ETV Bharat / bharat

ವೈದ್ಯೆಯಾಗುವ ಕನಸು ಕಂಡಿದ್ದ ಬಡ ವಿದ್ಯಾರ್ಥಿನಿಗೆ ಸಚಿನ್​ ತೆಂಡೂಲ್ಕರ್​​ ನೆರವಿನಹಸ್ತ

author img

By

Published : Jul 28, 2021, 3:25 PM IST

doctor
ವಿದ್ಯಾರ್ಥಿನಿ ದೀಪ್ತಿ ವಿಶ್ವಾಸ್

ವೈದ್ಯೆಯಾಗುವ ​ಕನಸು ಹೊತ್ತಿದ್ದ ಬಡ ಕುಟುಂಬದ ಯುವತಿಗೆ ವಿಶ್ವ ಕ್ರಿಕೆಟ್ ದಂತಕಥೆ​​ ಸಚಿನ್​ ತೆಂಡೂಲ್ಕರ್​ ಹಣಕಾಸಿನ ಸಹಾಯ ಮಾಡುವ ಮೂಲಕ ಆಕೆಯ ಕನಸಿಗೆ ನೀರೆರೆದು ಪೋಷಿಸಿದ್ದಾರೆ.

ಮುಂಬೈ: 'ಕ್ರಿಕೆಟ್​ ದೇವರು' ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಬಡ ಯುವತಿಯೊಬ್ಬಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿದ್ದಾರೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಝಾರಿ ಗ್ರಾಮದ ವಿದ್ಯಾರ್ಥಿನಿ ದೀಪ್ತಿ ವಿಶ್ವಾಸ್​ಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಚಿನ್ ಧನಸಹಾಯ ಮಾಡಿದ್ದಾರೆ. ಬಡತನದಲ್ಲಿ ಬೆಳೆದು ಬಂದಿರುವ ದೀಪ್ತಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಆನ್‌ಲೈನ್‌ ಶಿಕ್ಷಣ ಪಡೆಯುವ ಸಲುವಾಗಿ ಇವರು ಕುಗ್ರಾಮದಿಂದ ಕಿಲೋಮೀಟರ್‌ಗಳಷ್ಟು ದೂರ ಹೋಗಿ ನೆಟ್​ವರ್ಕ್​ ಸಿಗುವ ಸ್ಥಳದಲ್ಲಿ ಕುಳಿತು ಆನ್‌ಲೈನ್‌ ಕ್ಲಾಸ್​ ಕೇಳುತ್ತಿದ್ದರು.

ವಿದ್ಯಾರ್ಥಿನಿ ದೀಪ್ತಿ ವಿಶ್ವಾಸ್

ಹೀಗೆ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ ಫಲವಾಗಿ ಎನ್‌ಇಇಟಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರು. ಅಲ್ಲದೆ ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್‌ ಕೂಡ ಪಡೆದುಕೊಂಡಿದ್ದಾರೆ. ಆದರೆ, ತಮ್ಮ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆ ತೀವ್ರವಾಗಿದ್ದ ಕಾರಣ ಅವರಿಗೆ ಕಾಲೇಜಿನ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಇನ್ನೇನು ವೈದ್ಯಕೀಯ ಶಿಕ್ಷಣ ಕೊನೆಯಾಗಿಬಿಡುತ್ತೇನೋ ಎನ್ನುವಷ್ಟರಲ್ಲಿ ಅವರಿಗೆ ಸಚಿನ್‌ ತೆಂಡೂಲ್ಕರ್ ಪ್ರತಿಷ್ಠಾನದಿಂದ ಸ್ಕಾಲರ್​ಶಿಪ್​ ದೊರೆತಿದೆ.

ಸಚಿನ್​ ನೆರವಿನಿಂದಾಗಿ ದೀಪ್ತಿ ತನ್ನ ಹಳ್ಳಿಯ ಮೊದಲ ಡಾಕ್ಟರ್​ ಎನಿಸಿಕೊಳ್ಳಲಿದ್ದಾಳೆ. ಈ ಬಗ್ಗೆ ಟ್ವೀಟ್​​ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತನಗೆ ಸಹಾಯ ಮಾಡಿದ್ದಕ್ಕಾಗಿ ಕ್ರಿಕೆಟಿಗ ಸಚಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನನಗೆ ವಿದ್ಯಾರ್ಥಿವೇತನವನ್ನು ನೀಡಿದ ಸಚಿನ್ ತೆಂಡೂಲ್ಕರ್ ಪ್ರತಿಷ್ಠಾನಕ್ಕೆ ಧನ್ಯವಾದಗಳು ಎಂದಿದ್ದಾರೆ.

"ಇದೀಗ ನಾನು ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದೇನೆ. ನನ್ನ ತಂದೆ ರೈತರು, ತಾಯಿ ಗೃಹಿಣಿ ನಾನು ನನ್ನ ತಮ್ಮ ಸೇರಿ ನಾವು ನಾಲ್ಕು ಮಂದಿ ಇದ್ದೇವೆ'' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸೇವಾ ಸಹಯೋಗ ಫೌಂಡೇಷನ್‌ನ (ಎಸ್‌ಎಸ್‌ಎಫ್‌) ಜೊತೆಗಿನ ಸಹಭಾಗಿತ್ವದಲ್ಲಿ ಸಚಿನ್‌ ತೆಂಡೂಲ್ಕರ್‌ ಬಡ ವಿದ್ಯಾರ್ಥಿಯ ನೆರವಿಗೆ ಮುಂದಾಗಿದ್ದಾರೆ. ಶಿಕ್ಷಣಕ್ಕೆ ಬೇಕಿರುವ ಅಗತ್ಯದ ಹಣಕಾಸಿನ ಸಹಾಯ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.