ಕರ್ನಾಟಕ

karnataka

ವಿನಯ್ ಕುಲಕರ್ಣಿ ವಿರುದ್ಧದ ದೋಷಾರೋಪಣೆ ಕೈಬಿಡಲು ಹೈಕೋರ್ಟ್ ನಿರಾಕರಣೆ - Vinay Kulkarni

By ETV Bharat Karnataka Team

Published : Apr 8, 2024, 5:09 PM IST

ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಮತ್ತು ಬಿಜೆಪಿ ನಾಯಕ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ವಿಚಾರಣಾ ನ್ಯಾಯಾಲಯ ನಿಗದಿಪಡಿಸಿದ್ದ ದೋಷಾರೋಪಣೆ ಕೈಬಿಡಲು ಹೈಕೋರ್ಟ್ ನಿರಾಕರಿಸಿತು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯ ನಿಗದಿಪಡಿಸಿರುವ ದೋಷಾರೋಪ ಕೈಬಿಡುವಂತೆ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್​ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣ ಸಂಬಂಧ ದೋಷಾರೋಪಣೆ ಹಾಗೂ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಕೋರಿ ಶಾಸಕ ವಿನಯ್​ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನ್ಯಾಯಪೀಠ, ಸೋಮವಾರ ನಿರ್ಧಾರ ಪ್ರಕಟಿಸಿತು. ಇನ್ನಷ್ಟೇ ಅರ್ಜಿಯ ವಿಸ್ತೃತ ಆದೇಶದ ಪ್ರತಿ ಲಭ್ಯವಾಗಬೇಕಿದೆ.

ಈ ಹಿಂದೆ ಅರ್ಜಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೋಷಾರೋಪ ಪಟ್ಟಿಯಲ್ಲಿನ ಎಲ್ಲಾ ದಾಖಲೆಗಳನ್ನು ಆರೋಪಿಗೆ ಒದಗಿಸಿಲ್ಲ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್, ಶಸ್ತ್ರಾಸ್ತ್ರ ಕಾಯ್ದೆ 1959ರ ಪ್ರಕಾರ ಮೊದಲ ಆರೋಪಿ ಬಸವರಾಜ ಮುತ್ತಗಿ ಮೇಲೆ ಮಾತ್ರವೇ ಪೂರ್ವಾನುಮತಿ ಪಡೆದಿದೆ. ವಿನಯ್​ ಕುಲಕರ್ಣಿ ಮೇಲೆ ಪಡೆದಿಲ್ಲ. ವಿನಯ್ ಕುಲಕರ್ಣಿ ವಿರುದ್ಧ ವಿಶೇಷ ನ್ಯಾಯಾಲಯ ದೋಷಾರೋಪ ನಿಗದಿಪಡಿಸುವಾಗ ಶಸ್ತ್ರಾಸ್ತ್ರ ಕಾಯ್ದೆಯನ್ನೂ ಅಡಕಗೊಳಿಸಿರುವುದು ತಪ್ಪು ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿದರು.

ಸಿಬಿಐ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರ ಕೈವಾಡ ಇರುವುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಆದ್ದರಿಂದ ಅರ್ಜಿ ವಜಾಗೊಳಿಸಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಮುಂದುವರೆಯಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠ, ತೀರ್ಪು ಕಾಯ್ದಿರಿಸಿದೆ.

ಪ್ರಕರಣದ ಹಿನ್ನೆಲೆ:ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಮತ್ತು ಬಿಜೆಪಿ ನಾಯಕ ಯೋಗೀಶ್‌ಗೌಡ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. 21 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರುವರಿ 1ರ ವರೆಗೆ ನಿಯಮಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿನಯ್​ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಅವರನ್ನು 2020ರ ನವೆಂಬರ್​ನಲ್ಲಿ ಬಂಧಿಸಿ, ಒಂಬತ್ತು ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.

ಇದನ್ನೂ ಓದಿ:ವೈದ್ಯಕೀಯ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಿ : ಹೈಕೋರ್ಟ್ - High Court

ABOUT THE AUTHOR

...view details