ETV Bharat / state

ಲಾಳನಕೆರೆಯಲ್ಲಿ ಮೂರು ಹಸುಗಳು ಸಾವು: 10ಕ್ಕೂ ಹೆಚ್ಚು ಆಕಳುಗಳು ಅಸ್ವಸ್ಥ, ಕಂಗಾಲಾದ ರೈತ ಕುಟುಂಬ - cows died

author img

By ETV Bharat Karnataka Team

Published : May 15, 2024, 9:28 PM IST

Updated : May 15, 2024, 10:57 PM IST

ಹೆಚ್ಚಿನ ಪ್ರಮಾಣದ ಯೂರಿಯಾ ಸೇವಿಸಿ ಮೂರು ಹಸುಗಳು ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ.

cows
ಹಸು ಅಸ್ವಸ್ಥ (Mandya)

ಲಾಳನಕೆರೆಯಲ್ಲಿ ಮೂರು ಹಸು ಸಾವು (ETV Bharat)

ಮಂಡ್ಯ : ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಬುಧವಾರ ಮೂರು ಹಸುಗಳು ಮೃತಪಟ್ಟು, 10ಕ್ಕೂ ಹೆಚ್ಚು ಹಸು ಹಾಗೂ ಕರುಗಳು ತೀವ್ರ ಅಸ್ವಸ್ಥಗೊಂಡಿವೆ. ಗ್ರಾಮದ ಸೋಮಶೇಖರ್ ಎಂಬುವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಉಳಿದ ಜಾನುವಾರು ನಿತ್ರಾಣಗೊಂಡಿವೆ. ಈ ಹಿನ್ನೆಲೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದು, ಹಸು ಹಾಗೂ ಕರುಗಳ ಸ್ಥಿತಿ ಗಂಭೀರವಾಗಿರುವುದು ಕುಟುಂಬದ ಆತಂಕಕ್ಕೆ ಕಾರಣವಾಗಿದೆ.

ಹೈನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿರುವ ಸೋಮಶೇಖ‌ರ್, 15ಕ್ಕೂ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸಾಕಣೆ ಮಾಡಿಕೊಂಡಿದ್ದಾರೆ. ಅಂತೆಯೇ ನಿತ್ಯ ಡೇರಿಗೆ 150 ಲೀಟರ್ ಹಾಲು ಹಾಕುತ್ತಿದ್ದರು. ಬುಧವಾರ ಮುಂಜಾನೆ ಹಾಲು ಕರೆಯುವ ಮುನ್ನ ಹಸುಗಳಿಗೆ ಮೇವು ಮತ್ತು ತಿಂಡಿ ನೀಡಿದ್ದಾರೆ. ಇವುಗಳನ್ನು ತಿಂದ ಕೆಲವೊತ್ತಿನಲ್ಲಿ ಅಸ್ವಸ್ಥಗೊಂಡ ಹಸುಗಳು ಉಸಿರಾಟ ತೊಂದರೆ ಅನುಭವಿಸಿವೆ.

ಇದರಿಂದ ಎಚ್ಚೆತ್ತ ಮನೆಯವರು ತಕ್ಷಣ ಪಶುವೈದ್ಯಾಧಿಕಾರಿಗೆ ಕರೆ ಮಾಡಿದ್ದು, ಅವರು ಬಂದು ಚಿಕಿತ್ಸೆ ನೀಡಿದರೂ ಸಹ ಮೂರು ಹಸು ಸಾವನ್ನಪ್ಪಿವೆ. ಪ್ರತಿನಿತ್ಯ ಒಂದು ಅವಧಿಗೆ 10 ಲೀಟರ್‌ಗೂ ಹೆಚ್ಚು ಹಾಲು ನೀಡುತ್ತಿದ್ದ ಹಸುಗಳು ಸಾವನ್ನಪ್ಪಿವೆ. ಪ್ರತಿ ಹಸು 1 ಲಕ್ಷ ರೂ. ಗೂ ಹೆಚ್ಚು ಬೆಲೆಬಾಳುತ್ತಿದ್ದವು. ಅನಿರೀಕ್ಷಿತ ದುರಂತದಲ್ಲಿ ಹಲವು ಹಸುಗಳು ಮೃತಪಟ್ಟಿರುವುದರಿಂದ ಹೈನುಗಾರಿಕೆ ನಂಬಿ ಬದುಕುತ್ತಿದ್ದ ಕುಟುಂಬಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ದಿಕ್ಕು ತೋಚದ ಪರಿಸ್ಥಿತಿಯಂತಾಗಿದೆ.

ಈ ಸಂಬಂಧ ಪಶು ವೈದ್ಯಕೀಯ ನಿರ್ದೇಶಕ ಡಾ. ಎಸ್. ಸಿ ಸುರೇಶ್ ಮಾತನಾಡಿ, ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಲಾಳನಕೆರೆ ಗ್ರಾಮದ ರೈತ ಸೋಮಶೇಖರ್ ಕರೆ ಮಾಡಿದ್ರು. ಹಸುಗಳು ಅಸ್ವಸ್ಥವಾಗಿರುವ ಮಾಹಿತಿ ಮೇರೆಗೆ ನಮ್ಮ ವೈದ್ಯಾಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಪರಿಶೀಲನೆ ವೇಳೆ ಹಸುವಿಗೆ ಯೂರಿಯಾವನ್ನ ತಿಂಡಿ ಜೊತೆ ಕೊಟ್ಟಿರುವುದು ತಿಳಿದು ಬಂದಿದೆ. 15 ಹಸುಗಳನ್ನ ಸಾಕಿದ್ದಾರೆ. ಹಾಲು ಹೆಚ್ಚಳಕ್ಕೆ ತಿಂಡಿ ಜೊತೆ ಸ್ವಲ್ಪ ಯೂರಿಯಾ ಹಾಕುತ್ತಾರೆ.

ಪ್ರತಿನಿತ್ಯ ಕೂಡ ಯೂರಿಯಾ ಹಾಕಿದ್ದಾರೆ. ಈ ಬಾರಿ ತಿಂಡಿ, ಅಕ್ಕಿನುಚ್ಚಿನ ಜೊತೆ ಯೂರಿಯಾವನ್ನು ಹಾಕಿದ್ದಾರೆ. ಎರಡಕ್ಕೂ ಕನ್ಫ್ಯೂಸ್ ಆಗಿ ಕತ್ತಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಹಾಕಿದ್ದಾರೆ. ಯೂರಿಯಾ ವಿಷವಾಗಿ ಹಸುಗಳು ಅಸ್ವಸ್ಥವಾಗಿವೆ. ಮೂರು ಹಸು ಮೃತಪಟ್ಟಿವೆ ಎಂದರು.

ಆಸ್ಪತ್ರೆಯ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಮೂರು ಹಸುಗಳಲ್ಲಿ ಎರಡಕ್ಕೆ ಮಾತ್ರ ಜೀವ ವಿಮೆ ಮಾಡಿಸಲಾಗಿದೆ. ಉಳಿದ ಹಸುಗಳಿಗೆ ನಮ್ಮ ಇಲಾಖೆಯಿಂದ ಪರಿಹಾರ ಕೊಡಲಾಗುತ್ತದೆ. ನಾಲ್ಕು ಹಸು ಮೃತಪಟ್ಟಿವೆ. ಇಲಾಖೆಯಿಂದ ಪರಿಹಾರ ಕೊಡ್ತಿದ್ದೇವೆ. ಉಳಿದ ಎಲ್ಲ ಹಸುಗಳು ಆರೋಗ್ಯವಾಗಿವೆ. ಯೂರಿಯಾ ಪ್ರಮಾಣವನ್ನು ಎಷ್ಟು ನೀಡಬೇಕು ಅನ್ನೋದರ ಮಾಹಿತಿಯನ್ನು ರೈತರಿಗೆ ನೀಡಿದ್ದೇವೆ ಎಂದರು.

ಒಟ್ಟಾರೆ ರಾಸುಗಳ ಸಾವಿಗೆ ರಾಸಾಯನಿಕ ವಸ್ತು ವಿಷವಾಗಿದೆ. ರೈತರು ಎಚ್ಚರಿಕೆಯಿಂದ ಹಸುಗಳಿಗೆ ತಿಂಡಿ ನೀಡುವಂತೆ ಪಶು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಉತ್ಸವದಲ್ಲಿ ಉಳಿದ ಹಳಸಿದ ಆಹಾರ ಪೂರೈಕೆ; 54 ಹಸುಗಳ ದಾರುಣ ಸಾವು!

Last Updated : May 15, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.