ETV Bharat / state

ಧರ್ಮಾದಾಯ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ತಿರಸ್ಕೃತ: ಸೋಮವಾರ ಮತ್ತೊಮ್ಮೆ ವಿಧೇಯಕ‌ ಮಂಡನೆ ಅನಿವಾರ್ಯ

author img

By ETV Bharat Karnataka Team

Published : Feb 23, 2024, 9:40 PM IST

Updated : Feb 23, 2024, 10:19 PM IST

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ತಿರಸ್ಕೃತಗೊಂಡಿದೆ.

ಸಚಿವ ರಾಮಲಿಂಗಾರೆಡ್ಡಿ,ಕೋಟ ಶ್ರೀನಿವಾಸ್ ಪೂಜಾರಿ
ಸಚಿವ ರಾಮಲಿಂಗಾರೆಡ್ಡಿ,ಕೋಟ ಶ್ರೀನಿವಾಸ್ ಪೂಜಾರಿ

ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ವಿಧಾನಪರಿಷತ್​ನಲ್ಲಿ ತಿರಸ್ಕೃತಗೊಂಡಿದೆ. ಈ ಮೂಲಕ ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದಿದ್ದ ರಾಜ್ಯ ಸರ್ಕಾರದ ನಡೆಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ.

ವಿಧಾನಪರಿಷತ್​ನಲ್ಲಿ ತಿದ್ದುಪಡಿ ವಿಧೇಯಕಕ್ಕೆ ವಿರೋಧಪಕ್ಷದ ಸದಸ್ಯರು ಅನುಮೋದನೆ ನೀಡದಿದ್ದರಿಂದ ಅಂಗೀಕಾರಗೊಳ್ಳಲಿಲ್ಲ. ಇದರಿಂದ ಆಡಳಿತ ಪಕ್ಷವು ತಿದ್ದುಪಡಿ ಕಾಯ್ದೆಯನ್ನ ಮತ್ತೆ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕೃತಗೊಳಿಸುವ ಅನಿವಾರ್ಯ ಎದುರಾಗಿದೆ.

ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, 2003 ರಿಂದ ವಿಧೇಯಕ ಜಾರಿಯಲ್ಲಿದ್ದು, ಅಂದಿನಿಂದಲೂ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಸದ್ಯ 8 ಕೋಟಿ ಸರ್ಕಾರಕ್ಕೆ ಸಲ್ಲಿಕೆ ಆಗುತ್ತಿದೆ. 2011ರಲ್ಲಿ ಬಿ.ವಿ ಆಚಾರ್ಯ ಅವರು ಸಚಿವರಾಗಿದ್ದಾಗ ತಿದ್ದುಪಡಿ ತರಲಾಗಿತ್ತು. ಈಗಿನ‌ ಸಂಗ್ರಹಣಾ ನಿಧಿ ಯಾವುದೇ ಧಾರ್ಮಿಕ ಕೆಲಸ ಮಾಡಲು ಸಾಕಾಗುವುದಿಲ್ಲ. ಹೊಸ ನಿಯಮದಿಂದ 60 ಕೋಟಿ ಸಂಗ್ರಹವಾಗುತ್ತಿದೆ. ಇದರಿಂದ ಸಿ ದರ್ಜೆಯ ದೇವಸ್ಥಾನಗಳನ್ನು ನಿರ್ವಹಣೆ ಸಾಧ್ಯವಾಗಲಿದೆ ಎಂದರು.

34 ಸಾವಿರ ಸಿ ದರ್ಜೆಯ ದೇವಸ್ಥಾನಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ಅರ್ಚಕರಿದ್ದಾರೆ. 34,165 ದೇವಸ್ಥಾನಗಳ ಅರ್ಚಕರ ವಸತಿಗೆ ಅನುದಾನ, ಅರ್ಚಕರ ಮಕ್ಕಳ ಶಾಲಾ ಕಾಲೇಜು ಅಧ್ಯಯನಕ್ಕೆ ಸ್ಕಾಲರ್ ಶಿಪ್ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ 5 ಕೋಟಿ ಹಣ ಮೀಸಲು, ಅರ್ಚಕರ ವಿಮೆ, ಒಂದು ವೇಳೆ ಮೃತಪಟ್ಟರೆ 2 ಲಕ್ಷ ನೀಡಲಾಗುವುದು. 25 ಕೋಟಿ ರೂಗಳನ್ನು ಸಿ ದರ್ಜೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮೀಸಲಿಡುತ್ತೇವೆ. ಹೀಗಾಗಿ ತಿದ್ದುಪಡಿ ವಿಧೇಯಕ ಮಂಡನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ತಿದ್ದುಪಡಿ ವಿಧೇಯಕ ಬಗ್ಗೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ, ಎ ಹಾಗೂ ಬಿ ದರ್ಜೆಯ ದೇವಸ್ಥಾನಗಳಲ್ಲಿ ಬರುವ ಒಟ್ಟು ನಿವ್ವಳ ಆದಾಯದಲ್ಲಿ ಶೇ.10 ರಷ್ಟು ನಿಧಿ ಸಂಗ್ರಹ ಸರಿಯಲ್ಲ. ನಿವ್ವಳ ಆದಾಯದ ವಾರ್ಷಿಕ ಖರ್ಚು ವೆಚ್ಚ ತೆಗೆದು ಬಾಕಿಯಿರುವ ವಂತಿಕೆಯಲ್ಲಿ ಶೇ.10 ರಷ್ಟು ಹಣ ಸಂಗ್ರಹಿಸಲಿ. ಆದರೆ ಇಡೀ ಆದಾಯದಲ್ಲಿ 10 ರಷ್ಟು ಪಡೆಯುವುದು ಸಮ್ಮತವಲ್ಲ. ಅಲ್ಲದೆ 10 ರಷ್ಟು ಹಣ ಸಂಗ್ರಹಿಸಿ ಸಿ ದರ್ಜೆಯ ದೇವಸ್ಥಾನಕ್ಕೆ ನೀಡುವ ಬದಲು ಸರ್ಕಾರವೇ ಪ್ರತ್ಯೇಕ ಅನುದಾನ ಮೀಸಲಿಡಲಿ. ಧಾರ್ಮಿಕ‌ ಪರಿಷತ್​ನಿಂದ ಅಧ್ಯಕ್ಷರನ್ನ ನೇಮಿಸುವುದನ್ನ ಕೈ ಬಿಡಲಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಹಿಂದಿನ ಸರ್ಕಾರಗಳು ಸಿ ದರ್ಜೆ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಿರಲಿಲ್ಲ. ಹೀಗಾಗಿ ದೇವಾಲಯಗಳ ಸರ್ವಾಂಗೀಣ ಪ್ರಗತಿಗೆ‌‌ ಶೇ.10ರಷ್ಟು ನಿಧಿ ಸಂಗ್ರಹಣೆ ಪೂರಕವಾಗಿದೆ. ಬರುವ ಹಣ ಸರ್ಕಾರದ ಖಜಾನೆಗೆ ಬರದೆ ಆಯಾ ದೇವಾಲಯಗಳ ಬ್ಯಾಂಕ್ ಖಾತೆಯಲ್ಲೇ ಉಳಿಯಲಿದೆ‌. ವಿರೋಧ ಪಕ್ಷದ ಅಪೇಕ್ಷೆಯಂತೆ ಧಾರ್ಮಿಕ ಪರಿಷತ್​ನಿಂದ ಅಧ್ಯಕ್ಷರ ನೇಮಕ ಪ್ರಸ್ತಾವನೆ ಹಿಂಪಡೆಯುತ್ತೇನೆ ಎಂದರು. ಇದಕ್ಕೊಪ್ಪದ ಕೋಟಾ ಶ್ರೀನಿವಾಸ್, ನಿವ್ವಳ ಆದಾಯದಲ್ಲಿ ಶೇ.10ರಷ್ಟು ನಿಧಿ ಸಂಗ್ರಹ ಕೈಬಿಡಬೇಕು ಎಂದು‌ ಪಟ್ಟು ಹಿಡಿದರು.

ಮಸೂದೆ ತಿರಸ್ಕೃತ: ಮುಖ್ಯಮಂತ್ರಿ ಜೊತೆ ಮಾತನಾಡಲು ಸೋಮವಾರದವರೆಗೂ ಕಾಲಾವಕಾಶ ನೀಡಬೇಕೆಂಬ ಸಚಿವರ ಮನವಿಯನ್ನು ಉಪಸಭಾಪತಿ ತಿರಸ್ಕರಿಸಿದರು. ಉಭಯ ಪಕ್ಷಗಳ ನಡುವೆ ಒಮ್ಮತ ಮೂಡದ ಸಂಬಂಧ 15 ನಿಮಿಷಗಳವರೆಗೆ ಕಲಾಪ ಮುಂದೂಡಿದರು. 25 ನಿಮಿಷಗಳ ಬಳಿಕ ಸದನ ಆರಂಭವಾಗುತ್ತಿದ್ದಂತೆ ಉಪಸಭಾಪತಿ‌‌ ತಿದ್ದುಪಡಿ ವಿಧೇಯಕವನ್ನ ಪರ್ಯಾಯಲೋಚನೆಗೆ ಮುಂದಾದರು. ಬಹುಮತ ಹೊಂದಿರುವ ವಿರೋಧಪಕ್ಷ ಕಾಯ್ದೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮಸೂದೆ ತಿರಸ್ಕೃತವಾಯಿತು.

ಇನ್ನೊಂದೆಡೆ ಮೇಲ್ಮನೆಯಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಮಂಡಿಸಿದ್ದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿತ್ತು.

ಇದನ್ನೂ ಓದಿ : ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ: ಸದನದಲ್ಲಿ ಪ್ರತಿಪಕ್ಷಗಳ ಧರಣಿ, ಸೋಮವಾರಕ್ಕೆ ಕಲಾಪ ಮುಂದೂಡಿಕೆ

Last Updated : Feb 23, 2024, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.