ETV Bharat / bharat

ಮನೆ ಜಪ್ತಿಗೆ ಬ್ಯಾಂಕಿಂದ ನೋಟಿಸ್, ಕೆಲ​ ಗಂಟೆಗಳಲ್ಲೇ ₹70 ಲಕ್ಷ ಲಾಟರಿ.. ಕೇರಳದ ಕುಟುಂಬಕ್ಕೆ ಒಲಿದ ಅದೃಷ್ಟ

author img

By

Published : Oct 15, 2022, 10:44 AM IST

ಕೇರಳದ ವ್ಯಕ್ತಿಯೊಬ್ಬರಿಗೆ ಮನೆ ಜಪ್ತಿಗಾಗಿ ಸಾಲ ನೀಡಿದ್ದ ಬ್ಯಾಂಕ್​ ನೋಟಿಸ್​ ಜಾರಿ ನೀಡಿತ್ತು. ಇದರ ಭೀತಿಯಲ್ಲಿದ್ದ ಕುಟುಂಬಕ್ಕೆ ಲಾಟರಿಯಲ್ಲಿ 70 ಲಕ್ಷ ಬಂದಿದ್ದು, ಅದೃಷ್ಟ ಖುಲಾಯಿಸಿದೆ.

kerala-fisherman-wins-rs-70-lakh-lottery
ಕೇರಳದ ಕುಟುಂಬಕ್ಕೆ ಒಲಿದ ಅದೃಷ್ಟ

ತಿರುವನಂತಪುರಂ (ಕೇರಳ): ಅದೃಷ್ಟ ಯಾವಾಗ ಒಲಿಯುತ್ತೋ ಯಾರಿಗೆ ಗೊತ್ತು. ಕಷ್ಟದ ಸಮಯಕ್ಕೆ ಹಣ ಸಿಕ್ಕರೆ ಅದಕ್ಕಿರುವ ಕಿಮ್ಮತ್ತೇ ಬೇರೆ. ಕೇರಳದ ವ್ಯಕ್ತಿ ಸಾಲ ಪಡೆದಿದ್ದ ಹಣಕ್ಕೆ ಮನೆ ಜಪ್ತಿ ಮಾಡಲು ಬ್ಯಾಂಕ್​ ನೋಟಿಸ್​ ನೀಡಿತ್ತು. ನೋಟಿಸ್​ ಕೈ ಸೇರಿದ ಕೆಲ ಗಂಟೆಗಳಲ್ಲೇ ಅದೃಷ್ಟ ಎಂಬಂತೆ ಆತನಿಗೆ ಲಾಟರಿಯಲ್ಲಿ 70 ಲಕ್ಷ ರೂಪಾಯಿ ಹಣ ಬಂದಿದೆ.

ಈ ಕುತೂಹಲಕಾರಿ, ವಿಚಿತ್ರ ಘಟನೆ ನಡೆದಿದ್ದು, ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಮೀನುಗಾರಿಕೆ ಕಸುಬು ನಡೆಸುತ್ತಿದ್ದ ವ್ಯಕ್ತಿಗೆ ಅಕ್ಟೋಬರ್​ 12 ರಂದು ತಾನು ಸಾಲ ಪಡೆದ ಬ್ಯಾಂಕ್​ ಹಣ ಪಾವತಿಗೆ ನೋಟಿಸ್​​ ನೀಡಿತ್ತು. ನಿಗದಿತ ವೇಳೆಗೆ ಸಾಲ ಮರುಪಾವತಿ ಮಾಡದಿದ್ದರೆ ಮನೆಯನ್ನು ಜಪ್ತಿ ಮಾಡುವ ಎಚ್ಚರಿಕೆ ನೀಡಿತ್ತು.

ಸಾಲದ ಸುಳಿಗೆ ಸಿಲುಕಿದ್ದ ಕುಟುಂಬ ಈಗ ಮನೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿತ್ತು. ಮೀನುಗಾರ ವ್ಯಕ್ತಿ ಬ್ಯಾಂಕಿಂದ ನೋಟಿಸ್​ ಬರುವುದಕ್ಕೂ ಮೊದಲು ರಾಜ್ಯ ಸರ್ಕಾರ ನಡೆಸುವ ಅಕ್ಷಯ ಲಾಟರಿಯಲ್ಲಿ ಟಿಕೆಟ್​ ಖರೀದಿಸಿದ್ದ. ಮಧ್ಯಾಹ್ನದ ವೇಳೆಗೆ ನೋಟಿಸ್​ ಮನೆಗೆ ಬಂದಿತ್ತು.

ಅದೃಷ್ಟ ಎಂಬಂತೆ ಅದೇ ದಿನ ಸಂಜೆಗೆ ತಾನು ಖರೀದಿಸಿದ ಟಿಕೆಟ್​ಗೆ ಬರೋಬ್ಬರಿ 70 ಲಕ್ಷ ಲಾಟರಿ ಹೊಡೆದಿತ್ತು. ಈ ಸುದ್ದಿಯನ್ನು ಕೇಳಿದ ಕುಟುಂಬ ಹಿರಿಹಿರಿ ಹಿಗ್ಗಿದೆ. ಹತಾಶೆಯಲ್ಲಿದ್ದ ಕುಟುಂಬಕ್ಕೆ ಲಾಟರಿ ದೇವರಂತೆ ಬಂದು ಕಾಪಾಡಿದೆ. ಲಾಟರಿಯಲ್ಲಿ ಬಂದ ಹಣವನ್ನು ತಾವು ಸಾಲ ಮಾಡಿದ ಬ್ಯಾಂಕ್​ನಲ್ಲಿಯೇ ಡೆಪಾಸಿಟ್​ ಮಾಡಿದ್ದಾರೆ. ತಾವು ಮಾಡಿದ್ದ 9 ಲಕ್ಷ ಸಾಲವನ್ನು ತೀರಿಸಲು ಮೀನುಗಾರ ಮುಂದಾಗಿದ್ದಾರೆ.

ಇದಕ್ಕೂ ಮೊದಲು ಓಣಂ ಹಬ್ಬದ ವೇಳೆ ಆಟೋ ಡ್ರೈವರ್​ವೊಬ್ಬರಿಗೆ 25 ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ದೇಶದಲ್ಲೇ ದೊಡ್ಡ ಸುದ್ದಿಯಾಗಿತ್ತು. ಬಳಿಕ ಮನೆಗೆ ಸಾಲ ಕೇಳಿಕೊಂಡು ಜನರ ದಂಡೇ ಹರಿದು ಬರುತ್ತಿದ್ದು, ಮನಶಾಂತಿಯನ್ನೇ ಕಳೆದುಕೊಂಡಿದ್ದಾಗಿ ಆತ ಹೇಳಿಕೊಂಡಿದ್ದ.

ಓದಿ: ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.