ಕರ್ನಾಟಕ

karnataka

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನಿಧನ

By ETV Bharat Karnataka Team

Published : Mar 1, 2024, 12:15 PM IST

ಕಾರ್ಯಕ್ರಮ ನಿರೂಪಕ, ತಾಳಮದ್ದಳೆ ಅರ್ಥದಾರಿಯಾಗಿ, ಕತೆ- ಕಾದಂಬರಿಕಾರನಾಗಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಮನೋಹರ್​ ಪ್ರಸಾದ್​ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

manohar prasad
ಮನೋಹರ ಪ್ರಸಾದ್

ಮಂಗಳೂರು: ಹಿರಿಯ ಪತ್ರಕರ್ತ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋಹರ ಪ್ರಸಾದ್ ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನವಭಾರತ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ ಅವರು 1984ರಲ್ಲಿ ಉದಯವಾಣಿಯ ಮಂಗಳೂರು ವರದಿಗಾರರಾಗಿ, ಆ ಬಳಿಕ ಪ್ರಧಾನ ವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. 36 ವರ್ಷಗಳ ಕಾಲ ಉದಯವಾಣಿ ಪತ್ರಿಕೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, 2020ರಲ್ಲಿ ನಿವೃತ್ತಿ ಹೊಂದಿದ್ದರು. ಮದರ್ ಥೆರೆಸಾ, ಅಮಿತಾಬ್ ಬಚ್ಚನ್, ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ, ಡಾ.ರಾಜ್ ಕುಮಾರ್, ರಾಜೀವ ಗಾಂಧಿ, ಮೋಹನ್ ಲಾಲ್, ಮಮ್ಮುಟ್ಟಿ, ಐಶ್ವರ್ಯಾ ರೈ ಸೇರಿದಂತೆ ಮುಂತಾದ ಲೆಜೆಂಡ್ರಿಗಳನ್ನು ವಿಶೇಷ ಸಂದರ್ಶನ ಮಾಡಿರುವ ಹೆಗ್ಗಳಿಕೆ ಇವರದ್ದಾಗಿದೆ.

ಅವಿವಾಹಿತರಾಗಿದ್ದ ಇವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ತುಳು, ಕೊಂಕಣಿ, ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಮೂರು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ನಿರೂಪಣೆ, ತಾಳಮದ್ದಳೆ ಅರ್ಥಧಾರಿ, ಕ್ರಿಕೆಟ್‌ ಆಟಗಾರ, ಕ್ರಿಕೆಟ್ ವೀಕ್ಷಕ ವಿವರಕ, ಕತೆ-ಕಾದಂಬರಿಕಾರ, ಅಂಕಣಗಾರ ಹೀಗೆ ವಿವಿಧ ಮಜಲುಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದವರು‌. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿತ್ತು.

ಇದನ್ನೂ ಓದಿ:ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ

ABOUT THE AUTHOR

...view details