ಕರ್ನಾಟಕ

karnataka

ಜಾತಿ ಗಣತಿ ವರದಿಗೆ ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ

By ETV Bharat Karnataka Team

Published : Mar 1, 2024, 3:10 PM IST

ಜಾತಿ ಗಣತಿ ವರದಿಗೆ ಕಾಂಗ್ರೆಸ್​ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ
ಶಾಸಕ ಶಾಮನೂರು ಶಿವಶಂಕರಪ್ಪ

ಬೆಂಗಳೂರು:ರಾಜ್ಯಸರ್ಕಾರ ವರದಿಯನ್ನು ಏನು ಮಾಡುತ್ತದೆ ನೋಡೋಣ. ನಾವಂತೂ ಸುಮ್ಮನೆ ಕೂರುವುದಿಲ್ಲ ಎಂದು ಜಾತಿ ಗಣತಿ ವರದಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದರು.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. 9 ವರ್ಷದ ಹಳೆಯ ವರದಿಯನ್ನೇ ಈಗ ಮತ್ತೆ ತಂದುಕೊಟ್ಟಿದ್ದಾರೆ. ಈ ವರದಿಯನ್ನು ನಾವು ಒಪ್ಪುವುದಿಲ್ಲ. ಜಾತಿ ಗಣತಿ ವರದಿಯನ್ನು ಮನೆಯಲ್ಲೇ ಕೂತು ತಯಾರಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ 2 ಕೋಟಿಗೂ ಅಧಿಕವಿದೆ. ಹಾಗಿದ್ದರೂ, ಉದ್ದೇಶಪೂರ್ವಕವಾಗಿ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂಬ ಅನುಮಾನವಿದೆ. ನಮ್ಮ ಸಮುದಾಯದ ಜನಸಂಖ್ಯೆಯನ್ನು ಬರೀ 65 ಲಕ್ಷ ಅಂತ ತೋರಿಸುತ್ತಿದ್ದಾರೆ. ಆದರೆ ಇದು ಸುಳ್ಳು. ಈ ವರದಿ ಬಗ್ಗೆ ಪುನರ್‌ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ನಾವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧ ಇಲ್ಲ. ನಮ್ಮ ಜನಸಂಖ್ಯೆ ಹೆಚ್ಚಿದೆ. ಅಗತ್ಯಬಿದ್ದರೆ ಖಾಸಗಿಯಾಗಿಯೂ ಸಮೀಕ್ಷೆ ಮಾಡಿಸುತ್ತೇವೆ. ಈ ವರದಿಯಿಂದ ಜಾತಿ ಸಂಘರ್ಷ ಆಗುತ್ತದೆ. ಚುನಾವಣೆಯಲ್ಲಿ ಸಮಸ್ಯೆ ಆಗುತ್ತದೋ, ಇಲ್ಲವೋ ನಾನು ಈಗಲೇ ಹೇಳಲಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಾರೋ ನೋಡೋಣ ಎಂದರು.

ಸರ್ಕಾರ ವರದಿಯನ್ನು ಒಪ್ಪಬಾರದು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದು ಕಾಂತರಾಜು ವರದಿ ಎಂದು ಸರಿಯಾಗಿಯೇ ಹೇಳಿದ್ದಾರೆ. ಕಾಂತರಾಜು ವರದಿಯನ್ನು ಜಯಪ್ರಕಾಶ್ ಹೆಗ್ಡೆ ಕೊಟ್ಟಿದ್ದಾರೆ. ಈ ವರದಿ ಮೂಲಕ ಜಾತಿ, ಜಾತಿಗಳ ಮೇಲೆ ಛೂ ಬಿಡುವ ಕೆಲಸ ಆಗುತ್ತಿದೆ. ವರದಿಯನ್ನು ಸರ್ಕಾರ ಒಪ್ಪಬಾರದು ಎಂದು ಆಗ್ರಹಿಸಿದರು.

ಇನ್ನು ಲೋಕಸಭೆಗೆ ತಮ್ಮ ಕುಟುಂಬದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಮನೂರು, ಇನ್ನೂ ಯಾವುದೂ ಫೈನಲ್ ಆಗಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಎಂಬುದು ಗೊತ್ತಿಲ್ಲ ಎಂದರು.

ಇದನ್ನೂ ಓದಿ:ಜಾತಿಗಣತಿ ವರದಿ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿಎಂ ನಿರ್ಧಾರ

ABOUT THE AUTHOR

...view details