿವ ಎಸ್.ಟಿ.ಸೋಮಶೇಖರ್ ರಾಜ್ಯದಲ್ಲಿ ದೊಡ್ಡ ಆಸ್ತಿಯನ್ನು ಎಪಿಎಂಸಿ ಹೊಂದಿದೆ. ಮಂಗಳೂರಿನಲ್ಲಿ 80 ಎಕರೆ ವ್ಯಾಪ್ತಿಯಲ್ಲಿ ಎಪಿಎಂಸಿ ಇದೆ. ಹುಬ್ಬಳಿ- ಧಾರವಾಡದಲ್ಲಿ ಎಪಿಎಂಸಿ ಇದೆ. ಇದನ್ನ ಮುಚ್ಚುವ ಮಾತಿಲ್ಲ. ಇದೊಂದು ಐತಿಹಾಸಿಕ ಕಾಯ್ದೆಯಾಗಿದೆ. ದಯವಿಟ್ಟು ಕಾಯ್ದೆಗೆ ಬೆಂಬಲ ಕೊಡಿ ಎಂದು ಪ್ರತಿಪಕ್ಷ ಸದಸ್ಯರಲ್ಲಿ ಕೈ ಮುಗಿದು ಕೇಳಿಕೊಂಡರು. 

ಆದರೆ ಈ ವಿಧೇಯಕದಿಂದ ರೈತರಿಗೆ ಸಮಸ್ಯೆ ಆಗಲಿದೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ ನಂತರ ವಿಧೇಯಕ ಅನಾಯಾಸವಾಗಿ ಅನುಮೋದನೆ ಪಡೆಯಿತು.

Last Updated :Dec 9, 2020, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.