ETV Bharat / bharat

ವೀರ್ ಸಾವರ್ಕರ್ ಜೀವನಚರಿತ್ರೆಯನ್ನು ಪಠ್ಯದಲ್ಲಿ ಕಡ್ಡಾಯಗೊಳಿಸಿದ ಯುಪಿ ಸರ್ಕಾರ

author img

By

Published : Jun 23, 2023, 8:23 PM IST

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಮಹಾನ್​ ಪುರುಷರ ಜೀವನ ಕಥೆಗಳನ್ನು ಮಕ್ಕಳ ಪಠ್ಯದಲ್ಲಿ ಸೇರಿಸಲು ಯುಪಿ ಶಿಕ್ಷಣ ಮಂಡಳಿ ಗಮನಾರ್ಹ ಬದಲಾವಣೆ ಮಾಡಿದೆ.

ಲಕ್ನೋ (ಉತ್ತರ ಪ್ರದೇಶ) : ವೀರ್ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ರಾಜ್ಯ ಶಿಕ್ಷಣ ಮಂಡಳಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ವಿಷಯವಾಗಿ ಸೇರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಮಂಡಳಿಯು ಇನ್ನೂ 50 ಮಹಾನ್ ಪುರುಷರ ಜೀವನ ಕಥೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಲು ತೀರ್ಮಾನಿಸಿದೆ.

ರಾಜ್ಯದ ಮಕ್ಕಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳು, ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಇತಿಹಾಸಕಾರರು ಹಾಗೂ ಮಹಾನ್ ವ್ಯಕ್ತಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಕ್ಕಳಿಗೆ ಪರಿಚಯಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಶಾಲೆಗಳಲ್ಲಿ ಜುಲೈನಿಂದ ಪ್ರಾರಂಭವಾಗುವ ಪಠ್ಯಕ್ರಮದಲ್ಲಿ ಪರಿಷ್ಕೃತ ಪಠ್ಯಕ್ರಮವನ್ನು ಸೇರಿಸಲಾಗುವುದು. ಎಲ್ಲ ಶಾಲೆಗಳಿಗೆ ಈ ವಿಷಯವನ್ನು ಕಡ್ಡಾಯಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಈ ವಿಷಯದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ಆದರೆ, ಪ್ರೌಢಶಾಲೆ ಮತ್ತು ಮಧ್ಯಂತರ ಅಂಕಪಟ್ಟಿಯಲ್ಲಿ ಈ ಪಠ್ಯಗಳ ಅಂಕಗಳನ್ನು ಸೇರಿಸಲಾಗುವುದಿಲ್ಲ. ಈ ಕ್ರಮವು ದೇಶದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿದ್ಯಾರ್ಥಿಗಳಲ್ಲಿ ಜ್ಞಾನಾಭಿವೃದ್ಧಿ ಹೆಚ್ಚಿಸುವ ಗುರಿ ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಯುಪಿ ಬೋರ್ಡ್‌ನಲ್ಲಿ ಮಹಾಪುರುಷರ ಹೆಸರನ್ನು ಪಠ್ಯಕ್ಕೆ ಸೇರಿಸುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು ಎಂಬುದು ಗಮನಾರ್ಹ. ಯುಪಿ ಶಿಕ್ಷಣ ಮಂಡಳಿಯ ವಿಷಯ ತಜ್ಞರು ಕೆಲ ಸಮಯದ ಹಿಂದೆ ಮಹಾಪುರುಷರ ಹೆಸರುಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ನಂತರ ವಿನಾಯಕ ದಾಮೋದರ ಸಾವರ್ಕರ್ ಸೇರಿದಂತೆ 50 ಮಹನೀಯರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ.

ಯುಪಿ ಶಿಕ್ಷಣ ಮಂಡಳಿಯು ನೈತಿಕ ಯೋಗ, ಕ್ರೀಡೆ ಮತ್ತು ದೈಹಿಕ ಶಿಕ್ಷಣದ ವಿಷಯದಲ್ಲೂ ಈ ವ್ಯಕ್ತಿಗಳ ಜೀವನ ಕಥೆಗಳನ್ನು ಸೇರಿಸಿದೆ. 27 ಸಾವಿರಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 9 ರಿಂದ 12 ನೇ ತರಗತಿಯ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಈ ಮಹಾಪುರುಷರ ಜೀವನ ಕಥೆಗಳನ್ನು ಅಧ್ಯಯನ ಮಾಡಲಿದ್ದಾರೆ ಎಂದು ಮಂಡಳಿ ತಿಳಿಸಿದೆ.

ಅಧಿಸೂಚನೆಯ ಪ್ರಕಾರ, 9ನೇ ತರಗತಿ ವಿದ್ಯಾರ್ಥಿಗಳು ಚಂದ್ರಶೇಖರ್ ಆಜಾದ್, ಬಿರ್ಸಾ ಮುಂಡಾ, ಬೇಗಂ ಹಜರತ್ ಮಹಲ್, ವೀರ್ ಕುನ್ವರ್ ಸಿಂಗ್, ಈಶ್ವರಚಂದ್ರ ವಿದ್ಯಾಸಾಗರ್, ಗೌತಮ್ ಬುದ್ಧ, ಜ್ಯೋತಿಬಾ ಫುಲೆ, ಛತ್ರಪತಿ ಶಿವಾಜಿ, ವಿನಾಯಕ ದಾಮೋದರ್ ಸಾವರ್ಕರ್, ವಿನೋಬಾ ಭಾವೆ, ಶ್ರೀನಿವಾಸ ಅವರ ಜೀವನ ಕಥೆಗಳನ್ನು ಓದುತ್ತಾರೆ. 10ನೇ ತರಗತಿಯ ವಿದ್ಯಾರ್ಥಿಗಳು ಮಂಗಲ್ ಪಾಂಡೆ, ರೋಷನ್ ಸಿಂಗ್, ಸುಖದೇವ್, ಲೋಕಮಾನ್ಯ ತಿಲಕ್, ಗೋಪಾಲ ಕೃಷ್ಣ ಗೋಖಲೆ, ಮಹಾತ್ಮ ಗಾಂಧಿ, ಖುದಿರಾಮ್ ಬೋಸ್ ಮತ್ತು ಸ್ವಾಮಿ ವಿವೇಕಾನಂದರ ಜೀವನ ಕಥೆಗಳನ್ನು ಓದುತ್ತಾರೆ.

ಯುಪಿ ಶಿಕ್ಷಣ ಸಚಿವ ಗುಲಾಬ್ ದೇವಿ ಮಾತನಾಡಿ, "ಈ ಅಧ್ಯಾಯಗಳನ್ನು ಸೇರಿಸುವುದು ಬೆಳೆಯುವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಮಕ್ಕಳ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವ ಗುರಿ ಹೊಂದಿದೆ" ಎಂದು ಹೇಳಿದರು.

ಇದನ್ನೂ ಓದಿ: ಅಪೌಷ್ಟಿಕತೆ ಹೋಗಲಾಡಿಸುವ ಪ್ರಯತ್ನದಲ್ಲಿ ಯೋಗಿ ಸರ್ಕಾರ: ಪೌಷ್ಟಿಕಾಂಶ ಭರಿತ 'ಸಾರವರ್ಧಿತ ಅಕ್ಕಿ' ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.