ಕರ್ನಾಟಕ

karnataka

Bitcoin scam: ಬಿಟ್ ಕಾಯಿನ್ ಹಗರಣ ಮರು ತನಿಖೆ ಮಾಡುತ್ತೇವೆ- ಗೃಹ ಸಚಿವ ಜಿ.ಪರಮೇಶ್ವರ್

By

Published : Jun 14, 2023, 4:44 PM IST

Updated : Jun 14, 2023, 5:34 PM IST

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ ವಿಚಾರ, ಬಿಟ್‌ ಕಾಯಿನ್ ಹಗರಣದ ತನಿಖೆಯ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮಾತನಾಡಿದ್ದಾರೆ.

Home Minister Dr. G. Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು. ಬಿಜೆಪಿಯವರು ಈಗಲೇ ಕುಣಿದಾಡ್ತಿದ್ದಾರೆ. ನಮ್ಮ ಸರ್ಕಾರ ಬಂದು 20 ದಿನವಾಗಿದೆ ಅಷ್ಟೇ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು ಎಂದರು.

ಸುರ್ಜೇವಾಲ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಅದು ಅಧಿಕೃತ ಸಭೆ ಆಗಿರಲಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದರು. ಆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಅಷ್ಟೇ. ವಿಧಾನಸೌಧದೊಳಗೆ ಸಭೆ ಮಾಡಿದ್ರೆ ತಪ್ಪು. ಖಾಸಗಿ ಹೋಟೆಲ್​ನಲ್ಲಿ ಡಿ‌.ಕೆ. ಶಿವಕುಮಾರ್ ಸಭೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸುರ್ಜೇವಾಲ ಬಂದಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಬೇಕಿದ್ದರೆ ಬಿಜೆಪಿಯವರು ದೂರು‌ ನೀಡಲಿ. ರಾಜಭವನದವರು ಪರಿಶೀಲನೆ ಮಾಡ್ತಾರೆ ಎಂದು ಹೇಳಿದರು.

ದಲಿತ ಸಿಎಂ ವಿಚಾರದಲ್ಲಿ ನೀವು ಬಹಳ ಡೀಪ್ ಆಗಿ ಹೋಗುವ ಅಗತ್ಯವಿಲ್ಲ. ನಮ್ಮ ಸಮುದಾಯಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮಾತನಾಡಿದ್ದೇನೆ. ನಾಳೆಯೇ ಹೋಗಿ ಸಿಎಂ ಆಗಬೇಕು ಅಂತ ನಾವು ಕೇಳಲ್ಲ. ಯಾವುದೇ ಗೊಂದಲದ ಮಾತುಗಳು ಅದರಲ್ಲಿಲ್ಲ ಎಂದು ತಿಳಿಸಿದರು.

ರಾಘವೇಂದ್ರ ಔರಾದ್ಕರ್ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿಯ ಸುಮಾರು ಅಂಶಗಳು ಜಾರಿಯಾಗಿವೆ. ಸಂಬಳ ಹಾಗೂ ಬಡ್ತಿ ಬಗ್ಗೆ ಮುಂದಿನ ದಿನದಗಳಲ್ಲಿ ನಿರ್ಧಾರ ಮಾಡೋಣ. ಪ್ರಮೋಷನ್ ಬಂದಿದೆ ಎಂದಾಗ ನಿಲ್ಲಿಸಬಾರದು ಎಂದು ಹೇಳಿದ್ದೇನೆ ಎಂದರು. ಸಚಿವರನ್ನು ದೆಹಲಿಗೆ ಕರೆದ ವಿಚಾರಕ್ಕೆ, ಸೂಚನೆ ಇನ್ನೂ ಬಂದಿಲ್ಲ. ಒಂದು ವೇಳೆ ಕರೆದರೆ ಒಳ್ಳೆಯದು. ಯಾವ ರೀತಿ ಕೆಲಸ ಮಾಡಿದ್ದೇವೆ ಎಂದು ನೋಡುವುದಾದರೆ ಒಳ್ಳೆಯದೇ ಎಂದರು. ಜಾತಿಗಣತಿ ವಿಚಾರದ ಬಗ್ಗೆ ಮಾತನಾಡಿ, ವರದಿ ಹೊರಗಡೆ ಬಂದ ಮೇಲೆ ಚರ್ಚೆ ಆಗಲಿದೆ. ಚರ್ಚೆ ಬಳಿಕ ನೋಡೋಣ ಎಂದು ತಿಳಿಸಿದರು.

ಬಿಟ್​ ಕಾಯಿನ್​ ಪ್ರಕರಣವೇನು?:ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ಬಿಟ್​ ಕಾಯಿನ್​ ಹಗರಣ, 2020 ನವೆಂಬರ್​ನಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ ಎಂಬಾತನನ್ನು ಹಾಗೂ ಆತನ ಸಹಚರರನ್ನು ಡ್ರಗ್ಸ್​ ಕೇಸ್​ ಒಂದರಲ್ಲಿ ಬಂಧಿಸಿದಲ್ಲಿಂದ ಹೆಚ್ಚು ಸೌಂಡ್​ ಮಾಡಲು ಪ್ರಾರಂಭಿಸಿತ್ತು. ಈತ ವಿಚಾರಣೆ ವೇಳೆಯಲ್ಲಿ ಈತ ಸೈಬರ್​ ವಂಚನೆ ಹಾಗೂ ಬಿಟ್​ ಕಾಯಿನ್​ ಅಕ್ರಮ, ಕ್ರಿಪ್ಟೋ ಕರೆನ್ಸಿ ಲೂಟಿ, ಮನಿ ಲಾಂಡರಿಂಗ್​ ಅಪರಾಧಗಳಲ್ಲಿ ತೊಡಗಿಕೊಂಡಿರುವುದು ಬಯಲಾಗಿತ್ತು.

ಇದೇ ವೇಳೆ ಶ್ರೀಕಿ ಡಾರ್ಕ್​ನೆಟ್​ ಮೂಲಕ ಬಿಟ್​ಕಾಯಿನ್​ ಉಪಯೋಗಿಸಿ ಡ್ರಗ್ಸ್​ ಸಂಗ್ರಹ ಮಾಡಿ ಅದನ್ನು ಹೈ ಪ್ರೊಫೈಲ್​ ಕ್ಲೈಂಟ್​ಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವ ದೂರು ಕೂಡ ಈತನ ಮೇಲೆ ದಾಖಲಾಗಿತ್ತು. 2017ರಲ್ಲಿ ಬಿಟ್​ ಕ್ಲಬ್​ ನೆಟ್​ವರ್ಕ್​ ಸರ್ವರ್​ ಹ್ಯಾಕ್​ ಮಾಡಿ ಅದರಿಂದ 100 ಬಿಟ್​ ಕಾಯಿನ್​ಗಳನ್ನೂ ಎಗರಿಸಿದ್ದನು. 2021 ಫೆಬ್ರುವರಿಯಲ್ಲಿ ಈತನ ವಿರುದ್ಧ ಸಿಸಿಬಿ, ಇಡಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿತ್ತು. ಅಮೆರಿಕದ ಹಣ ವಿನಿಮಯ ಏಜೆನ್ಸಿ, ಬಿಟಿಸಿ ಇ ಡಾಟ್​ ಕಾಮ್​ ಸೇರಿದಮತೆ ಬೇರೆ ಬೇರೆ ಸೈಟ್​ಗಳನ್ನು ಹ್ಯಾಕ್​ ಮಾಡಿ ಕೋಟ್ಯಾಂತರ ರೂಪಾಯಿಗಳನ್ನು ದೋಚಿದ್ದ ಈತನ ವಿರುದ್ಧ ಹಲವು ತನಿಖೆಗಳು ನಡೆದು ಚಾರ್ಜ್​ಶೀಟ್​ ಕೂಡ ಸಲ್ಲಿಕೆಯಾಗಿತ್ತು.

ಯಾವಾಗ 2021 ಅಕ್ಟೋಬರ್​ನಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಬಿಟ್​ ಕಾಯಿನ್​ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದರೋ ಆಗ ಈ ಗಂಭೀರ ಪ್ರಕರಣ ರಾಜಕೀಯ ರೂಪ ಪಡೆಯಿತು. ಅದರ ಜೊತೆಗೆ ಈ ಡ್ರಗ್ಸ್ ಮತ್ತು ಬಿಟ್​ ಕಾಯಿನ್​ ಪ್ರಕರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎನ್ನುವ ಸುದ್ದಿಯೂ ಆಗಿತ್ತು. 2021 ರ ನವೆಂಬರ್​ನಲ್ಲಿ ಈ ಗಂಭೀರ ಪ್ರಕರಣದ ಆರೋಪಿ ಶ್ರೀಕಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದನು.

ನಂತರದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷಗಳ ಹಲವಾರು ನಾಯಕರು ಒಬ್ಬರು ವಿರುದ್ಧ ಒಬ್ಬರು ಆರೋಪ, ಹೇಳಿಕೆಗಳನ್ನು ನೀಡುವ ಮೂಲಕ ಬಿಟ್​ ಕಾಯಿನ್​ ಪ್ರಕರಣ ಹಲವಾರು ಆಯಾಮಗಳಲ್ಲಿ ಪ್ರತಿದಿನ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ನಿನ್ನೆಯಷ್ಟೇ ಮೈಸೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ್ದ ಸಂಸದ ಪ್ರತಾಪ್​ ಸಿಂಹ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳ ಬಂದಿದ್ದ ಬಿಟ್​ ಕಾಯಿನ್​ ಹಗರಣವನ್ನು ಕಾಂಗ್ರೆಸ್​ ನವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಳಸಿಕೊಂಡಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಯಾಕೆ ಅದರ ಬಗ್ಗೆ ಮೌನ ವಹಿಸಿದ್ದಾರೆ, ತನಿಖೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸೈಲೆಂಟ್​ ಆಗಿದ್ದ ಪ್ರಕರಣವನ್ನು ಮತ್ತೆ ಪ್ರಶ್ನೆ ಕೇಳಿ ಕೆದಕಿದ್ದರು.

ಇದನ್ನೂ ಓದಿ:DK Shivakumar: ಪಾವಗಡ ಸೋಲಾರ್ ಪಾರ್ಕ್​ಗೆ ಭೇಟಿ, ರೈತರೊಂದಿಗೆ ಸಂವಾದ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್​

Last Updated :Jun 14, 2023, 5:34 PM IST

ABOUT THE AUTHOR

...view details