ಕರ್ನಾಟಕ

karnataka

ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿಗೆ ಕ್ಷಮಾದಾನ ವಿವಾದ: ಹಂಗೇರಿ ಅಧ್ಯಕ್ಷೆ ರಾಜೀನಾಮೆ

By ETV Bharat Karnataka Team

Published : Feb 11, 2024, 12:04 PM IST

Updated : Feb 11, 2024, 2:27 PM IST

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಅಪರಾಧಿಗೆ ಕ್ಷಮಾದಾನ ನೀಡಿದ್ದಕ್ಕಾಗಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದ ನಂತರ, ಹಂಗೇರಿ ಅಧ್ಯಕ್ಷೆ ಕ್ಯಾಟಲಿನ್ ನೊವಾಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ  ಹಂಗೇರಿ ಅಧ್ಯಕ್ಷೆ ರಾಜೀನಾಮೆ  ಕ್ಯಾಟಲಿನ್ ನೊವಾಕ್  child sexual abuse case  Hungary president resigns
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿಗೆ ಕ್ಷಮಾದಾನ: ಹಂಗೇರಿ ಅಧ್ಯಕ್ಷೆ ಕ್ಯಾಟಲಿನ್ ನೊವಾಕ್ ರಾಜೀನಾಮೆ

ಬುಡಾಪೆಸ್ಟ್(ಹಂಗೇರಿ):ಹಂಗೇರಿ ದೇಶದ ಅಧ್ಯಕ್ಷೆ ಕ್ಯಾಟಲಿನ್ ನೊವಾಕ್(46) ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಅಪರಾಧಿಗೆ ಕ್ಯಾಟಲಿನ್ ನೊವಾಕ್ ಕ್ಷಮಾದಾನ ನೀಡಿದ್ದರು. ಈ ವಿಚಾರಕ್ಕೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಕ್ಯಾಟಲಿನ್ ನೊವಾಕ್ ತಾವು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾರೆ. ನೊಂದ ಸಂತ್ರಸ್ತರಲ್ಲಿ ಕ್ಷಮೆ ಯಾಚಿಸಿದ್ದಾರೆ. ಸಂತ್ರಸ್ತರ ಪರವಾಗಿ ಸದಾ ಇರುವುದಾಗಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ಮಕ್ಕಳ ನಿರ್ವಾಹಕರು ಎಸಗಿರುವ ಲೈಂಗಿಕ ದೌರ್ಜನ್ಯವನ್ನು ಮಕ್ಕಳ ಗೃಹದ ಉಪನಿರ್ದೇಶಕರು ಮುಚ್ಚಿಹಾಕಲು ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ಆತನನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿತ್ತು. ಕಳೆದ ಏಪ್ರಿಲ್‌ನಲ್ಲಿ ಪೋಪ್ ಫ್ರಾನ್ಸಿಸ್ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಯಾಟಲಿನ್ ನೊವಾಕ್, ಅಪರಾಧಿಗೆ ಕ್ಷಮಾದಾನ ನೀಡಿದ್ದರು. ಈ ವಿಷಯವನ್ನು ಇತ್ತೀಚೆಗೆ ಸುದ್ದಿಸಂಸ್ಥೆಯೊಂದು ಬೆಳಕಿಗೆ ತಂದಿತ್ತು. ಅಂದಿನಿಂದ ವಿಪಕ್ಷಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದವು.

ವಿರೋಧ ಪಕ್ಷಗಳ ನಾಯಕರಿಂದ ಪ್ರತಿಭಟನೆ

ಶುಕ್ರವಾರ ಸಂಜೆಯಿಂದಲೇ ಪ್ರತಿಪಕ್ಷಗಳು ರಾಷ್ಟ್ರಪತಿ ಭವನದ ಮುಂದೆ ಭಾರೀ ಪ್ರಮಾಣದ ಪ್ರತಿಭಟನೆ ಆರಂಭಿಸಿದ್ದವು. ಕಥಾರ್ ಪ್ರವಾಸಕ್ಕೆ ತೆರಳಿದ್ದ ನೊವಾಕ್, ಶನಿವಾರ ಸಂಜೆ ತರಾತುರಿಯಲ್ಲಿ ಬುಡಾಪೆಸ್ಟ್‌ಗೆ ಮರಳಿ, ಕೂಡಲೇ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿಗೆ ಕ್ಷಮಾದಾನ ನೀಡಿದ ನಿರ್ಧಾರ ಮತ್ತು ಅದರ ಬಗ್ಗೆ ಸರಿಯಾದ ವಿವರಣೆ ನೀಡಲು ಸಾಧ್ಯವಾಗದ ಕಾರಣ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಬಳಿಕ ಪ್ರತಿಕ್ರಿಯಿಸಿದ ಕ್ಯಾಟಲಿನ್ ನೊವಾಕ್, ''ಸಂತ್ರಸ್ತರ ಪರವಾಗಿ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ'' ಎಂದು ತಿಳಿಸಿದ್ದಾರೆ. ಈ ಬಗ್ಗೆ ಫಿಡೆಸ್‌ನ ಸಂಸದೀಯ ನಿಯೋಗದ ಮುಖ್ಯಸ್ಥ ಮಾಟೆ ಕೊಕ್ಸಿಸ್ ಶನಿವಾರ ಹೇಳಿಕೆ ನೀಡಿದ್ದು, ''ಕ್ಯಾಟಲಿನ್ ನೊವಾಕ್ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ಯಾಟಲಿನ್ ನೊವಾಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಲಸಕ್ಕೆ ಪಕ್ಷ ಸಮ್ಮತಿಸಿದೆ'' ಎಂದು ಹೇಳಿದರು.

ಕ್ಯಾಟಲಿನ್ ನೊವಾಕ್ ಹಂಗೇರಿ ದೇಶದ ಇತಿಹಾಸದಲ್ಲಿ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಇದರ ಜೊತೆಗೆ ಈ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಖ್ಯಾತಿಯನ್ನೂ ಗಳಿಸಿದ್ದರು.

ಇದನ್ನೂ ಓದಿ:ಪಾಕಿಸ್ತಾನ: ಸಮ್ಮಿಶ್ರ ಸರ್ಕಾರ ರಚಿಸುವ ನವಾಜ್ ಷರೀಫ್‌ ಕರೆಗೆ ಸೇನೆ ಬೆಂಬಲ

Last Updated :Feb 11, 2024, 2:27 PM IST

ABOUT THE AUTHOR

...view details