ETV Bharat / state

ದಾವಣಗೆರೆ: ಕೆರೆಯಲ್ಲಿ 5 ರಿಂದ 10 ಕೆಜಿಯ 1 ಲಕ್ಷ ಮೀನುಗಳ ಮಾರಣಹೋಮ - FISH DIED

author img

By ETV Bharat Karnataka Team

Published : May 16, 2024, 11:47 AM IST

ದಾವಣಗೆರೆಯ ಬೇತೂರು ಗ್ರಾಮದಲ್ಲಿ ಕೆರೆಯೊಂದರಲ್ಲಿ ಲಕ್ಷಾಂತರ ಖರ್ಚು ಮಾಡಿ ಸಾಕಿದ್ದ ಮೀನುಗಳು ಸಾವನ್ನಪ್ಪಿವೆ.

ಮೀನುಗಳ ಮಾರಣಹೋಮ
ಮೀನುಗಳ ಮಾರಣಹೋಮ (ETV Bharat)

ಟೆಂಡರ್ ಪಡೆದವರ ಹೇಳಿಕೆ (ETV Bharat)

ದಾವಣಗೆರೆ: ದಾವಣಗೆರೆ ತಾಲೂಕಿನ ಬೇತೂರು ಗ್ರಾಮದಲ್ಲಿರುವ 126 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದೆ. ಈ ಕೆರೆಯಲ್ಲಿ 3 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಟೆಂಡರ್​​​​​ ಪಡೆದು ನಾಲ್ಕು ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಟ್ಟು ಪೋಷಣೆ ಮಾಡಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಲಕ್ಷಾಂತರ ಮತ್ಸ್ಯಗಳು ಸಾವನ್ನಪ್ಪಿದ್ದು, ಟೆಂಡರ್​​​​ ಪಡೆದವರಿಗೆ 10 ಲಕ್ಷ ದಷ್ಟು ನಷ್ಟವಾಗಿದೆ. ಕಿಡಿಗೇಡಿಗಳ್ಯಾರೋ ಕೆರೆಗೆ ವಿಷ ಹಾಕಿದ್ದು ಮೀನುಗಳು ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

'ಲಕ್ಷ್ಮಿ ವೆಂಕಟೇಶ್ವರ ಮೀನು ಉತ್ಪಾದಕ, ಮಾರಾಟ ಮತ್ತು ಸಂಸ್ಕರಣ ಸಹಾಯಕ ಸಂಘ'ದಿಂದ ಮಂಜುನಾಥ್, ಸಿದ್ದೇಶ್, ಹನುಮಂತ ಎಂಬುವರು ಗ್ರಾಪಂಚಾಯತ್​​ ಮುಖೇನಾ ಟೆಂಡರ್ ಪಡೆದು ಮೀನು ಸಾಕಾಣಿಕೆ ಮಾಡುತ್ತಿದ್ದರು. ಈಗಾಗಲೇ ಮೀನುಗಳನ್ನು ಬಲೆ ಹಾಕಿ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಕೆರೆಯಲ್ಲಿ ಒಂದೊಂದು ಮೀನು 5 ರಿಂದ 10 ಕೆಜಿ ಇದ್ದು ಒಳ್ಳೆ ಬೆಲೆಗೆ ಮಾರಾಟ ಆಗುತಿತ್ತು. ಮೀನಿನ ಗಾತ್ರ ಕಂಡು ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕಳ್ಳತನದಿಂದ ಮೀನು ಹಿಡಿಯುತ್ತಿದ್ದರು. ಹೀಗಾಗಿ ಮೀನುಗಳ ರಕ್ಷಣೆಗೆ ಟೆಂಡರ್​ ಪಡೆದವರು ಕೆರೆ ಬಳಿ ಕಾಯುತ್ತಿದ್ದರು. ಇದರಿಂದ ಮೀನು ಸಿಗದೆ ಇದ್ದಾಗ ಕೆಲ ಖದೀಮರು ಕೆರೆಗೆ ವಿಷ ಹಾಕಿರಬಹುದೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಮೃತ ಮೀನುಗಳು
ಮೃತ ಮೀನುಗಳು (ETV Bharat)

ಕೆರೆಯಲ್ಲಿ ಸಣ್ಣ ಮೀನುಗಳಿಗಿಂತಲೂ ದೊಡ್ಡ ಗಾತ್ರದ ಮೀನುಗಳೇ ಸಾವನ್ನಪ್ಪಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿತನಕ ಒಟ್ಟು 1-2 ಲಕ್ಷ ಮೀನುಗಳು ಸತ್ತಿರಬಹುದೆಂದು ಅಂದಾಜಿಸಲಾಗಿದೆ. ಮೀನುಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ. ಹಾಗೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಮೀನುಗಳ ಮಾರಣಹೋಮ
ಮೀನುಗಳ ಮಾರಣಹೋಮ (ETV Bharat)

ಟೆಂಡರ್ ಪಡೆದವರ ಹೇಳಿಕೆ: "ಲಕ್ಷ್ಮಿ ವೆಂಕಟೇಶ್ವರ ಮೀನು ಉತ್ಪಾದಕ, ಮಾರಾಟ ಮತ್ತು ಸಂಸ್ಕರಣ ಸಹಾಯ ಸಂಘದಿಂದ ಐದು ವರ್ಷಕ್ಕೆ ಟೆಂಡರ್ ಪಡೆದು 3-4 ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗಿತ್ತು. 1-2 ಲಕ್ಷ ಮೀನುಗಳ ಸಾವನ್ನಪ್ಪಿವೆ. ಒಂದೊಂದು ಮೀನು ಐದರಿಂದ ಹತ್ತು ಕೆಜಿ ಗಾತ್ರದ್ದಾಗಿವೆ. ಐದು ವರ್ಷಕ್ಕೆ ಹತ್ತು ಲಕ್ಷ ಹಣ ವ್ಯಯ ಮಾಡಲಾಗಿತ್ತು. ಮೀನುಗಳ ಸಾವಿನಿಂದ 10 ರೂಪಾಯಿನಷ್ಟು ನಮಗೆ ಲಾಸ್​​ ಆಗಿದೆ. ಯಾರು ಈ ಕೃತ್ಯ ಎಸಗೆದ್ದಾರೆಂಬುದು ತಿಳಿದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸರ್ಕಾರ ನಮಗೆ ಪರಿಹಾರ ಒದಗಿಸಬೇಕು" ಎಂದು ಟೆಂಡರ್​ದಾರ ಮಂಜುನಾಥ್​ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಲಾಳನಕೆರೆಯಲ್ಲಿ ಮೂರು ಹಸುಗಳು ಸಾವು: 10ಕ್ಕೂ ಹೆಚ್ಚು ಆಕಳುಗಳು ಅಸ್ವಸ್ಥ, ಕಂಗಾಲಾದ ರೈತ ಕುಟುಂಬ - cows died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.