ETV Bharat / state

ಬೆಂಗಳೂರು ಕೆಫೆ ಸ್ಫೋಟ ಪ್ರಕರಣ; ಶಂಕಿತನ ವಶಕ್ಕೆ ಪಡೆದ ಎನ್ಐಎ

author img

By ETV Bharat Karnataka Team

Published : Mar 8, 2024, 7:30 AM IST

Updated : Mar 8, 2024, 12:52 PM IST

bengaluru blast case
ಕೆಫೆ ಸ್ಫೋಟ ಪ್ರಕರಣ

ಬೆಂಗಳೂರು ಕೆಫೆ ಸ್ಫೋಟ ಪ್ರಕರಣ ಸಂಬಂಧ ಶಂಕಿತನೊಬ್ಬನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತ​ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದಡಿ ಬಳ್ಳಾರಿಯ ಕೌಲ್​ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದ, ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯ ಮಿನಾಜ್ ಹಾಗೂ ಆತನ ಗುಂಪಿನ ಮತ್ತೋರ್ವ ಸದಸ್ಯ ಸಯ್ಯದ್ ಸಮೀರ್ ಎಂಬಾತನನ್ನು ಈ ಹಿಂದೆ ಎನ್ಐಎ ಬಂಧಿಸಿತ್ತು. ಬಳಿಕ ಆತನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಕೆಲ ಮಹತ್ವದ ಸುಳಿವುಗಳು ಲಭ್ಯವಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಬಳ್ಳಾರಿಗೆ ಆರೋಪಿ ತೆರಳಿರುವ ಶಂಕೆ: ಎನ್​ಐಎಯಿಂದ ಪರಿಶೀಲನೆ

ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಸುಲೇಮಾನ್​ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಇದಕ್ಕಾಗಿಯೇ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಆರೋಪವಿದೆ. 2023ರ ಡಿಸೆಂಬರ್ 18ರಂದು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಎನ್ಐಎ ಅಧಿಕಾರಿಗಳು ಮಿನಾಜ್​​ನನ್ನು ಬಂಧಿಸಿದ್ದರು. ಬಳಿಕ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ಅಧಿಕಾರಿಗಳು ಮಹತ್ವದ ಸುಳಿವು ಆಧರಿಸಿ ಮಾರ್ಚ್ 6 ರಂದೇ ಶಂಕಿತ ಉಗ್ರ ಮಿನಾಜ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿ, ಆತನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೆಫೆ ಸ್ಫೋಟ: ಬಿಎಂಟಿಸಿ ಬಸ್​ನಲ್ಲಿ ಶಂಕಿತನ ಓಡಾಟದ ಮತ್ತೊಂದು ವಿಡಿಯೋ ಸೆರೆ

Last Updated :Mar 8, 2024, 12:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.