ETV Bharat / bharat

ಬೈಕ್​​​ನಲ್ಲಿ ಆರು ಮಕ್ಕಳೊಂದಿಗೆ ವ್ಯಕ್ತಿ ಸವಾರಿ... ಚಿಣ್ಣರ ಮನವಿಗೆ ದಂಡ ವಿಧಿಸದೇ ಕಳುಹಿಸಿದ ಪೊಲೀಸರು

author img

By ETV Bharat Karnataka Team

Published : Oct 25, 2023, 10:21 AM IST

Updated : Nov 1, 2023, 4:42 PM IST

man on bike with six children in varanasi
ಆರು ಮಕ್ಕಳೊಂದಿಗೆ ಬೈಕ್​ನಲ್ಲಿ ಹೊತ್ತು ಸಾಗಿದ ಸವಾರ

ತಂದೆಗೆ ದಂಡ ವಿಧಿಸದಂತೆ ಮಕ್ಕಳು ಪೊಲೀಸರ ಜೊತೆ ಮನವಿ ಮಾಡಿಕೊಂಡಿದ್ದು, ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುವಂತೆ ಬೈಕ್​ ಸವಾರನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ವಾರಾಣಸಿ: ವ್ಯಕ್ತಿಯೊಬ್ಬ ಆರು ಮಕ್ಕಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸಿ ಹೋಗುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಚಿತ್ರದಲ್ಲಿ ಬೈಕ್​ ಸವಾರನ ಹಿಂದೆ ನಾಲ್ವರು ಮಕ್ಕಳು ಹಾಗೂ ಮುಂದೆ ಇಬ್ಬರು ಮಕ್ಕಳು ಕುಳಿತಿರುವುದು ಕಂಡು ಬಂದಿದೆ.

ಇದು ವಾರಾಣಸಿಯ ಚಿತ್ರವಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್​ ಠಾಣೆಯ ಪ್ರಭಾರಿ ಆಶಿಶ್​ ಮಿಶ್ರಾ, ಮಂಗಳವಾರ ಸಂಜೆ ಕೊತ್ವಾಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಹೋಗುತ್ತಿದ್ದ ಬೈಕ್​ನಲ್ಲಿ ಹೋಗುತ್ತಿದ್ದ ಸವಾರನನ್ನು ತಡೆದು, ಛೀಮಾರಿ ಹಾಕಲಾಗಿದೆ. ಒಂದೇ ಬೈಕ್​ನಲ್ಲಿ 6 ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆತ, ತನ್ನ ಮಕ್ಕಳ ಜೊತೆಗೆ ಇತರ ಮಕ್ಕಳ ಪ್ರಾಣಕ್ಕೂ ಅಪಾಯ ತಂದೊಡ್ಡಿದ್ದ.

ಬೈಕ್​ ಸವಾರನಿಗೆ ನಮ್ಮ ಸಿಬ್ಬಂದಿ ದಂಡ ಹಾಕಲು ರಶೀದಿ ಬರೆಯಲು ಹೋದಾಗ ಹಿಂದೆ ಕುಳಿತಿದ್ದ ಮಕ್ಕಳು ಪೊಲೀಸ್​ ಅಂಕಲ್​ ದಯವಿಟ್ಟು ನಮ್ಮ ತಂದೆಯನ್ನು ಈ ಬಾರಿ ಬಿಟ್ಟುಬಿಡಿ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಮಕ್ಕಳ ಮನವಿಗೆ ಕರಗಿದ ಆಶಿಶ್​ ಮಿಶ್ರಾ ಅವರು, ಮಕ್ಕಳನ್ನು ಬೈಕ್​ನಿಂದ ಇಳಿಸಿ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಟೋ ವ್ಯವಸ್ಥೆ ಮಾಡಿ ತಂದೆಯೊಂದಿಗೆ ಮನೆಗ ಕಳುಹಿಸಿದ್ದಾರೆ. ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸಿ, ಬೈಕ್​ ಸವಾರಿ ಮಾಡಿದ ವ್ಯಕ್ತಿಗೆ ಇನ್ನು ಮುಂದೆ ಸರಿಯಾಗಿ ಟ್ರಾಫಿಕ್​ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ಬಿಡಲಾಯಿತು. ವಾರಾಣಸಿಯಲ್ಲಿ ವೈರಲ್​ ಆಗಿರುವ ಈ ಫೋಟೋ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಬೆಂಗಳೂರು: ಬೈಕ್ ನಂಬರ್‌ಪ್ಲೇಟ್​ಗೆ ಮಾಸ್ಕ್ ತೊಡಿಸಿದ್ದ ಸವಾರನ ವಿರುದ್ಧ ಪ್ರಕರಣ ದಾಖಲು

ಏನ್​ ಹೇಳುತ್ತೆ ಟ್ರಾಫಿಕ್​ ರೂಲ್ಸ್​: ಟ್ರಾಫಿಕ್​ ರೂಲ್ಸ್​ ಉಲ್ಲಂಘನೆ ಮಾಡುವವರಿಗೆ ಹೊಸ ಕಾನೂನಿನ ಪ್ರಕಾರ ಭಾರಿ ದಂಡ ಬೀಳುವುದು ಕನ್ಫರ್ಮ್. ತುರ್ತಾಗಿ ಆ್ಯಂಬುಲೆನ್ಸ್​ಗೆ ದಾರಿ ಬಿಡದಿದ್ದರೆ 10 ಸಾವಿರ ದಂಡ ವಿಧಿಸುವ ನಿಯಮವಿದ್ದು, ಲೈಸನ್ಸ್ ಇಲ್ಲದೆ ಪ್ರಯಾಣಿಸಿದರೆ 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಕುಡಿದು ವಾಹನ ಚಲಾಯಿಸಿದರೆ ಬರೋಬ್ಬರಿ 10 ಸಾವಿರ ರೂ. ದಂಡವಿದೆ. ಇದರ ಜತೆಗೆ ಅಪ್ರಾಪ್ತರು ವಾಹನ ಚಲಾಯಿಸಿದರೆ ಅವರನ್ನು ಬಾಲಾಪರಾಧ ಕಾನೂನು ಪ್ರಕಾರ ವಿಚಾರಣೆ ನಡೆಸುವ ಜತೆಗೆ ಅವರ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಿ 3 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಇದರ ಜತೆಗೆ ಅಪಾಯಕಾರಿಯಾಗಿ ಡ್ರೈವ್​ ಮಾಡುವುದು, ಓವರ್​ ಸ್ಪೀಡ್​, ಹೆಲ್ಮೆಟ್​ ಹಾಕಿಕೊಳ್ಳದೇ ಡ್ರೈವ್​ ಮಾಡಿದರೆ ದಂಡ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ.

Last Updated :Nov 1, 2023, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.