ಕರ್ನಾಟಕ

karnataka

ರಾಮೇಶ್ವರ ಕೆಫೆ ಸ್ಫೋಟಕ್ಕೂ ಬಳ್ಳಾರಿ ಮಾಡ್ಯೂಲ್​ಗೆ ಸಾಮ್ಯತೆ: ಎನ್‌ಐಎ ತನಿಖೆಯಲ್ಲಿ ಬೆಳಕಿಗೆ

By ETV Bharat Karnataka Team

Published : Mar 8, 2024, 10:48 PM IST

ರಾಮೇಶ್ವರ ಕೆಫೆ ಸ್ಫೋಟಕ್ಕೂ ಬಳ್ಳಾರಿ ಮಾಡ್ಯೂಲ್​ಗೆ ಸಾಮ್ಯತೆ ಇದೆ ಎಂಬುದು ಎನ್​ಐಎ ತನಿಖೆ ವೇಳೆ ತಿಳಿದು ಬಂದಿದೆ.

ಎನ್‌ಐಎ
ಎನ್‌ಐಎ

ಬೆಂಗಳೂರು : ರಾಮೇಶ್ವರಂ ಕೆೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಬಳ್ಳಾರಿ ಮಾಡ್ಯೂಲ್​ಗೂ ಸಾಮ್ಯತೆ ಇರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ಕಳೆದ ವರ್ಷ ಡಿ. 18ರಂದು ಬಳ್ಳಾರಿ ಮಾಡ್ಯೂಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಎಂ ಡಿ ಸುಲೇಮಾನ್, ಸೈಯದ್ ಸಮೀರ್ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ಅನಾಸ್ ಇಕ್ಬಾಲ್ ಶೇಕ್​, ದೆಹಲಿಯಲ್ಲಿ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್‌ನನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಎನ್‌ಐಎ ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಮತ್ತು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಶನಿವಾರ ಕೂಡ ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

2023ರ ಡಿ.18ರಂದು ರಾಜ್ಯ ಸೇರಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ಉಗ್ರ ಸಂಘಟನೆಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಮಾಹಿತಿ ಸಂಗ್ರಹಿಸಿದ್ದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಯಲಿಗೆ ಎಳೆದಿದ್ದು, ಈ ವೇಳೆ, ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು. ಈ ವೇಳೆ, ಬಳ್ಳಾರಿ ಮಾಡ್ಯೂಲ್‌ನ ಪ್ರಮುಖ ರೂವಾರಿ ಮಿನಾಜ್ ಅಲಿಯಾಸ್ ಎಂ. ಡಿ ಸುಲೇಮಾನ್ ಎಂಬುದು ಖಾತ್ರಿಯಾಗಿತ್ತು.

ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಶಂಕಿತ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಬಳ್ಳಾರಿಗೆ ಪ್ರಯಾಣಿಸಿ ಕೆಲ ಗಂಟೆಗಳ ಕಾಲ ಉಳಿದುಕೊಂಡಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು. ಜತೆಗೆ ಈ ಶಂಕಿತರು ಬೆಳಗಾವಿಯ ಖಾನಾಪುರ ಬಳಿ ಜಂಬೋಂಟಿ ಅರಣ್ಯದಲ್ಲಿ ಐಇಡಿ ಬಳಸಿ ಪ್ರಾಯೋಗಿಕ ಸ್ಫೋಟಕ್ಕೆ ಜಾಗ ನಿಗದಿಪಡಿಸಿದ್ದರು. ಅಲ್ಲದೇ, ಈ ಶಂಕಿತರು ಬಳಸಿದ್ದ ರಾಸಾಯನಿಕ ವಸ್ತುಗಳನ್ನೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಶಂಕಿತ ಬಳಸಿದ್ದಾನೆ.

ಮತ್ತೊಂದೆಡೆ ಬಂಧಿತರು ಬಳ್ಳಾರಿ, ಬೆಂಗಳೂರಿನಲ್ಲಿ ತಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಸಂಘಟನೆ ಮಾಡುತ್ತಿರುವುದು ಪತ್ತೆಯಾಗಿದೆ. ಜತೆಗೆ ಬ್ಯಾಡರಹಳ್ಳಿಯಲ್ಲಿ ಬಂಧನಕ್ಕೊಳಗಾದ ಮೂವರು ಶಂಕಿತರು ಕೆಲ ಯುವಕರನ್ನು ಪ್ರಚೋದಿಸಿ ಸಂಘಟನೆ ಬಗ್ಗೆ ಒಲವು ಬರುವಂತೆ ಪ್ರಚೋದಿಸಿರುವುದು ಪತ್ತೆಯಾಗಿತ್ತು. ಆದರೆ, ಆ ವಿದ್ಯಾರ್ಥಿಗಳ ಬಗ್ಗೆ ಬಂಧಿತರು ಮಾಹಿತಿ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಬೆಂಗಳೂರು ಕೆಫೆ ಸ್ಫೋಟ ಪ್ರಕರಣ; ಶಂಕಿತನ ವಶಕ್ಕೆ ಪಡೆದ ಎನ್ಐಎ

ABOUT THE AUTHOR

...view details