ETV Bharat / bharat

ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರು ಸಜೀವ ದಹನ

author img

By

Published : Feb 17, 2023, 11:06 PM IST

ರಾಜಸ್ಥಾನದ ಅಜ್ಮೀರ್‌ನಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ಬೆಂಕಿ ಹೊತ್ತಿಕೊಂಡು ಇಬ್ಬರು ಚಾಲಕರು ಸೇರಿ ನಾಲ್ವರು ಸಾವಿಗೀಡಾಗಿದ್ದಾರೆ.

four-killed-as-truck-carrying-lpg-cylinders-rams-into-marble-laden-truck-in-ajmer
ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರ ಸಜೀವ ದಹನ

ಅಜ್ಮೀರ್ (ರಾಜಸ್ಥಾನ): ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಈ ಡಿಕ್ಕಿಯ ನಂತರ ಭಾರೀ ಸ್ಫೋಟವಾಗಿ ಬೆಂಕಿ ಹೊತ್ತಿಕೊಂಡಿದೆ. ಸುಮಾರು 500 ಮೀಟರ್ ದೂರದಲ್ಲಿ ನಿಂತಿದ್ದ ಟ್ರಕ್​ಗೂ ಬೆಂಕಿ ಹರಡಿದೆ. ಚಾಲಕರಿಬ್ಬರೂ ಸೇರಿ ನಾಲ್ವರು ಸುಟ್ಟು ಕರಕಲಾಗಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ತಡರಾತ್ರಿ ಎಲ್‌ಪಿಜಿ ಇಂಧನ ತುಂಬಿದ್ದ ಗ್ಯಾಸ್ ಟ್ಯಾಂಕರ್ ಹಾಗೂ ಮಾರ್ಬಲ್ ತುಂಬಿದ್ದ ಟ್ರಕ್​ ಮಧ್ಯೆ ಡಿಕ್ಕಿ ಹೊಡೆದು ಈ ದುರಂತ ಜರುಗಿದೆ. ಸುಂದರ್, ಸುಭಾಷ್, ಅಜಿನಾ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಗ್ಯಾಸ್ ಟ್ಯಾಂಕರ್​​ನಲ್ಲಿ ಮೂರು ಚೇಂಬರ್ ಗ್ಯಾಸ್​ ಇತ್ತು. ಈ ಅಪಘಾತದಿಂದಾಗಿ ಈ ಗ್ಯಾಸ್ ಚೇಂಬರ್​ಗಳು ಒಂದರ ನಂತರ ಒಂದು ಹೊತ್ತಿಕೊಂಡಿದೆ. ಇದೇ ವೇಳೆ ಮಾರ್ಬಲ್‌ ತುಂಬಿದ್ದ ಟ್ರಕ್​ ಕೂಡ ಉರಿಯಲು ಪ್ರಾರಂಭಿಸಿದ್ದು, ಒಟ್ಟು ಮೂರು ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಚ್ಚಿ ಬಿದ್ದ ಸ್ಥಳೀಯರು: ಈ ಅಗ್ನಿ ಜಾಲ್ವೆಯು ಸಮೀಪದ ಜಮೀನುಗಳು ಮತ್ತು ಅಂಗಡಿಗಳಿಗೂ ಹಬ್ಬಿಕೊಂಡಿದೆ. ಇದಲ್ಲದೇ ಮನೆಯೊಂದರಲ್ಲಿ ಇಟ್ಟಿದ್ದ ಮೇವಿಗೆ ಬೆಂಕಿ ಬಿದ್ದಿದೆ. ಇದರಿಂದ ಐದರಿಂದ ಆರು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಜೊತೆಗೆ ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಐದು ಬೈಕ್‌ಗಳು ಸುಟ್ಟು ಹೋಗಿವೆ. ತಡರಾತ್ರಿ ನಡೆದ ಅವಘಡದಿಂದ ಬೆಚ್ಚಿ ಬಿದ್ದ ಸ್ಥಳೀಯರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಬಾವಿಯಿಂದ ನೀರನ್ನು ಸೇದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ ಏಕಾಏಕಿ ಎಚ್ಚರವಾಗಿ ಹೊರ ಬಂದಾಗ ಮನೆಯ ಸುತ್ತಲೂ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಮನೆಯಿಂದ ಹೊರಗೆ ಬರಲೂ ಸಾಧ್ಯವಾಗಲಿಲ್ಲ. ಜೀವ ಉಳಿಸಿಕೊಳ್ಳಲು ನಾನು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಬದಲಾಯಿಸಬೇಕಾಯಿತು. ಅಲ್ಲದೇ, ದಟ್ಟ ಹೊಗೆಯಿಂದಾಗಿ ಉಸಿರಾಟಕ್ಕೆ ಸಾಕಷ್ಟು ತೊಂದರೆಯಾಗಿತ್ತು. ಹೀಗಾಗಿ ಮತ್ತಷ್ಟು ಭಯದಲ್ಲೇ ಮನೆಯಿಂದ ಹೊರ ಬಂದೆ. ಸುತ್ತಮುತ್ತಲು 20 ಮನೆಗಳು ಇವೆ. ಇನ್ನು ಸ್ವಲ್ಪ ಬೆಂಕಿ ಹೆಚ್ಚಾಗಿದ್ದರೆ, ಈ ಮನೆಗಳು ಸುಟ್ಟು ಭಸ್ಮವಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಶಂಕರ್ ಮಾತನಾಡಿ, ಈ ದುರಂತ ಸಂಭವಿಸಿದಾಗ ನಾನು ಮಲಗಿದ್ದೆ. ಭಾರೀ ಸ್ಫೋಟ ಉಂಟಾದ ಬಳಿಕ ಎಚ್ಚರವಾಗಿ ನೋಡಿದರೆ, ಸುತ್ತಮುತ್ತ ಬೆಂಕಿ ವ್ಯಾಪಿಸಿತ್ತು. ಮನೆಯ ಸಮೀಪವೇ ಬೆಂಕಿ ಉರಿಯಲು ಪ್ರಾರಂಭಿಸಿತ್ತು. ಇದರಿಂದಾಗಿ ನಾನು ಹೊರಬರಲು ಸಾಧ್ಯವಾಗಲಿಲ್ಲ. ಪ್ರಾಣ ಉಳಿಸಿಕೊಳ್ಳಲು ನಾನು, ಪತ್ನಿ ಮತ್ತು ಮಗಳು 15 ಅಡಿ ಗೋಡೆ ಹಾರಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಟ್ವೀಟ್​ ಮಾಡಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಆ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಕಿ ಅವಘಡ: ಅಪಾರ ಪ್ರಮಾಣದ ಆಸ್ತಿ ಹಾನಿ, ನಾಲ್ಕು ಎಮ್ಮೆಗಳ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.