ಕರ್ನಾಟಕ

karnataka

ರಾಯಚೂರಲ್ಲಿ ಏಮ್ಸ್ ನ್ಯಾಯ ಸಮ್ಮತವಾಗಿ ಸ್ಥಾಪನೆಯಾಗಬೇಕು: ನಿವೃತ್ತಿ ನ್ಯಾ. ಶಿವರಾಜ ಪಾಟೀಲ್

By ETV Bharat Karnataka Team

Published : Nov 20, 2023, 11:41 AM IST

Updated : Nov 20, 2023, 1:50 PM IST

ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ನ್ಯಾಯ ಸಮ್ಮತವಾಗಿ ಸ್ಥಾಪನೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌‌ನ ನಿವೃತ್ತಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಆಗ್ರಹಿಸಿದರು.

AIIMS should be established in Raichur district
ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ನ್ಯಾಯ ಸಮ್ಮತವಾಗಿ ಸ್ಥಾಪಿಸಬೇಕು: ನಿವೃತ್ತಿ ನ್ಯಾ. ಶಿವರಾಜ ವಿ. ಪಾಟೀಲ್

ರಾಯಚೂರು:ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಏಮ್ಸ್​ ಸ್ಥಾಪನೆ ಆಗಬೇಕೆಂಬುದು ಬಹುದಿನಗಳ ಕನಸಾಗಿದೆ. ''ಜಿಲ್ಲೆಯಲ್ಲಿ ಏಮ್ಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನ್ಯಾಯ ಸಮ್ಮತವಾಗಿ ಸ್ಥಾಪನೆಯಾಗಬೇಕು'' ಎಂದು ಸುಪ್ರೀಂ ಕೋರ್ಟ್‌‌ನ ನಿವೃತ್ತಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಒತ್ತಾಯಿಸಿದರು.

ನಗರದ ಕೃಷಿ ವಿವಿ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ''ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಹೊಸಪೇಟೆ ಹಾಗೂ ರಾಯಚೂರು ಜಿಲ್ಲೆಗಳನ್ನು ಹಿಂದುಳಿದ ಪ್ರದೇಶವಾಗಿದ್ದು, ಇದನ್ನು ಹೈದರಾಬಾದ್- ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿರುವುದಕ್ಕೆ ಖುಷಿಯಿದೆ. ಕಲ್ಯಾಣ ಕರ್ನಾಟಕ ಹೆಸರನ್ನು ಮರುನಾಮಕರಣ ಮಾಡಿದ್ರೆ ಸಾಕಾಗುತ್ತದೆಯೇ? ಈ ಪ್ರದೇಶ ಕಲ್ಯಾಣವಾದಾಗ ಮಾತ್ರ ಆ ಹೆಸರಿಗೆ ನಿಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು'' ಎಂದರು.

''ಕಲಬುರಗಿ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಯಾಗಿರುವುದು ಖುಷಿ ವಿಚಾರ. ಜೊತೆಗೆ ರಾಜ್ಯದ ಆಯಾ ಭಾಗದ ಜನರಿಗೆ ಅನುಕೂಲಕರವಾದ ಆಸ್ಪತ್ರೆಗಳಿವೆ. ರಾಯಚೂರು ಜಿಲ್ಲೆಯ ಜನರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್, ಬೆಂಗಳೂರು ಸೇರಿದಂತೆ ಬೇರೆ ಕಡೆ ತೆರಳಬೇಕಾಗಿದೆ. ಹೀಗಾಗಿ ನಮ್ಮ ಜಿಲ್ಲೆಯಲ್ಲಿ ನ್ಯಾಯ ಸಮ್ಮತವಾಗಿ ಏಮ್ಸ್ ಸ್ಥಾಪನೆ ಮಾಡುವುದು ಸೂಕ್ತ. ಇದಕ್ಕೆ ಜಿಲ್ಲೆಯ ನಿವಾಸಿಯಾಗಿ ನಾನು ಒತ್ತಾಯಿಸುತ್ತೇನೆ'' ಎಂದರು.

''ನಮ್ಮ ಭಾಗದ ಜನರ ಆರೋಗ್ಯ ಸುಧಾರಣೆಯಾಗುವ ನಿಟ್ಟಿನಲ್ಲಿ ಏಮ್ಸ್ ಸ್ಥಾಪನೆ ಮಾಡುವ ವಿಚಾರಕ್ಕೆ ಚುನಾಯಿತ ಪ್ರತಿನಿಧಿಗಳು ಗಮನ ಹರಿಸಬೇಕು. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಯಾವುದೇ ಕಡೆಯಲ್ಲಿಯಾದರೂ ಸ್ಥಾಪನೆ ಮಾಡಿದರೂ ನಮ್ಮ ಸಹಮತವಿದೆ'' ಎಂದು ತಿಳಿಸಿದರು.

ಗಬ್ಬೂರು ಕ್ಷೇತ್ರದ ಬೂದಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಣ್ಣನೀರಾವರಿ ಖಾತೆ ಸಚಿವ ಎನ್ ಎಸ್ ಬೋಸರಾಜು, ಸಂಸದ ರಾಜಾ ಅಮರೇಶ್ವರ ನಾಯಕ, ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಸೇರಿದಂತೆ ಇತರರು ಇದ್ದರು.

ಏಮ್ಸ್ ಹೋರಾಟ ಸಮಿತಿಯಿಂದ ಮುಂದುವರೆದ ಹೋರಾಟ:ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ, ಏಮ್ಸ್ ಹೋರಾಟ ಸಮಿತಿಯಿಂದ 555ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ನಗರದ ಮಹಾತ್ಮ‌ ಗಾಂಧಿ ಪುತ್ಥಳಿ ಬಳಿ ಹೋರಾಟ ನಡೆಸಲಾಗುತ್ತಿದೆ‌.

ಇದನ್ನೂ ಓದಿ:ರಾಮನಗರ: ದರ್ಗಾದಲ್ಲಿ ವಿತರಿಸಿದ ಸಿಹಿ ಪ್ರಸಾದ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Last Updated :Nov 20, 2023, 1:50 PM IST

ABOUT THE AUTHOR

...view details