ಕರ್ನಾಟಕ

karnataka

ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ಮತ್ತೆ ವಿಧಾನಸಭೆ ಒಪ್ಪಿಗೆ, ಎಲ್ಲರ ಚಿತ್ತ ರಾಜ್ಯಪಾಲರತ್ತ

By ETV Bharat Karnataka Team

Published : Feb 29, 2024, 5:21 PM IST

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆ ಇಂದು ಮತ್ತೆ ಅಂಗೀಕರಿಸಿತು.

ವಿಧಾನಸಭೆ
ವಿಧಾನಸಭೆ

ಬೆಂಗಳೂರು:ವಿಧಾನ ಪರಿಷತ್​ನಲ್ಲಿ ತಿರಸ್ಕೃತಗೊಂಡಿದ್ದ 'ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ'ಕ್ಕೆ ವಿಧಾನಸಭೆ ಮತ್ತೆ ಒಪ್ಪಿಗೆ ಕೊಟ್ಟಿದೆ. ವಾರ್ಷಿಕ ಒಂದು ಕೋಟಿ ರೂ.ಗಳ ಆದಾಯ ಮೀರುವ ಹಿಂದೂ ದೇಗುಲಗಳು ತಮ್ಮ ಈ ಆದಾಯದ ಶೇ.10 ರಷ್ಟನ್ನು ಸರ್ಕಾರಕ್ಕೆ ಕೊಡಬೇಕು. ಹತ್ತು ಲಕ್ಷ ರೂ.ಗಳಿಂದ ಒಂದು ಕೋಟಿ ರೂ. ಒಳಗಿನ ಆದಾಯ ಹೊಂದಿರುವ ದೇಗುಲಗಳು ಶೇ.5ರಷ್ಟನ್ನು ನೀಡಬೇಕು ಎಂಬುದು ತಿದ್ದುಪಡಿ ವಿಧೇಯಕದ ಮುಖ್ಯಾಂಶ. ಆದ್ದರಿಂದಲೇ ಇದಕ್ಕೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ಆದರೆ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕುವರೇ, ಇಲ್ಲವೇ? ಎಂಬುದು ಈಗಿನ ಕುತೂಹಲ. ವಿಧಾನಸಭೆಯಲ್ಲಿ ಬಹುಮತವಿದ್ದ ಕಾರಣದಿಂದ ಆಡಳಿತ ಪಕ್ಷ ಸಹಜವಾಗಿ ಈ ತಿದ್ದುಪಡಿಗೆ ಅಂಗೀಕಾರ ಪಡೆದುಕೊಂಡಿತ್ತು. ಆದರೆ ಪರಿಷತ್​ನಲ್ಲಿ ಬಹುಮತ ಹೊಂದಿರುವ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರೋಧದಿಂದಾಗಿ ವಿಧೇಯಕ ಬಿದ್ದು ಹೋಗಿತ್ತು. ಹಾಗಾಗಿ, ಸಂಸದೀಯ ನಿಯಮಾವಳಿಗಳಂತೆ ಪುನಃ ತಿರಸ್ಕೃತ ವಿಧೇಯಕವು ವಿಧಾನಸಭೆಗೆ ಬಂದು ಅಂಗೀಕಾರಗೊಳ್ಳಬೇಕು.

ಎರಡನೇ ಬಾರಿ ವಿಧಾನಸಭೆಯಲ್ಲಿ ಅಂಗೀಕಾರವಾದರೆ ಪುನಃ ವಿಧಾನ ಪರಿಷತ್​ಗೆ ಹೋಗಬೇಕಾಗಿಲ್ಲ. ಈ ನಿಯಮದ ಅನ್ವಯ ಅಧಿವೇಶನದ ಕೊನೇ ದಿನವಾದ ಇಂದು ಈ ವಿಧೇಯಕ ಪುನಃ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧೇಯಕ ಮಂಡಿಸಿ, ಮತ್ತೊಮ್ಮೆ ಪರ್ಯಾಲೋಚನೆ ಮಾಡಿ ಅಂಗೀಕಾರ ನೀಡುವಂತೆ ಕೋರಿದರು. ಪ್ರತಿಪಕ್ಷ ಸಭಾತ್ಯಾಗ ಮಾಡಿದ್ದರಿಂದ ಕೇವಲ ಆಡಳಿತ ಶಾಸಕರು ಮಾತ್ರ ಸದನದಲ್ಲಿದ್ದರು. ಸ್ಪೀಕರ್ ಯು.ಟಿ.ಖಾದರ್ ಅವರು ಮತಕ್ಕೆ ಹಾಕಿದಾಗ, ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿತು.

ಇದನ್ನೂ ಓದಿ:ಧರ್ಮಾದಾಯ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ತಿರಸ್ಕೃತ: ಸೋಮವಾರ ಮತ್ತೊಮ್ಮೆ ವಿಧೇಯಕ‌ ಮಂಡನೆ ಅನಿವಾರ್ಯ

ABOUT THE AUTHOR

...view details