ETV Bharat / briefs

ದೆಹಲಿ ಅಬಕಾರಿ ನೀತಿ ಹಗರಣ: ಆರೋಪಿ ಶರತ್‌ಚಂದ್ರ ರೆಡ್ಡಿ ಅಪ್ರೂವರ್​ ಆಗಲು ಒಪ್ಪಿಗೆ

author img

By

Published : Jun 1, 2023, 7:13 PM IST

Updated : Jun 1, 2023, 7:19 PM IST

ಆರೋಪಿ ಶರತ್‌ಚಂದ್ರ ರೆಡ್ಡಿ ಅಪ್ರೂವರ್​ ಆಗಲು ಒಪ್ಪಿಗೆ
ಆರೋಪಿ ಶರತ್‌ಚಂದ್ರ ರೆಡ್ಡಿ ಅಪ್ರೂವರ್​ ಆಗಲು ಒಪ್ಪಿಗೆ

ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರೋಪಿಯಾಗಿರುವ ಹೈದರಾಬಾದ್‌ನ ಉದ್ಯಮಿ ಪಿ ಶರತ್‌ಚಂದ್ರ ರೆಡ್ಡಿ ಅಪ್ರೂವರ್​ ಆಗಲು ಒಪ್ಪಿದ್ದಾಗಿ ತಿಳಿದು ಬಂದಿದೆ. ಪ್ರಕರಣದಲ್ಲಿ ಶರಣಾಗುತ್ತಿರುವ ಎರಡನೇ ವ್ಯಕ್ತಿಯಾಗಿದ್ದಾರೆ.

ನವದೆಹಲಿ/ ಹೈದರಾಬಾದ್​: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಹೈದರಾಬಾದ್‌ನ ಉದ್ಯಮಿ ಪಿ ಶರತ್‌ಚಂದ್ರ ರೆಡ್ಡಿ ಶರಣಾಗಲು(ಅಪ್ರೂವರ್​) ಒಪ್ಪಿಕೊಂಡಿದ್ದಾರೆ ಮಾಧ್ಯಮಗಳು ವರದಿ ಮಾಡಿವೆ. "ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ಸತ್ಯವನ್ನು ಬಹಿರಂಗಪಡಿಸಲು ನಾನು ಸಿದ್ಧನಿದ್ದೇನೆ ಮತ್ತು ಪ್ರಕರಣದಲ್ಲಿ ಅಪ್ರೂವರ್​ ಆಗಲು ಬಯಸುತ್ತೇನೆ" ಎಂದು ರೆಡ್ಡಿ ಹೇಳಿದ್ದಾಗಿ ತಿಳಿದುಬಂದಿದೆ.

ಹೈದರಾಬಾದ್ ಮೂಲದ ಅರಬಿಂದೋ ಫಾರ್ಮಾ ಕಂಪನಿಯ ಮುಖ್ಯಸ್ಥರಾಗಿರುವ ರೆಡ್ಡಿ, ಮದ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯಲ್ಲಿ ಇವರ ಹೆಸರಿದ್ದು, ಬಂಧಿಸಲಾಗಿತ್ತು. ಈಚೆಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡುವಂತೆ ಕೋರಿದ್ದು, ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಅರ್ಜಿಯ ವಿಚಾರಣೆ ನಡೆಸಿ ಮಂಜೂರು ಮಾಡಿದ್ದರು. ದೆಹಲಿ ಹೈಕೋರ್ಟ್​ನಿಂದ ಜಾಮೀನು ಪಡೆದಿರುವ ಶರತ್​ಚಂದ್ರ ರೆಡ್ಡಿ ಹೊರಗಿದ್ದಾರೆ.

ಇದೀಗ ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ 'ತಾವು ಪ್ರಕರಣದಲ್ಲಿ ಇಡಿ ಮುಂದೆ ಶರಣಾಗಲು ಮತ್ತು ಸತ್ಯಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸುವುದಾಗಿ' ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದು ಪ್ರಕರಣದ ದಿಕ್ಕು ಬದಲಿಸುವ ಸಾಧ್ಯತೆ ಇದೆ.

ಇಡಿ ಆರೋಪವೇನು?: ಶರತ್​ಚಂದ್ರ ರೆಡ್ಡಿ ಅವರು ನಡೆದಿದೆ ಎನ್ನಲಾದ ಹಗರಣದಲ್ಲಿ ಭಾಗಿಯಾಗಿದ್ದಾರೆ. ವಿವಿಧ ವ್ಯಾಪಾರ ಮಾಲೀಕರು ಮತ್ತು ರಾಜಕಾರಣಿಗಳೊಂದಿಗೆ ಇವರ ಲಿಂಕ್​ ಹೊಂದಿದ್ದಾರೆ. ಮದ್ಯ ಮಾರಾಟ ಒಪ್ಪಂದದಲ್ಲಿ ಪಿತೂರಿ ನಡೆಸಿದ್ದಾರೆ. ದೆಹಲಿ ಅಬಕಾರಿ ನೀತಿಯಿಂದ ಲಾಭ ಪಡೆಯಲು ಮಾಲ್​ಪ್ರಾಕ್ಟೀಸ್​ ನಡೆಸಿದ್ದಾರೆ. ಅಬಕಾರಿ ನೀತಿಯ ಉದ್ದೇಶಗಳ ವಿರುದ್ಧವಾಗಿ ಕಾರ್ಟೆಲೈಸೇಶನ್ ಮೂಲಕ ಬೃಹತ್ ಮಾರುಕಟ್ಟೆ ಪಾಲನ್ನು ನಿಯಂತ್ರಿಸುವುದನ್ನು ರೆಡ್ಡಿ ಮಾಡಿದ್ದಾರೆ ಎಂದು ಇಡಿ ಈ ಹಿಂದೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ಇದಕ್ಕೂ ಮೊದಲು ದೆಹಲಿ ಮೂಲದ ಉದ್ಯಮಿ ದಿನೇಶ್ ಅರೋರಾ ಅವರು ಸಿಬಿಐ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಶರಣಾಗಿ, ಪ್ರಕರಣದ ಬಗ್ಗೆ ಬಾಯ್ಬಿಡಲು ಒಪ್ಪಿಕೊಂಡಿದ್ದರು. ಇದೀಗ ಇಡಿ ನಡೆಸುತ್ತಿರುವ ಕೇಸ್​ನಲ್ಲಿ ಶರತ್​ಚಂದ್ರ ರೆಡ್ಡಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಇದು ಪ್ರಕರಣಕ್ಕೆ ದೊಡ್ಡ ತಿರುವು ನೀಡಬಹುದು ಎಂದು ವಿಶ್ಲೇಷಿಸಲಾಗಿದೆ.

ದೆಹಲಿ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ, ಅಬಕಾರಿ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಅವರು 2021-22ರಲ್ಲಿ ಸರ್ಕಾರ ರೂಪಿಸಿದ್ದ ಅಬಕಾರಿ ನೀತಿಯಲ್ಲಿ ಹಗರಣ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಸಿಬಿಐ ಅವರನ್ನು ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಗರಣದ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದರೆ, ರದ್ದಾದ ಮದ್ಯ ನೀತಿಯಲ್ಲಿ ಆರೋಪಿಗಳು ಅಕ್ರಮ ಹಣ ವರ್ಗಾವಣೆ ಮಾಡಿರುವ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ಹೆಸರು: ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಚಾರ್ಜ್ ಶೀಟ್‌ ಸಲ್ಲಿಸಿದ್ದು, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಪುತ್ರಿ, ವಿಧಾನ ಪರಿಷತ್​ ಸದಸ್ಯೆ ಕವಿತಾ, ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ರೆಡ್ಡಿ ಸೇರಿ ಹಲವು ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೇ, ಬೋಯಿನಪಲ್ಲಿ ಅಭಿಷೇಕ್, ಬುಚ್ಚಿ ಬಾಬು ಮತ್ತು ಅರುಣ್ ಪಿಳ್ಳೈ ಎಂಬುವವರ ಹೆಸರನ್ನೂ ಇಡಿ ತನ್ನ ಚಾರ್ಜ್​​ಶೀಟ್​ನಲ್ಲಿ ನಮೂದಿಸಿದೆ. ಸಮೀರ್ ಮಹೇಂದ್ರು, ಪಿ.ಶರತ್ಚಂದ್ರ ರೆಡ್ಡಿ, ಬಿನಯ್ ಬಾಬು, ವಿಜಯ್ ನಾಯರ್ ಮತ್ತು ಬೋಯಿನಪಲ್ಲಿ ಅಭಿಷೇಕ್ ಹೇಳಿಕೆ ಆಧರಿಸಿ ಈ ಎಲ್ಲಾ ಹೆಸರುಗಳನ್ನು ಚಾರ್ಜ್​​ಶೀಟ್​ನಲ್ಲಿ ಹೆಸರಿಸಲಾಗಿದೆ.

ಇದನ್ನೂ ಓದಿ: ತಮ್ಮ ಐಫೋನ್​ನಲ್ಲಿ "ಹಲೋ ಮಿಸ್ಟರ್ ಮೋದಿ" ಎಂದ ರಾಹುಲ್​ ಗಾಂಧಿ: ಯಾಕೆ ಗೊತ್ತಾ?

Last Updated :Jun 1, 2023, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.