ಕರ್ನಾಟಕ

karnataka

ಮರೆಯಾಗಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಕರ್ಣಾಟಕ ಬ್ಯಾಂಕ್ ವಿಲೀನ ಮಾಡಿಕೊಳ್ಳುವಂತಾಗಬೇಕು: ಡಿಕೆಶಿ

By ETV Bharat Karnataka Team

Published : Feb 18, 2024, 10:56 PM IST

ಎಲ್ಲಾ ರೀತಿಯ ಸಹಕಾರವನ್ನು ಕರ್ಣಾಟಕ ಬ್ಯಾಂಕ್​ಗೆ ರಾಜ್ಯ ಸರಕಾರ ನೀಡಲು ಸಿದ್ಧವಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ತಿಳಿಸಿದರು.

ಡಿಸಿಎಂ ಡಿ.ಕೆ ಶಿವಕುಮಾರ್​
ಡಿಸಿಎಂ ಡಿ.ಕೆ ಶಿವಕುಮಾರ್​

ಮಂಗಳೂರು :ಗ್ರಾಹಕರನ್ನು ಆರ್ಥಿಕವಾಗಿ ಬಲಯುತರನ್ನಾಗಿ ಮಾಡಲು ಶ್ರಮಿಸುತ್ತಿರುವ ಕರ್ಣಾಟಕ ಬ್ಯಾಂಕ್​ಗೆ ಎಲ್ಲಾ ರೀತಿಯ ಸಹಕಾರವನ್ನು ರಾಜ್ಯ ಸರಕಾರ ನೀಡಲು ಸಿದ್ಧವಿದೆ. ದಕ್ಷಿಣ ಕನ್ನಡ ಹಲವು ಬ್ಯಾಂಕುಗಳ ತವರು ನೆಲ. ಆದರೆ ದುರಾದೃಷ್ಟ ಹಲವು ಬ್ಯಾಂಕ್​ಗಳು ಬೇರೆ ಬ್ಯಾಂಕ್​ಗಳ ಜೊತೆ ವಿಲೀನವಾಗಿ ಇಂದು ನಮ್ಮ ನಡುವೆ ಇಲ್ಲ. ಕರ್ಣಾಟಕ ಬ್ಯಾಂಕ್ ಮುಂದಿನ ದಿನಗಳಲ್ಲಿ ಹಲವು ಬ್ಯಾಂಕ್​ಗಳನ್ನು ಸೆಳೆದು ವಿಲೀನ ಮಾಡಿಕೊಂಡು ಕಳೆದುಕೊಂಡಿರುವುದನ್ನು ಪಡೆದು ಕೊಳ್ಳಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಶತಮಾನೋತ್ಸವ ಪ್ರಯುಕ್ತ 100 ರೂಪಾಯಿ ಬೆಳ್ಳಿ ಕವಚದ ನಾಣ್ಯ,ವಿಶೇಷ ಅಂಚೆ ಕವರ್, ವಿಶೇಷ ವೆಬ್ ಸೈಟನ್ನು ಬಿಡುಗಡೆಗೊಳಿಸಿ ಡಿಕೆಶಿ ಮಾತನಾಡಿದರು.

ಯಾರ ಪ್ರಮಾದವೋ ಏನೋ, ನಮ್ಮ ಮಣ್ಣಿನಲ್ಲಿ ಹುಟ್ಟಿದ ಸಿಂಡಿಕೇಟ್, ಕಾರ್ಪೋರೇಶನ್ ಬ್ಯಾಂಕ್​ಗಳು ಕಣ್ಮರೆಯಾಗಿವೆ. ನಿಮ್ಮ ಮುಂದಿನ ಗುರಿ ನಾವು ಕಳೆದುಕೊಂಡಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಮತ್ತೆ ಕರ್ಣಾಟಕ ಬ್ಯಾಂಕುಗಳ ಮೂಲಕ ವಾಪಸ್ ಪಡೆದು, ನಮ್ಮ ಗೌರವ ಸ್ವಾಭಿಮಾನ ಮರಳಿ ಪಡೆಯುವುದು. ಈ ಬಗ್ಗೆ ಕರ್ಣಾಟಕ ಬ್ಯಾಂಕಿನ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಣ ತೊಡಬೇಕು.

ಈ ಸಮಾರಂಭಕ್ಕೆ ಬಂದು, 100 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಈ ಸಮಾರಂಭಕ್ಕೆ ನನಗಿಂತ ಉನ್ನತ ಸ್ಥಾನದಲ್ಲಿರುವ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಆಗಮಿಸಬೇಕಿತ್ತು. ಆದರೂ ನನ್ನ ಕೈಯಲ್ಲಿ ಇವುಗಳ ಅನಾವರಣ ಮಾಡಿಸಿದ್ದು, ನೋಡಿ ನನಗೆ ಪುರಂದರ ದಾಸರ ಪದ ನೆನಪಾಗುತ್ತಿದೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂದರು.

ಕಾರ್ಯಕ್ರಮಕ್ಕೆ ಬಹಳ ಸಂತೋಷದಿಂದ, ಉತ್ಸುಕತೆಯಿಂದ, ದೂರದೃಷ್ಟಿಯೊಂದಿಗೆ ಬಂದಿದ್ದೇನೆ. ನನಗೆ ದಕ್ಷಿಣ ಕನ್ನಡ ಭಾಗದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈ ಭಾಗ ಇತಿಹಾಸವನ್ನೇ ಹೊಂದಿದೆ. ಈ ಬ್ಯಾಂಕಿನ ಇತಿಹಾಸ ನೋಡಿದಾಗ ನೀವು ಬೆಳೆದು ಬಂದ ದಾರಿ ಕಾಣಿಸಿತು. ನೀವು ನಿಮ್ಮ ಮೂಲ ಮರೆತರೆ ಮುಂದೆ ಯಶಸ್ಸು ಸಿಗುವುದಿಲ್ಲ. ನೀವು ನಿಮ್ಮ ಹಾದಿಯನ್ನು ಯಾವತ್ತೂ ಬದಲಿಸಿಲ್ಲ ಎಂದು ಡಿಕೆಶಿ ಕರ್ಣಾಟಕ ಬ್ಯಾಂಕ್​ ಬಗ್ಗೆ ಗುಣಗಾನ ಮಾಡಿದರು.

ಭಾರತ ಸರಕಾರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮಾತನಾಡಿ, ಕರ್ಣಾಟಕ ಬ್ಯಾಂಕ್ ಬ್ಯಾಂಕ್​ನ ವಿವಿಧ ಸೌಲಭ್ಯಗಳೊಂದಿಗೆ ದೇಶದಾದ್ಯಂತ ಸೇವೆ ನೀಡುತ್ತಾ ಬಂದಿದೆ. ಕರ್ಣಾಟಕ ಬ್ಯಾಂಕ್ 100 ವರ್ಷ ಪೂರ್ಣ ಗೊಳಿಸುತ್ತಿರುವ ಸಂದರ್ಭದಲ್ಲಿ ಕರ್ಣಾಟಕ ಯಾತ್ರೆಯ ಮೂಲಕ ಭಾರತವನ್ನು ಜೋಡಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.

ಶತಮಾನದಲ್ಲಿ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಕರ್ಣಾಟಕ ಬ್ಯಾಂಕ್​ನ ವಿವಿಧ ಸೌಲಭ್ಯಗಳನ್ನು ದೇಶದ ಜನತೆಗೆ ವಿಸ್ತರಿಸಬೇಕಾಗಿದೆ. ಜಾಗತಿಕ ವಾದ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕ್ ಕ್ಷೇತ್ರದಲ್ಲಿ ಏರಿಳಿತಗಳು ಉಂಟಾದ ಸಂದರ್ಭದಲ್ಲಿ ಭಾರತದ ಬ್ಯಾಂಕ್ ಗಳು ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗಿದೆ. ಹಲವು ದೇಶಗಳಲ್ಲಿ ಬ್ಯಾಂಕ್​ಗಳು ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗದೆ ವಿಫಲವಾಗಿದೆ. ಕರ್ಣಾಟಕ ಬ್ಯಾಂಕ್ ನಂತಹ ಬ್ಯಾಂಕ್ ಗಳಿಂದ ದೇಶಕ್ಕೆ ಇನ್ನಷ್ಟು ಕೊಡುಗೆಯ ಅಗತ್ಯವಿದೆ ಎಂದು ಆರ್.ವೆಂಕಟರಮಣಿ ವಿವರಿಸಿದರು.

ಬ್ಯಾಂಕ್ ನ ಎಂ.ಡಿ ಹಾಗೂ ಸಿಇಒ ಶ್ರೀಕೃಷ್ಣನ್ ಹೆಚ್ ಸ್ವಾಗತಿಸಿ, ಬ್ಯಾಂಕ್​ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ವಂದಿಸಿದರು. ಮಂಗಳೂರು ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ :ಡಿಸಿಸಿ, ಪಿಕಾರ್ಡ್ ಬ್ಯಾಂಕ್​ಗಳ ಸುಸ್ತಿಸಾಲ ಬಡ್ಡಿ ಮನ್ನಾ; ಡಿಸಿಸಿ ಬ್ಯಾಂಕುಗಳ ಬಾಕಿ ಬಿಡುಗಡೆಗೆ ನಿರ್ಧಾರ

ABOUT THE AUTHOR

...view details