ETV Bharat / bharat

ತೆಲಂಗಾಣದಲ್ಲಿ ಮಹಿಳೆಯರ ಉಚಿತ ಬಸ್​ ಪಯಣ ಆರಂಭ; ₹10 ಲಕ್ಷ ಆರೋಗ್ಯ ವಿಮೆ ಜಾರಿ

author img

By ETV Bharat Karnataka Team

Published : Dec 9, 2023, 6:41 PM IST

Telangana CM Revanth Reddy launches two schemes as part of six poll guarantees of Congress
ತೆಲಂಗಾಣ: 2 ಗ್ಯಾರಂಟಿಗಳಿಗೆ ಚಾಲನೆ - ಮಹಿಳೆಯರ ಬಸ್​ ಪಯಣ ಉಚಿತ, ₹10 ಲಕ್ಷ ಆರೋಗ್ಯ ವಿಮೆ ಜಾರಿ

Telangana CM Revanth Reddy launches two guarantees schemes: ತೆಲಂಗಾಣದಲ್ಲಿ ಕಾಂಗ್ರೆಸ್​ ಸರ್ಕಾರ ಆರು ಗ್ಯಾರಂಟಿ ಯೋಜನೆಗಳ ಪೈಕಿ ಮೊದಲ ಹಂತದಲ್ಲಿ ಮಹಿಳೆಯರ ಉಚಿತ ಬಸ್​ ಪ್ರಯಾಣದ 'ಮಹಾಲಕ್ಷ್ಮಿ' ಯೋಜನೆ, 'ರಾಜೀವ್​ ಆರೋಗ್ಯಶ್ರೀ' ಯೋಜನೆಗೆ ಚಾಲನೆ ನೀಡಿದೆ.

ಹೈದರಾಬಾದ್​ (ತೆಲಂಗಾಣ): ತೆಲಂಗಾಣದಲ್ಲಿ ನೂತನ ಕಾಂಗ್ರೆಸ್​ ಸರ್ಕಾರ​ ಎರಡು ಗ್ಯಾರಂಟಿ ಯೋಜನೆಗಳನ್ನು ಶನಿವಾರ ಜಾರಿಗೆ ತಂದಿದೆ. ಮಹಿಳೆಯರ ಉಚಿತ ಬಸ್​ ಪ್ರಯಾಣದ 'ಮಹಾಲಕ್ಷ್ಮಿ' ಯೋಜನೆ ಹಾಗೂ ಬಡವರಿಗೆ 10 ಲಕ್ಷದವರೆಗೂ ಆರೋಗ್ಯ ಚಿಕಿತ್ಸೆಯ ವೆಚ್ಚ ಭರಿಸುವ 'ರಾಜೀವ್​ ಆರೋಗ್ಯಶ್ರೀ' ವಿಮೆ ಯೋಜನೆಗೆ ವಿಧಾನಸಭೆ ಆವರಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚಾಲನೆ ನೀಡಿದರು.

ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಆರು ಗ್ಯಾರಂಟಿ ಯೋಜನೆಗಳ ಆಶ್ವಾಸನೆಗಳನ್ನು ನೀಡಿದೆ. ರಾಜ್ಯದಲ್ಲಿ ಪಕ್ಷದ ಅಧಿಕಾರಕ್ಕೆ ಬಂದರೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಘೋಷಿಸಲಾಗಿತ್ತು. ಅಂತೆಯೇ, 64 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿರುವ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್, ಸರ್ಕಾರ​ ರಚನೆಯಾಗಿ ಮೂರನೇ ದಿನವಾದ ಇಂದು ಈ ಆರು ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳನ್ನು ಸಾಂಕೇತಿಕವಾಗಿ ಜಾರಿ ಮಾಡಿದೆ.

ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ವಿಧಾನಸಭೆ ಹಂಗಾಮಿ ಸ್ಪೀಕರ್, ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ, ಸಚಿವರು ಹಾಗೂ ಇತರ ಗಣ್ಯರೊಂದಿಗೆ ಎರಡು ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ರಾಜ್ಯ ರಚನೆಯ ಭರವಸೆಯನ್ನು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದರು. ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರವು 100 ದಿನಗಳಲ್ಲಿ ಎಲ್ಲ ಆರು ಚುನಾವಣಾ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ತೆಲಂಗಾಣವನ್ನು ಜನ ಕಲ್ಯಾಣ ಮತ್ತು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತದೆ ಎಂದು ಹೇಳಿದರು.

ಇದೇ ವೇಳೆ, 2009ರ ಡಿಸೆಂಬರ್ 9ರಂದು ಆಗಿನ ಯುಪಿಎ ಸರ್ಕಾರವು ತೆಲಂಗಾಣ ರಚನೆಯನ್ನು ಘೋಷಿಸಿತ್ತು. ಹೀಗಾಗಿ ಡಿಸೆಂಬರ್ 9 ತೆಲಂಗಾಣಕ್ಕೂ ಹಬ್ಬದ ದಿನ ಎಂದು ಬಣ್ಣಿಸಿದರು. ಅಲ್ಲದೇ, ಜನರ ಆಶಯದಂತೆ ತೆಲಂಗಾಣ ರಾಜ್ಯವನ್ನು ಸಾಕಾರಗೊಳಿಸಿದವರು ಸೋನಿಯಾ ಗಾಂಧಿ ಎಂದು ಸಿಎಂ ರೇವಂತ್ ರೆಡ್ಡಿ ತಿಳಿಸಿದರು. ಸೋನಿಯಾ ಗಾಂಧಿ ಅವರಿಗೆ ಇಂದು 77ನೇ ಜನ್ಮದಿನವಾಗಿದೆ.

'ರಾಜೀವ್ ಆರೋಗ್ಯಶ್ರೀ' ಯೋಜನೆಯಡಿ ಬಡವರಿಗೆ 10 ಲಕ್ಷ ರೂ. ವೆಚ್ಚದವರೆಗೂ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. 'ಮಹಾಲಕ್ಷ್ಮಿ' ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರು ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಜಿಲ್ಲೆಗಳಲ್ಲಿ ಎಕ್ಸ್‌ಪ್ರೆಸ್ ಮತ್ತು ನಗರಗಳಲ್ಲಿ ಸಿಟಿ ಆರ್ಡಿನರಿ ಮತ್ತು ಮೆಟ್ರೋ ಎಕ್ಸ್‌ಪ್ರೆಸ್ ಬಸ್​ಗಳಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ತೃತೀಯಲಿಂಗಿಗಳು ಸಹ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ಉಚಿತ ಬಸ್ ಪ್ರಯಾಣ ಆರಂಭವಾಗಿದೆ.

ಇದನ್ನೂ ಓದಿ: 77ನೇ ವಸಂತಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ: ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರಿಂದ ಶುಭಾಶಯ ಕೋರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.