ETV Bharat / bharat

ಮಧ್ಯಪ್ರದೇಶದ ಬಸ್​ ಚಾಲಕನ ಮಗಳಿಗೆ ಇಸ್ರೋದಲ್ಲಿ ಹುದ್ದೆ: ಇದು ಸಾಧಕಿ ಸನಾಳ ಯಶೋಗಾಥೆ!

author img

By

Published : Jan 19, 2023, 9:23 PM IST

ಇಸ್ರೋದಲ್ಲಿ ಕೆಲಸ ಪಡೆದ ಮಧ್ಯಪ್ರದೇಶದ ಸನಾ - ಬಡತನದಲ್ಲಿ ಬೆಳೆದು ಅರಳಿದ ಪ್ರತಿಭೆ - ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರ್ಪಡೆ- ತಾಂತ್ರಿಕ ಸಹಾಯಕಳಾಗಿ ನಿಯುಕ್ತಿಯಾದ ಸನಾ

the-story-of-sana-ali-going-to-isro
ಮಧ್ಯಪ್ರದೇಶದ ಬಸ್​ ಚಾಲಕನ ಮಗಳಿಗೆ ಇಸ್ರೋದಲ್ಲಿ ಹುದ್ದೆ

ಭೋಪಾಲ್(ಮಧ್ಯಪ್ರದೇಶ): ಕನಸು ಮತ್ತು ಅನಿವಾರ್ಯತೆ ನಮ್ಮನ್ನು ಏನು ಬೇಕಾದರೂ ಮಾಡಿಸುತ್ತದೆ. ಕನಸು ನಮ್ಮನ್ನು ಗುರಿಯೆಡೆಗೆ ಸಾಗಿಸಿದರೆ, ಅನಿವಾರ್ಯತೆ ಗುರಿಯೆಡೆಗಿನ ಹೆಜ್ಜೆಯನ್ನು ಬಲಪಡಿಸುತ್ತದೆ. ಮಧ್ಯಪ್ರದೇಶದ ಬಸ್​ ಚಾಲಕನ ಮಗಳು ಸನಾ ಎಂಬಾಕೆ ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ(ಇಸ್ರೋ)ಯಲ್ಲಿ ಸ್ಥಾನ ಪಡೆದಿದ್ದು, ಕುಟುಂಬಸ್ಥರು ಹೆಮ್ಮೆಪಡುವಂತ ಕೆಲಸ ಮಾಡಿದ್ದಾರೆ.

ಕುಟುಂಬದ ಬಡತನ, ಹೆಣ್ಣೆಂಬ ತಾತ್ಸಾರ, ಸಮಾಜದ ವಿಡಂಬನೆ ಇವೆಲ್ಲವನ್ನೂ ಮೆಟ್ಟಿನಿಂತಿರುವ ಸನಾ ಅವರು ಇಂದು ಇಸ್ರೋದಲ್ಲಿ ದೊಡ್ಡ ಹುದ್ದೆ ಧಕ್ಕಿಸಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಸ್​ ಚಾಲಕನಾಗಿರುವ ತಂದೆಯ ಮಗಳು ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗಸ್ಥೆ. ಮಗಳ ಈ ಸಾಧನೆಗೆ ಕುಟುಂಬ ಮತ್ತು ಸಮಾಜ ಬೇಷ್​ ಎಂದಿದೆ.

ಸಾಧಕಿ ಸನಾ ಬದುಕಿನ ಹಾದಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯಲ್ಲಿ ತಾಂತ್ರಿಕ ಸಹಾಯಕಳಾಗಿ ನಿಯುಕ್ತಿಯಾಗಿರುವ ಸನಾ ಅವರು ಮಧ್ಯಪ್ರದೇಶದ ಭೋಪಾಲ್​ ಜಿಲ್ಲೆಯ ವಿದಿಶಾದ ನಿವಾಸಿಯಾಗಿದ್ದಾರೆ. ಬಡತನ ಬೆಳೆದಿರುವ ಈ ಪ್ರತಿಭೆ, ಇಂದು ಸಂಶೋಧನಾ ಕ್ಷೇತ್ರವೇ ಕಣ್ಣರಳಿಸಿ ನೋಡುವ ಸಾಧನೆ ಮಾಡಿದ್ದಾರೆ.

ಸನಾ ಅಲಿ ಅವರು ಬಡ ಕುಟುಂಬದಿಂದ ಬಂದಿದ್ದು, ಆಕೆಯ ತಂದೆ ಬಸ್ ಚಾಲಕರಾಗಿದ್ದಾರೆ. ಗಂಡು ಮಕ್ಕಳು ಮಾತ್ರ ಸಾಧನೆ ಮಾಡಲು ಸಾಧ್ಯ ಎನ್ನುಂವತಿರುವ ವಾತಾವರಣದಲ್ಲಿ ಹೆಣ್ಣಾದ ಸನಾ ಅವರು ಮಹತ್ತರವಾದುದನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿಕ್ಕ ನಗರವಾದ ವಿದಿಶಾವನ್ನು ಪ್ರತಿನಿಧಿಸುವ ನಾನು ಇಷ್ಟೊಂದು ಯಶಸ್ಸು ಸಾಧಿಸುತ್ತೇನೆ ಎಂದು ಭಾವಿಸಿರಲಿಲ್ಲ. ಇದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಸನಾ ಹೇಳುತ್ತಾರೆ.

ಬಡವರು ಮಕ್ಕಳು ಬೆಳೆಯುವುದಿಲ್ಲ ಎಂಬುದನ್ನು ನಾವು ಸುಳ್ಳು ಮಾಡಬೇಕು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಂಪೂರ್ಣ ನಂಬಿಕೆಯೊಂದಿಗೆ ಮುಂದಡಿ ಇಡಬೇಕು. ಸತತ ಅಧ್ಯಯನದಲ್ಲಿ ಮುಂದುವರಿಯಲು ಮತ್ತು ಶ್ರಮಿಸಲು ಬಡತನ ಮತ್ತು ಹೀಗಳಿಕೆ ನಮಗೆ ಪ್ರೇರಣೆ ನೀಡುತ್ತದೆ ಎಂದು ಸನಾ ಹೇಳುತ್ತಾರೆ. ನನ್ನ ತಾಯಿ ತನ್ನ ಆಭರಣಗಳನ್ನು ಅಡವಿಟ್ಟು ಓದಿಗೆ ನೀಡಿದ್ದಾರೆ. ಹೆತ್ತವರ ಈ ಶ್ರಮಕ್ಕೆ ಫಲ ಸಿಕ್ಕಿದೆ ಎಂಬುದು ನನ್ನ ಭಾವನೆ ಎನ್ನುತ್ತಾರೆ ಸಾಧಕಿ.

ಸವಾಲುಗಳೇ ನಮಗೆ ಶಕ್ತಿ: ತಂದೆ ನನ್ನ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದಕ್ಕೆ ಅನೇಕ ಬಾರಿ ಅತ್ತಿದ್ದೇನೆ. ಈ ವೇದನೆ ನನ್ನನ್ನು ಹಲವು ಸಲ ಬಾಧಿಸಿದೆ. ಅವರ ಬಗ್ಗೆ ಜಗತ್ತು ಒಂದಲ್ಲಾ ಒಂದು ದಿನ ಹೆಮ್ಮೆ ಪಡುವಂತೆ ಮಾಡುವೆ. ನಾನು ಎಂದಿಗೂ ಶಿಕ್ಷಣ ಮತ್ತು ಶ್ರಮವನ್ನು ವ್ಯರ್ಥ ಮಾಡುವುದಿಲ್ಲ. ಈಗ ನಾನು ಕಾಲೇಜಿನ ಟ್ಯೂಷನ್ ಮತ್ತು ಶೈಕ್ಷಣಿಕ ವೆಚ್ಚವನ್ನು ಪಾವತಿಸುತ್ತಿದ್ದೇನೆ, ಒತ್ತಡ ಮತ್ತು ಆತಂಕದ ದಿನಗಳು ಮರೆಯಾಗುತ್ತಿವೆ ಎಂದು ಹೇಳಿದರು.

ಸಹಪಾಠಿಗಳನ್ನು ಕಂಡಾಗ ನನಗೆ ದುಖಃವಾಗುತ್ತಿತ್ತು. ಅವರ ಬಟ್ಟೆ, ಶಾಲಾ ಬ್ಯಾಗ್ ಮತ್ತು ಅವರ ಊಟದ ಟಿಫಿನ್‌ಗಳು ಸಂಪೂರ್ಣವಾಗಿ ನನಗಿಂತ ವಿಭಿನ್ನವಾಗಿದ್ದವು. ಅವರ ನಡುವೆ ಕುಳಿತಾಗ ನನ್ನ ಮನೆಯ ಬಡತನ ಎದ್ದು ಕಾಣುತ್ತಿತ್ತು. ಆದರೆ ನನ್ನ ಮುಗಿಲೆತ್ತರದ ಕನಸುಗಳು ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲಬೇಕು ಎಂದು ಅಂದೇ ನಿರ್ಧರಿಸಿದ್ದೆ ಎಂದು ಗುರಿಯನ್ನು ಹಂಚಿಕೊಂಡರು.

ಶೀಘ್ರವೇ ಇಸ್ರೋದಲ್ಲಿ ಕೆಲಸಕ್ಕೆ ಸೇರ್ಪಡೆ: ನಾನು ದೇಶ ಸೇವೆ ಮಾಡಬೇಕು ಎನ್ನುವುದು ತಂದೆಯ ಕನಸಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ಏನು ಲಾಭ, ಮದುವೆಯಾಗಿ ಗಂಡನ ಮನೆ ಸೇರುತ್ತಾರೆ. ಅವರಿಗೆಲ್ಲಾ ಯಾಕೆ ಓದು ಎಂದು ಹೇಳಿದವರೇ ಹೆಚ್ಚು. ಆದರೆ, ಅಪ್ಪನ ಕನಸು ನನ್ನ ಶ್ರಮ ಇಂದು ಫಲ ನೀಡುತ್ತಿದೆ. ಗಾಳಿಯಂತಹ ಎಲ್ಲ ಟೀಕೆಗಳು ಬಂಡೆಯಂತಹ ನನ್ನ ನಿರ್ಧಾರದ ಮುಂದೆ ಏನೂ ಮಾಡಲಿಲ್ಲ. ಕೆಲವೇ ದಿನಗಳಲ್ಲಿ ನಾನು ಇಸ್ರೋದಲ್ಲಿ ತಾಂತ್ರಿಕ ಸಹಾಯಕನಾಗಿ ಸೇವೆ ಸಲ್ಲಿಸಲಿದ್ದೇನೆ. ನನ್ನ ಕನಸು ನನಸಾಗಿದೆ. ಹೆತ್ತವರಿಗೆ ನೆರವಾಗಲಿದ್ದೇನೆ ಎಂದು ಸನಾ ಅಲಿ ಹೇಳಿದರು.

ಯಾವುದೇ ಪರಿಸ್ಥಿತಿ, ಶಿಕ್ಷಣ ಮತ್ತು ಕಠಿಣ ಪರಿಶ್ರಮವು ಒಂದು ದಿನ ಖಂಡಿತವಾಗಿಯೂ ಫಲ ನೀಡುತ್ತದೆ. ಆರ್ಥಿಕ ದುಸ್ಥಿತಿಯಲ್ಲಿ ಕಷ್ಟಪಟ್ಟು ದುಡಿದು ಮಗಳಿಗೆ ಶಿಕ್ಷಣ ಕೊಡಿಸಿದೆ. ಇಂದು ಆಕೆ ಇಸ್ರೋದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಅವಳ ಈ ಸಾಧನೆ ನನ್ನೆಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿ. ನಮ್ಮ ಶ್ರಮ ಎಂದಿಗೂ ಕೈಬಿಡುವುದಿಲ್ಲ ಎಂದು ಸನಾ ಅವರ ತಂದೆ ಅಲಿ ಅವರು ಅಭಿಪ್ರಾಯ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.