ETV Bharat / bharat

ರಾಜಸ್ಥಾನ, ಛತ್ತೀಸ್​ಗಢ, ಮಧ್ಯಪ್ರದೇಶದಲ್ಲಿ ಅರಳಿದ ಕಮಲ: ತೆಲಂಗಾಣದಲ್ಲಿ "ಕೈ" ಹಿಡಿದ ಮತದಾರ

author img

By ETV Bharat Karnataka Team

Published : Dec 3, 2023, 11:01 PM IST

Etv Bharat
Etv Bharat

Assembly election results-2023: ರಾಜಸ್ಥಾನ, ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್​ ಗೆಲುವು ದಾಖಲಿಸಿದೆ.

ನವದೆಹಲಿ : ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ರಾಜಸ್ಥಾನ, ಛತ್ತೀಸ್​ಗಡ್​ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ಪಂಚರಾಜ್ಯ ಚುನಾವಣೆಯು ಲೋಕಸಭೆ ಚುನಾವಣೆಯ ಸೆಮಿಫೈನಲ್​ ಎಂದೇ ಬಿಂಬಿತವಾಗಿತ್ತು. ಚುನಾವಣೆ ಹಿನ್ನಲೆ ಬಿಜೆಪಿ, ಕಾಂಗ್ರೆಸ್​ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದವು.

ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ನೂರರ ಗಡಿ ದಾಟಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 199 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಆಡಳಿತಾರೂಢ ಕಾಂಗ್ರೆಸ್​ 70 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನಕ್ಕೆ ಕುಸಿದಿದೆ. ಇತರೆ ಪಕ್ಷಗಳು ಒಟ್ಟು 14 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಛತ್ತೀಸ್​ಗಢದಲ್ಲಿ ಬಿಜೆಪಿಗೆ ಗೆಲುವು : ಛತ್ತೀಸ್​ಘಢದಲ್ಲಿ ಬಿಜೆಪಿಗೆ ಮತದಾರ ಬಹುಪರಾಕ್ ಎಂದಿದ್ದಾನೆ. ಛತ್ತೀಸ್​ಘಡದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಸಮೀಕ್ಷೆ ತಲೆಕೆಳಗಾಗಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಛತ್ತೀಸ್​ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ​54 ಸ್ಥಾನ, ಕಾಂಗ್ರೆಸ್​ 35 ಸ್ಥಾನ ಮತ್ತು ಇತರರು 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್​ ಎರಡು ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡಿದೆ.

ಮಧ್ಯಪ್ರದೇಶದಲ್ಲೂ ಅರಳಿದ ಕಮಲ : ಮಧ್ಯಪ್ರದೇಶದಲ್ಲೂ ಕಮಲ ಅರಳಿದೆ. ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ 163 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಕಾಂಗ್ರೆಸ್​ 66 ಸ್ಥಾನಗಳಲ್ಲಿ ಗೆದ್ದರೆ, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಘಡದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಲೋಕಸಭೆ ಚುನಾವಣೆಗೆ ಭದ್ರ ಬುನಾದಿಯನ್ನು ಹಾಕಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ತೆಲಂಗಾಣದಲ್ಲಿ "ಕೈ "ಹಿಡಿದ ಮತದಾರ : ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್​ಎಸ್ (ಭಾರತ್​ ರಾಷ್ಟ್ರ ಸಮಿತಿ)ನ್ನು ಸೋಲಿಸಿ ಕಾಂಗ್ರೆಸ್​ ಆಡಳಿತ ಚುಕ್ಕಾಣಿ ಹಿಡಿದಿದೆ. ಕಳೆದ ಎರಡು ಅವಧಿಗೆ ಆಡಳಿತ ನಡೆಸಿದ ಕೆಸಿಆರ್​ ನೇತೃತ್ವದ ಬಿಆರ್​ಎಸ್ ಪಕ್ಷ ಈ ಬಾರಿ ಅಧಿಕಾರವನ್ನು ಕಳೆದುಕೊಂಡಿದೆ. 119 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ 64 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಬಿಆರ್​ಎಸ್​ 39 ಸ್ಥಾನ, ಬಿಜೆಪಿ 8 ಸ್ಥಾನ, ಎಐಎಂಐಎಂ 7 ಸ್ಥಾನ, ಇತರರು 1 ಸ್ಥಾನದಲ್ಲಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ : ಛತ್ತೀಸ್​ಗಡ್​ ಚುನಾವಣೆ : ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಕೇವಲ 16 ಮತಗಳಿಂದ ಗೆದ್ದ ಬಿಜೆಪಿ ಹುರಿಯಾಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.