ಕರ್ನಾಟಕ

karnataka

ಕೆಫೆ ಸ್ಫೋಟ ಪ್ರಕರಣ: ಶಂಕಿತ ಉಗ್ರರು ವಿಮಾನದ ಮೂಲಕ ಬೆಂಗಳೂರಿಗೆ - Cafe Bomb Blast Case

By ETV Bharat Karnataka Team

Published : Apr 12, 2024, 11:03 PM IST

ರಾಮೇಶ್ವರಂ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಶಂಕಿತ ಉಗ್ರರನ್ನು ಎನ್​ಐಎ ಅಧಿಕಾರಿಗಳು ವಿಮಾನದ ಮೂಲಕ ಬೆಂಗಳೂರಿಗೆ ಕರೆತರುತ್ತಿದ್ದಾರೆ.

nia-officials-bringing-suspected-terrorists-to-the-city-by-plane
ಶಂಕಿತ ಉಗ್ರರನ್ನ ವಿಮಾನದ ಮೂಲಕ ನಗರಕ್ಕೆ ಕರೆದುಕೊಂಡು ಬರುತ್ತಿರುವ ಎನ್ಐಎ ಅಧಿಕಾರಿಗಳು

ಶಂಕಿತ ಉಗ್ರರನ್ನ ವಿಮಾನದ ಮೂಲಕ ನಗರಕ್ಕೆ ಕರೆದುಕೊಂಡು ಬರುತ್ತಿರುವ ಎನ್ಐಎ ಅಧಿಕಾರಿಗಳು

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾದಳ‌ದ (ಎನ್ಐಎ) ಅಧಿಕಾರಿಗಳಿಂದ ಬಂಧಿತರಾಗಿರುವ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಶಾಹಿದ್ ಎಂಬವರನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.

ಕೋಲ್ಕತ್ತಾದಿಂದ ಇಂದು ರಾತ್ರಿ 10 ಗಂಟೆಗೆ ಇಂಡಿಗೋ ವಿಮಾನ ಹತ್ತಿದ್ದು, ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಬೆಳಗಿವ ಜಾವ 12.45ಕ್ಕೆ ತಲುಪಲಿದ್ದಾರೆ. ಬಳಿಕ ಶಂಕಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮುಂಜಾನೆಯೊಳಗೆ ಎನ್ಐಎ ವಿಶೇಷ ನ್ಯಾಯಾಲಯ ಜಡ್ಜ್​ ಮನೆಗೆ ಕರೆದೊಯ್ದು, ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳು ಮಾರ್ಚ್ 1ರಂದು ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಎಲ್​ಇಡಿ) ಇಟ್ಟು ಸ್ಫೋಟ ನಡೆಸಿದ್ದು, 10 ಮಂದಿ ಗಾಯಗೊಂಡಿದ್ದರು. ಪ್ರಕರಣದ ಸೂತ್ರಧಾರಿ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ತಾಹ ಸೂಚನೆ ಮೇರೆಗೆ ಮುಸಾವೀರ್ ಹೋಟೆಲ್​ಗೆ ಬಂದು ಇಡ್ಲಿ ತಿಂದು ಬಾಂಬ್ ಇಟ್ಟು ಹೋಗಿದ್ದ. ದುಷ್ಕೃತ್ಯ ಮೆರೆದ ಬಳಿಕ ಹುಸೇನ್ ಬಿಎಂಟಿಸಿ ಬಸ್ ಮೂಲಕ ಗೊರಗುಂಟೆಪಾಳ್ಯಕ್ಕೆ ಬಂದು ಅಲ್ಲಿಂದ ತುಮಕೂರು, ಬಳ್ಳಾರಿ, ಕಲಬುರಗಿ‌ ಮಾರ್ಗವಾಗಿ ಹೈದರಾಬಾದ್​ಗೆ ಬಸ್​ಗಳ ಮೂಲಕವೇ ಸಂಚರಿಸಿದ್ದ.

ರಾಜ್ಯದ ಬಸ್​ಗಳಲ್ಲಿ‌ ಪ್ರಯಾಣಿಸಿರುವ ಶಂಕಿತನ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಾಜ್ಯದಿಂದ ಹೈದರಾಬಾದ್ ಮೂಲಕ ತಲುಪಿ ಒಡಿಶಾ ಮೂಲಕ ಕೋಲ್ಕತ್ತಾಕ್ಕೆ ತೆರಳಿದ್ದ. ಮತ್ತೊಂದೆಡೆ ಅಬ್ದುಲ್ ಮತೀನ್ ತಾಹ, ಮುಸಾವೀರ್‌ನೊಂದಿಗೆ ಸಂಪರ್ಕದಲ್ಲಿದ್ದು, ಪ್ರತ್ಯೇಕ ಮಾರ್ಗವಾಗಿ ಕೋಲ್ಕತ್ತಾಗೆ ಬಂದಿದ್ದ. ಇಬ್ಬರು ಜತೆಗೂಡಿ ನಕಲಿ ದಾಖಲಾತಿ ಸಲ್ಲಿಸಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು.

ಇಬ್ಬರು ಶಂಕಿತರ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ಇನಾಮು ನೀಡಿದ್ದ ಎನ್ಐಎ ಅಧಿಕಾರಿಗಳು ಸತತ 42 ದಿನಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ್ದರು. ಕೋಲ್ಕತ್ತಾ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ, ತೆಲಂಗಾಣ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಸಹಕಾರದಿಂದ ಇಂದು ಬೆಳಗ್ಗೆ 2.30ರ ವೇಳೆ ನಿದ್ರೆಯಲ್ಲಿದ್ದ ಶಂಕಿತರನ್ನು ಬಂಧಿಸಿ, ಸ್ಥಳೀಯ ನ್ಯಾಯಾಲಯದ ಅನುಮತಿ ಪಡೆದು ಬೆಂಗಳೂರಿಗೆ ಕರೆದುಕೊಂಡು ಬರುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕೆಫೆ ಬಾಂಬ್ ಸ್ಫೋಟ ಪ್ರಕರಣ: ಈಗಾಗಲೇ ಶಂಕಿತರನ್ನು ಎನ್​ಐಎ ಪತ್ತೆ ಹಚ್ಚಿದೆ - ಗೃಹ ಸಚಿವ ಪರಮೇಶ್ವರ್ - G Parameshwara

ABOUT THE AUTHOR

...view details