ETV Bharat / assembly-elections

ಬಿಜೆಪಿಯಿಂದ ಬಿ ಫಾರಂ ವಿತರಣೆ: ಚಿತ್ರದುರ್ಗದಿಂದ ಕಣದಲ್ಲಿದ್ದಾರೆ 75ರ ಜಿ.ತಿಪ್ಪಾರೆಡ್ಡಿ

author img

By

Published : Apr 13, 2023, 9:16 PM IST

Tippareddy
ತಿಪ್ಪಾರೆಡ್ಡಿ

ಈಗಾಗಲೇ ಬಿಡುಗಡೆಯಾಗಿರುವ ಎರಡು ಪಟ್ಟಿಗಳಲ್ಲಿ 212 ಕ್ಷೇತ್ರಗಳಿಗೆ ಬಿಜೆಪಿ ಹುರಿಯಾಳುಗಳನ್ನು ಪ್ರಕಟಿಸಿದೆ.

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡ ಅಭ್ಯರ್ಥಿಗಳಿಗೆ ಬಿಜೆಪಿ ಬಿ ಫಾರಂ ವಿತರಿಸುತ್ತಿದೆ. ನಿನ್ನೆ 22 ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಲಾಗಿತ್ತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಮೊದಲ ದಿನವಾದ ಇಂದು ಕೂಡ ಟಿಕೆಟ್ ಪಡೆದ ಅಭ್ಯರ್ಥಿಗಳು ಪಕ್ಷದ ಕಚೇರಿಗೆ ಆಗಮಿಸಿ ಬಿ ಫಾರಂಗಳನ್ನು ಪಡೆದುಕೊಂಡರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ಶಿರಾ ಶಾಸಕ ರಾಜೇಶ್ ಗೌಡ, ಅರಸೀಕೆರೆ ಅಭ್ಯರ್ಥಿ ಜಿ.ವಿ.ಬಸವರಾಜು, ಜಯನಗರ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ, ಬೆಂಗಳೂರು ದಕ್ಷಿಣ ಅಭ್ಯರ್ಥಿ ಎಂ.ಕೃಷ್ಣಪ್ಪ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಬೈಂದೂರು ಅಭ್ಯರ್ಥಿ ಗುರುರಾಜ್ ಘಂಟಿಹೊಳಿ ಸೇರಿದಂತೆ ಹಲವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ಫಾರಂ ಪಡೆದರು.

ನಾನು ಯಾವುದೇ ಒತ್ತಡ ಹಾಕಿರಲಿಲ್ಲ-ಜಿ.ತಿಪ್ಪಾರೆಡ್ಡಿ: ಬಿ ಫಾರಂ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಮುಖಂಡ, ಚಿತ್ರದುರ್ಗದ ಅಭ್ಯರ್ಥಿ ಜಿ.ತಿಪ್ಪಾರೆಡ್ಡಿ, ನನಗೆ 75 ವರ್ಷ ಮೀರಿದೆ. ಆದರೂ ಪಕ್ಷ ಟಿಕೆಟ್ ನೀಡಿದೆ. ನಾನು ಯಾವುದೇ ತರನಾದ ಒತ್ತಡ ಹಾಕಿರಲಿಲ್ಲ. ನನ್ನ ಸೇವೆ ಗುರುತಿಸಿ ಜಿಲ್ಲೆಯ ಆಗುಹೋಗುಗಳನ್ನು ನೋಡಿ ಟಿಕೆಟ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಆರೂ ಜನ ಅಭ್ಯರ್ಥಿಗಳು ಒಟ್ಟಿಗಿದ್ದೇವೆ. ಹಿಂದೆ ಐದು ಜನ ಗೆದ್ದಿದ್ದೆವು. ಈಗ ಆರೂ ಜನ ಗೆಲ್ಲುತ್ತೇವೆ. ಕನಿಷ್ಠ 130 ಸೀಟು ಗೆದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮೋದಿಯವರ ಜೊತೆ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ ಎಂದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಿರಿಯ ನಾಯಕ ಈಶ್ವರಪ್ಪ ತರ ನಿವೃತ್ತಿ ಪಡೆಯಬಹುದಿತ್ತು ಎನ್ನುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ತಿಪ್ಪಾ ರೆಡ್ಡಿ, ಪಕ್ಷ ಕೇಳಿ ಈ ತೀರ್ಮಾನ ಮಾಡಬೇಕಿತ್ತು. ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷ ಟಿಕೆಟ್ ನೀಡಿದೆ ಹಾಗಾಗಿ ಇಂತಹ ತೀರ್ಮಾನ ಮಾಡಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ನಮ್ಮ ಕ್ಷೇತ್ರ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ತರ ಇಲ್ಲ. ಇದು ಬೇರೆಯ ರೀತಿಯ ರಾಜಕಾರಣ ಇರುವ ಕ್ಷೇತ್ರ ಹಾಗಾಗಿ ಪಕ್ಷ ನನಗೆ ಟಿಕೆಟ್ ನೀಡಿದ್ದು ಅದರಂತೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ನಾನು ನಮ್ಮ ಮಗನಿಗೆ ಟಿಕೆಟ್ ಕೇಳಿರಲಿಲ್ಲ. ಅದು ಮಾಧ್ಯಮದಲ್ಲಿ ಬಂದಿದ್ದಷ್ಟೆ. ವಯಸ್ಸಿನ ಆಧಾರದ ಮೇಲೆ ನನಗೆ ಟಿಕೆಟ್ ಕೊಡದಿದ್ದರೂ ನನಗೆ ಬೇಸರವಾಗುತ್ತಿರಲಿಲ್ಲ. ಸಂತೋಷವಾಗೇ ಇರುತ್ತಿತ್ತು. ಆದರೂ ಈಗ ಟಿಕೆಟ್ ಸಿಕ್ಕಿದೆ. ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿ ನಾವು 120 ಸೀಟುಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಳೆದ ಬಾರಿಯೇ ನನಗೆ ಸಚಿವ ಸ್ಥಾನ ಅವಕಾಶ ಸಿಕ್ಕಿತ್ತು. ಆದರೆ, ನಾನು ಒಪ್ಪಲಿಲ್ಲ. ಆರು ಬಾರಿ ಗೆದ್ದಿದ್ದೇನೆ. ಮಂತ್ರಿ ಆಗೋದಕ್ಕಿಂತ ಆರು ಬಾರಿ ಗೆಲ್ಲಿಸಿರೋದೆ ನನಗೆ ಖುಷಿ ಎಂದು ಹೇಳಿದರು.

ಸಮಾನ್ಯ ಕಾರ್ಯಕರ್ತನಿಗೆ ಟಿಕೆಟ್​ ಸಿಕ್ಕಿದೆ: ಬೈಂದೂರು ಕ್ಷೇತ್ರದ ಅಭ್ಯರ್ಥಿ ಗುರುರಾಜ್ ಘಂಟಿಹೊಳಿ ಮಾತನಾಡಿ, ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವನು ನಾನು. ಚುನಾವಣೆ ಅಂದರೆ ಹಣ ಇರುವವರಿಗೆ ಟಿಕೆಟ್ ಕೊಡುತ್ತಾರೆ ಅನ್ನೋದು ಸಾಮಾನ್ಯ ಮಾತು. ಆದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟಿದ್ದಾರೆ, ಪಕ್ಷದ ನಿರೀಕ್ಷೆ ಹುಸಿ ಮಾಡದೆ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸುಕುಮಾರ್ ಶೆಟ್ಟಿಗೆ ಟಿಕೆಟ್ ಕೊಡದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಘಂಟಿಹೊಳಿ, ಸುಕುಮಾರ್ ಶೆಟ್ಟರು ಕೂಡಾ ಸಮಾನ್ಯ ವ್ಯಕ್ತಿ. ದೇವಸ್ಥಾನ, ಗ್ರಾಮ ಅಭಿವೃದ್ಧಿ ಮಾಡಿದ್ದಾರೆ. ಪಕ್ಷ ಸಣ್ಣ ಕಾರ್ಯಕರ್ತನಿಗೆ ಈ ಬಾರಿ ಅವಕಾಶ ಕೊಡಬಹುದಾ ಅಂತ ಅವರಿಗೆ ಕೇಳಿದ್ದಾರೆ. ಅದಕ್ಕೆ ಅವರು ಒಪ್ಪಿ ಬಿಟ್ಟುಕೊಟ್ಟಿದ್ದಾರೆ ಎಂದರು.

ಅರಸೀಕೆರೆ ಅಭ್ಯರ್ಥಿ ಜಿ.ವಿ. ಬಸವರಾಜು ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ನಾನು ನನ್ನಂಥ ಕಾರ್ಯಕರ್ತನಿಗೆ ಪಕ್ಷ ಗುರುತಿಸಿ ಟಿಕೆಟ್ ಕೊಟ್ಟಿದೆ. ಎಲ್ಲ ಕಾರ್ಯಕರ್ತರು ಅರಸೀಕೆರೆಯಲ್ಲಿ ಬಿಜೆಪಿ ಗೆಲ್ಲಿಸಲಿದ್ದಾರೆ. ಎನ್.ಆರ್. ಸಂತೋಷ್ ಸೇರಿ ಹಲವು ಆಕಾಂಕ್ಷಿಗಳು ಬೇಸರವಾಗಿದ್ದಾರೆ. ಅವರೆಲ್ಲರ ಜತೆ ಚರ್ಚೆ ಮಾಡಿ ಸಹಕಾರ, ಬೆಂಬಲ ಕೇಳುತ್ತೇನೆ. ನನಗೆ ಪಕ್ಷ ಟಿಕೆಟ್ ಕೊಟ್ಟಿದೆ. 12ವರ್ಷ ಪಕ್ಷದ ಸೇವೆ ಮಾಡಿದ್ದೇನೆ. ಯಾರ ಕಡೆಯಿಂದಲೂ ಟಿಕೆಟ್ ಸಿಕ್ಕಿಲ್ಲ ಇದು ಪಕ್ಷದ ತೀರ್ಮಾನ ಎಂದರು.

ಜಯನಗರ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಮಾತನಾಡಿ, ಜಯನಗರದಲ್ಲಿ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರು ಬಿಜೆಪಿ ಗೆಲ್ಲಿಸಲು ಹೊರಟಿದ್ದಾರೆ. ಎನ್.ಆರ್.ರಮೇಶ್ ಕೂಡ ನಮ್ಮ ನಾಯಕರು, ಜಿಲ್ಲಾ ಅಧ್ಯಕ್ಷರು. ರಮೇಶ್ ಅವರ ಮನೆಗೆ ಹೋಗುತ್ತೇನೆ. ಹೋಗಿ ಅವರ ಜೊತೆ ಚರ್ಚೆ ಮಾಡುತ್ತೇನೆ. ನಮ್ಮನ್ನ ಬೆಂಬಲಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ನನಗೆ ಸಿಗಲಿದೆ: ಬಿಎಸ್​ವೈ ಭೇಟಿ ಬಳಿಕ ಶೆಟ್ಟರ್ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.